ಕರ್ನಾಟಕಪ್ರಮುಖ ಸುದ್ದಿ

ಬಂಡಾಯ ಶಾಸಕರಿಗೆ ಬಿಜೆಪಿ ಗಾಳ: ಗುಪ್ತಚರ ಇಲಾಖೆಯಿಂದ ಮುಖ್ಯಮಂತ್ರಿಗೆ ಮಾಹಿತಿ?

ಬೆಂಗಳೂರು (ಮೇ 29): ಸಂಪುಟ ವಿಸ್ತರಣೆಯಾದ ಬಳಿಕ ಆಕಾಂಕ್ಷಿಗಳಿಗೆ ಸಚಿವ ಸ್ಥಾನ ತಪ್ಪಿದರೆ ಕಾಂಗ್ರೆಸ್ ಶಾಸಕರು ಬಂಡಾಯ ಏಳುವ ಸಾಧ್ಯತೆ ಇದ್ದು, ಇಂತಹವರನ್ನು ಸೆಳೆದು ಸರ್ಕಾರ ಬೀಳಿಸಲು ಬಿಜೆಪಿ ತೆರೆಮರೆಯಲ್ಲಿ ಬಿಜೆಪಿ ಪ್ರಯತ್ನ ನಡೆಸುತ್ತಿದೆ ಎಂದು ಗುಪ್ತಚರ ಇಲಾಖೆ ಮುಖ್ಯಮಂತ್ರಿಗಳಿಗೆ ಮಾಹಿತಿ ನೀಡಿದೆ ಎಂದು ತಿಳಿದುಬಂದಿದೆ.

ಕರ್ನಾಟಕದಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿ ಸರ್ಕಾರ ರಚನೆಯಾಗಿದ್ದು ಸಂಪುಟ ರಚನೆ ಮಾತ್ರ ಇನ್ನೂ ಕೂಡ ಕಗ್ಗಂಟಾಗಿಯೇ ಉಳಿದಿದೆ. ಸಚಿವ ಸ್ಥಾನ ವಂಚಿತರಾದರೆ ಕಾಂಗ್ರೆಸ್ ಶಾಸಕರು ಬಿಜೆಪಿ ಸಂಪರ್ಕ ಮಾಡುವ ಸಾಧ್ಯತೆಗಳು ಹೆಚ್ಚಾಗಿವೆ. ಜೆಡಿಎಸ್‌ ಪಕ್ಷದ ಇಬ್ಬರು ಶಾಸಕರೂ ಸಹ ಬಿಜೆಪಿಯನ್ನು ಸಂಪರ್ಕ ಮಾಡುವ ಸಾಧ್ಯತೆ ಇದೆ. ಆದ್ದರಿಂದ ಹೆಚ್ಚು ಜಾಣ್ಮೆಯಿಂದ ಸಚಿವ ಸಂಪುಟವನ್ನು ರಚನೆ ಮಾಡುವ ಸವಾಲು ಜೆಡಿಎಸ್-ಕಾಂಗ್ರೆಸ್ ನಾಯಕರಿಗೆ ಎದುರಾಗಿದೆ.

ಯಲ್ಲಾಪುರ ಶಾಸಕ ಶಿವರಾಮ ಹೆಬ್ಬಾರ್, ಭದ್ರಾವತಿ ಶಾಸಕ ಬಿ.ಕೆ ಸಂಗಮೇಶ್ವರ್, ಶಿವಾನಂದ ಪಾಟೀಲ್, ರಾಜಶೇಖರ್ ಪಾಟೀಲ್ ಹುಮ್ನಾಬಾದ್, ಬಿ.ಸಿ ಪಾಟೀಲ್, ಕಂಪ್ಲಿ ಶಾಸಕ ಗಣೇಶ್, ಆನಂದ ಸಿಂಗ್, ಪ್ರತಾಪ್ ಗೌಡ ಪಾಟೀಲ್ ಸೇರಿದಂತೆ 11 ಕಾಂಗ್ರೆಸ್ ಶಾಸಕರ ಪಟ್ಟಿಯನ್ನು ಗುಪ್ತಚರ ಇಲಾಖೆ ಮುಖ್ಯಮಂತ್ರಿಗಳಿಗೆ ಕೊಟ್ಟಿದೆ ಎನ್ನಲಾಗಿದೆ.

ಅವಕಾಶ ವಂಚಿತರು ಯಾವುದೇ ಘಳಿಗೆಯಲ್ಲಿ ಬೇಕಾದರೂ ಬಿಜೆಪಿ ನಾಯಕ ಬಿ.ಎಸ್. ಯಡಿಯೂರಪ್ಪ ಅವರನ್ನು ಸಂಪರ್ಕಿಸಬಹುದು ಎಂದು ಗುಪ್ತಚರ ಇಲಾಖೆಯು ಹೇಳಿದೆ. ಗುಪ್ತಚರ ಇಲಾಖೆಯು ನೀಡಿದ ಈ ಎಚ್ಚರಿಕೆಯನ್ನು ಸಿಎಂ ಕುಮಾರಸ್ವಾಮಿ ಇದೀಗ ಉಪ ಮುಖ್ಯಮಂತ್ರಿ ಪರಮೇಶ್ವರ್ ಅವರ ಗಮನಕ್ಕೆ ತಂದಿದ್ದಾರೆ. ಆದ್ದರಿಂದ ಸಂಪುಟ ರಚನೆ ಕಗ್ಗಂಟು ಮುಂದಕ್ಕೆ ಹೋಗುವ ಸಾಧ್ಯತೆ ಹೆಚ್ಚಾಗಿದೆ. (ಎನ್.ಬಿ)

Leave a Reply

comments

Related Articles

error: