ಕರ್ನಾಟಕಪ್ರಮುಖ ಸುದ್ದಿ

ರಾಜ್ಯದ ಹಲವು ಪ್ರವಾಸಿ ತಾಣಗಳು ನೋ ಸೆಲ್ಫಿ ಝೋನ್

ಜನರಲ್ಲಿ ಸೆಲ್ಫಿ ತೆಗೆದುಕೊಳ್ಳುವ ಚಟ ಅತೀಯಾಗುತ್ತಿದ್ದು, ಇದರಿಂದ ಹಲವು ಮಂದಿ ಪ್ರಾಣವನ್ನು ಕೂಡ ಕಳೆದುಕೊಂಡಿದ್ದಾರೆ. ಈ ಬಗ್ಗೆ ರಾಜ್ಯ ಸರಕಾರ ಹೊಸ ನಿಯಮ ರೂಪಿಸಿದ್ದು, ಇನ್ನು ಮುಂದೆ ಹಲವು ಪ್ರವಾಸಿ ತಾಣಗಳಲ್ಲಿ ‘ನೋ ಸೆಲ್ಫಿ ಝೋನ್’ ಎಂಬ ಫಲಕ ಹಾಕಲಿದ್ದು, ಅಲ್ಲಿ ಫೋಟೊ ತೆಗೆಯುವುದನ್ನು ನಿಷೇಧಿಸಲಾಗಿದೆ.

ರಾಜ್ಯದ ಪ್ರವಾಸೋದ್ಯಮ ಇಲಾಖೆ ರಾಜ್ಯದ 400ಕ್ಕೂ ಅಧಿಕ ಪ್ರದೇಶಗಳನ್ನು ‘ನೋ ಸೆಲ್ಫಿ ಝೋನ್’ ಎಂದು ಘೋಷಿಸಿದೆ. ಪ್ರವಾಸಿ ತಾಣಗಳಲ್ಲಿ ಮೊಬೈಲ್ ‍ಫೋನ್‍ನಿಂದ ಸೆಲ್ಫಿ ಪೋಟೊ ತೆಗೆದುಕೊಳ್ಳುವ ವೇಳೆ ಆಯತಪ್ಪಿ ಬಿದ್ದು ಸಾವು ಸಂಭವಿಸುವ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.

ಬೆಂಗಳೂರು ಸಮೀಪದ ನಂದಿಬೆಟ್ಟ, ಚಿಂತಾಮಣಿ ಬೆಟ್ಟ, ಗುಡಿಬಂಡೆ ಬೆಟ್ಟಗಳು ಕೂಡ ನೋ ಸೆಲ್ಫಿ ಝೋನ್ ವಲಯಗಳಾಗಿದ್ದು, ರಾಜ್ಯದ ಕರಾವಳಿ ವಲಯ, ದಕ್ಷಿಣ ಕರ್ನಾಟಕ ಹಾಗೂ ಹೈದರಾಬಾದ್ ಕರ್ನಾಟಕ ಪ್ರದೇಶಗಳಲ್ಲಿ ಸೆಲ್ಫಿ ತೆಗೆದುಕೊಳ್ಳುವುದರಿಂದ ಆಗುತ್ತಿರುವ ಅಪಾಯಗಳ ಕುರಿತಂತೆ ಇಲಾಖೆ ಜಾಗೃತಿ ಅಭಿಯಾನವನ್ನೂ ಆರಂಭಿಸಿದೆ.

ರಾಜ್ಯದ ಜಲಾಶಯಗಳು, ನದಿಗಳು, ಸಮುದ್ರ ತೀರ, ಪ್ರವಾಸಿ ತಾಣಗಳಾಗಿರುವ ಬೆಟ್ಟ-ಗುಡ್ಡಗಳು, ಎತ್ತರದ ಪ್ರದೇಶಗಳಲ್ಲಿರುವ ದೇವಸ್ಥಾನಗಳು, ಟ್ರೆಕ್ಕಿಂಗ್ ತಾಣಗಳಲ್ಲಿ ಸೆಲ್ಫಿ ತೆಗೆಯುವುದರಿಂದ ಅಪಾಯ ಸಂಭವಿಸುವ ಸಾಧ್ಯತೆಗಳು ಹೆಚ್ಚಿದ್ದು, ಅಂತಹ ಕಡೆಗಳಲ್ಲಿ ರಾಜ್ಯ ಸರಕಾರವು ‘ನೋ ಸೆಲ್ಫಿ ಝೋನ್’ ಫಲಕವನ್ನು ಅಳವಡಿಸಲಿದೆ.

ಸೆಲ್ಫಿ ತೆಗೆಯಲು ಸುರಕ್ಷಿತವಾಗಿರುವ ತಾಣಗಳಲ್ಲಿ ಇಲ್ಲಿ ಫೋಟೊ ತೆಗೆಯಬಹುದೆಂದು ಫಲಕಗಳನ್ನು ಅಳವಡಿಸಲೂ ಪ್ರವಾಸೋದ್ಯಮ ಇಲಾಖೆ ಚಿಂತನೆ ನಡೆಸಿದೆ.

Leave a Reply

comments

Related Articles

error: