ಕರ್ನಾಟಕಮೈಸೂರು

ಮೈಸೂರಲ್ಲಿ ತಮಿಳುನಾಡು ವಾಹನಗಳಿಗೆ ಬೆಂಕಿ: 144 ಸೆಕ್ಷನ್ ಜಾರಿ

ತಮಿಳುನಾಡಿನಲ್ಲಿ ಕನ್ನಡಿಗರ ಮೇಲೆ ಹಲ್ಲೆ ವಿರುದ್ಧ ರಾಜ್ಯದಲ್ಲಿ ಕನ್ನಡಿಗರ ಆಕ್ರೋಶ ಭುಗಿಲೆದ್ದಿದ್ದು, ಮೈಸೂರಿನಲ್ಲಿ 144 ಸೆಕ್ಷನ್ ಜಾರಿಯಾಗಿದೆ. ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.

ಮೈಸೂರಿನ ಸೇಂಟ್ ಮೇರಿಸ್ ವೃತ್ತದ ಬಳಿ ತಮಿಳುನಾಡಿನ ಕ್ವಾಲೀಸ್ ವಾಹನವೊಂದಕ್ಕೆ ಉದ್ರಿಕ್ತರು ಬೆಂಕಿ ಹಚ್ಚಿದ್ದಾರೆ. ಸೋಮವಾರ ಮಧ್ಯಾಹ್ನದ ವೇಳೆ ಘಟನೆ ಸಂಭವಿಸಿದ್ದು, ಕೊಳ್ಳೇಗಾಲದಿಂದ ಬರುತ್ತಿದ್ದ ವಾಹನವನ್ನು ಸುತ್ತುವರಿದ ಉದ್ರಿಕ್ತರ ಗುಂಪು ಈ ಕೃತ್ಯ ನಡೆಸಿದೆ.

ಸುದ್ದಿ ತಿಳಿದ ತಕ್ಷಣ ಡಿಸಿಪಿ ಶೇಖರ್ ಅಗ್ನಿಶಾಮಕ ದಳದೊಂದಿಗೆ ಸ್ಥಳಕ್ಕಾಗಮಿಸಿದ್ದರಾದರೂ ಅವರು ಬರುವಷ್ಟರಲ್ಲಿ ವಾಹನ ಹಾನಿಗೊಳಗಾಗಿತ್ತು.

ಮೈಸೂರು-ಬೆಂಗಳೂರು ಹೆದ್ದಾರಿಯಲ್ಲಿಯೂ ತಮಿಳುನಾಡಿಗೆ ಸೇರಿದ ವಾಹನವೊಂದಕ್ಕೆ ಬೆಂಕಿ ಹಚ್ಚಲಾಗಿದೆ.

ಕರ್ನಾಟಕ ರಾಜ್ಯ 12 ಸಾವಿರ ಕ್ಯೂಸೆಕ್ ನೀರನ್ನು ಸೆಪ್ಟೆಂಬರ್ 20 ರ ವರೆಗೆ ತಮಿಳ್ನಾಡಿಗೆ ಬಿಡಬೇಕೆಂದು ಸುಪ್ರೀಂಕೋರ್ಟ್ ಆದೇಶಿಸಿತ್ತು. ಇದನ್ನು ವಿರೋಧಿಸಿ ಕನ್ನಡಪರ ಸಂಘಟನೆಗಳು ಪ್ರತಿಭಟನೆ ನಡೆಸಿದ್ದವು. ಇದೀಗ ತಮಿಳುನಾಡು ವಾಹನಗಳಿಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಲಾಗುತ್ತಿದೆ. ಮೈಸೂರು ಮತ್ತು ಮಂಡ್ಯಗಳಲ್ಲಿ ಪ್ರತಿಭಟನೆಯು ಹಿಂಸಾರೂಪವನ್ನು ತಾಳಿವೆ. ರಾಜ್ಯ ರಸ್ತೆ ಸಾರಿಗೆಯು ಬೆಂಗಳೂರು ಮತ್ತು ಮೈಸೂರು ಬಸ್ ಸಂಚಾರವನ್ನು ಸ್ಥಗಿತಗೊಳಿಸಿದೆ. ‘ಸಿಟಿಟುಡೆ’ಯೊಂದಿಗೆ ಕೆ.ಎಸ್.ಆರ್.ಟಿ.ಸಿ. ಅಧಿಕಾರಿ ಮಹೇಶ್ ಮಾತನಾಡಿ, ಮೈಸೂರು ಬೆಂಗಳೂರು ಬಸ್ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ. ಈ ಕುರಿತು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಮುಂಜಾಗ್ರತಾ ಕ್ರಮವಾಗಿ ಬಸ್ ಸಂಚಾರ ಸ್ಥಗಿತಗೊಳಿಸಲು ತಿಳಿಸಿದ್ದಾರೆ ಎಂದರು.

ಎ.ಪಿ.ಎಂ.ಸಿ. ಬಳಿ ನಿಲ್ಲಿಸಲಾಗಿದ್ದ ತಮಿಳುನಾಡಿನ ಎರಡು ಲಾರಿಗಳಿಗೆ ಕಲ್ಲುತೂರಾಟ ನಡೆಸಿ ಹಾನಿಗೊಳಿಸಲಾಗಿದೆ. ಟೆರೇಶಿಯನ್ ಕಾಲೇಜು ಬಳಿ ಇರುವ ತಮಿಳರ ಅಂಗಡಿಗಳನ್ನು ಮುಚ್ಚಿಸಿ ಅಂಗಡಿಯವರನ್ನು ಥಳಿಸಿದ್ದಾರೆ.

ಮೈಸೂರು ಕನ್ನಡ ವೇದಿಕೆ, ತಮಿಳುನಾಡಿನಲ್ಲಿರುವ ಕನ್ನಡಿಗರಿಗೆ ತೊಂದರೆ ಕೊಟ್ಟರೆ ತಮಿಳುನಾಡು ಸರ್ಕಾರವೇ ನೇರ ಹೊಣೆಯನ್ನು ಹೊರಬೇಕಾಗುತ್ತದೆ ಎಂದು ಎಚ್ಚರಿಸಿದೆ.

ಅಗ್ರಹಾರದಲ್ಲಿರುವ ತಮಿಳರ ಬಟ್ಟೆ ಮಳಿಗೆ, ಸೆಂದಿಲ್ ಕುಮಾರ್ ಟಕ್ಸ್`ಟೈಲ್ ಅನ್ನು ಮುಚ್ಚಿಸಲಾಗಿದೆ. ಮೈಸೂರು ಪೊಲೀಸರ ನಗರದಲ್ಲಿ ಹೆಚ್ಚಿನ ಬಂದೋಬಸ್ತ್ ಏರ್ಪಡಿಸಿದ್ದಾರೆ. ಸುಪ್ರೀಂ ಕೋರ್ಟ್ ನೀಡಿದ ಆದೇಶಕ್ಕೆ ಜನತೆ ರೊಚ್ಚಿಗೆದ್ದಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಶಾಂತಿ ಮತ್ತು ಸೌಹಾರ್ದತೆಯನ್ನು ಕಾಪಾಡುವಂತೆ ರಾಜ್ಯದ ಜನತೆಯಲ್ಲಿ ಮನವಿ ಮಾಡಿದ್ದಾರೆ.

Leave a Reply

comments

Related Articles

error: