ಲೈಫ್ & ಸ್ಟೈಲ್

ಡೆಂಗ್ಯೂ-ಚಿಕುನ್ ಗುನ್ಯಾ ಲಕ್ಷಣಗಳು : ತಡೆಗಟ್ಟುವ ಬಗ್ಗೆ ಇಲ್ಲಿದೆ ಸಲಹೆ ಸೂಚನೆಗಳು

ಮಳೆಗಾಲ ಆರಂಭವಾಯಿತೆಂದರೆ ಸಾಕು ಅದರೊಂದಿಗೆ ಹಲವಾರು ರೋಗಗಳು ದಾಳಿಯಿಡುವುದು ಸಹಜ, ಅದರಂತೆ ಡೆಂಗ್ಯೂ, ಮಲೇರಿಯಾ ಹಾಗೂ ಚಿಕ್ಕೂನ್ ಗುನ್ಯಾದಂತಹ ರೋಗಗಳು ವ್ಯಾಪಕವಾಗಿ ಹರಡುವುದು ಇದೇ ವೇಳೆಯಲ್ಲಿಯೇ. ಇಂತಹ ರೋಗಗಳ ಲಕ್ಷಣ, ನಿಯಂತ್ರಣದ ಬಗ್ಗೆ ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ.ಎಸ್.ಚಿದಂಬರ್ ನೀಡಿದ ಜಾಗೃತಿಯೇನು ಇಲ್ಲಿದೆ ಪೂರ್ಣ ಮಾಹಿತಿ.

ರೋಗ ಲಕ್ಷಣ :  ಡೆಂಗ್ಯೂಜ್ವರದಲ್ಲಿ ತೀವ್ರ ಜ್ವರ, ವಿಪರೀತ ತಲೆನೋವು, ಕಣ್ಣುಗುಡ್ಡೆ ಹಿಂಭಾಗದಲ್ಲಿ ವಿಪರೀತ ನೋವು, ಮಾಂಸಖಂಡ ಮತ್ತು ಕೀಲುಗಳಲ್ಲಿ ವಿಪರೀತ ನೋವು ಕಾಣಿಸಿಕೊಳ್ಳುವುದು, ತೀವ್ರ ಸ್ಥಿತಿಯಲ್ಲಿ ಬಾಯಿ, ಮೂಗು ಮತ್ತು ವಸಡುಗಳಿಂದ ರಕ್ತಸ್ರಾವ ಹಾಗೂ ಚರ್ಮದ ಮೇಲೆ ಅಲ್ಲಲ್ಲಿ ರಕ್ತಸ್ರಾವದ ಗುರುತುಗಳು ಕಾಣಿಸಿಕೊಳ್ಳುತ್ತವೆ. ಇದು ಮಾರಣಾಂತಿಕವಾಗಬಹುದು.

ಚಿಕುಂಗುನ್ಯಾದಲ್ಲಿ ಇದ್ದಕ್ಕಿದ್ದಂತೆ ಸಾಧಾರಣದಿಂದ ತೀವ್ರ ಜ್ವರ, ಕಣ್ಣುಗಳು ಕೆಂಪಾಗುವಿಕೆ, ಸ್ನಾಯು ನೋವು, ಕೀಲುಗಳಲ್ಲಿ ಅಸಾಧ್ಯ ನೋವಿನಿಂದ ಕೈಕಾಲುಗಳನ್ನು ಆಡಿಸಲು ಕಷ್ಟವಾಗುವುದು ಹಾಗೂ ಜಡತ್ವ ಹಾಗೂ ಕೆಲವರಲ್ಲಿ ಕೀಲುಗಳ ಬಾವು ಕಾಣಿಸಿಕೊಳ್ಳುವುದು. ಆದರೆ ಇದು ಮಾರಣಾಂತಿಕವಲ್ಲ.

ಈಡಿಸ್ ಈಜಿಪ್ಟೈ ಸೊಳ್ಳೆಗಳು ಸ್ವಚ್ಛ ನೀರಿನಲ್ಲಿ ಅಂದರೆ ಮನೆಯ ಒಳಗೆ ಹಾಗೂ ಹೊರಗೆ ನೀರನ್ನು ಶೇಖರಿಸುವ ಸಿಮೆಂಟ್ ತೊಟ್ಟಿ, ಮಣ್ಣಿನ ಮಡಿಕೆ, ಉಪಯೋಗಿಸದ ಒರಳು ಕಲ್ಲು, ಏರ್‌ಕೂಲರ್‌ಗಳು, ಹೂವಿನ ಕುಂಡಗಳ ತಟ್ಟೆಗಳು, ಬಳಸದ ಟೈರ್‌ಗಳು, ಎಳನೀರು ಚಿಪ್ಪುಗಳು, ಒಡೆದ ಬಾಟಲ್‌ಗಳು, ಘನತ್ಯಾಜ್ಯ ವಸ್ತುಗಳು ಮುಂತಾದ ನೀರಿನ ಶೇಖರಣೆಗಳಲ್ಲಿ ಉತ್ಪತ್ತಿಯಾಗುವುದರಿಂದ ನೀರು ನಿಲ್ಲದಂತೆ ಸಾರ್ವಜನಿಕರು ಎಚ್ಚರ ವಹಿಸಬೇಕೆಂದು ಅವರು ತಿಳಿಸಿದರು.

ಆರೋಗ್ಯ ಇಲಾಖೆ ವತಿಯಿಂದ ಮನೆ ಮನೆಗೆ ಭೇಟಿ ನೀಡಿ ಈಡಿಸ್ ಲಾರ್ವ ಸಮೀಕ್ಷೆ ಕಾರ‍್ಯವನ್ನು ನಿರಂತರವಾಗಿ ಮಾಡಲಾಗುತ್ತಿದೆ. ಸಂಶಯಾಸ್ಪದ ಡೆಂಗ್ಯೂ ಮತ್ತು ಚಿಕುಂಗುನ್ಯಾ ಜ್ವರ ಪ್ರಕರಣಗಳಿಂದ ರಕ್ತ ಮಾದರಿ ಪರೀಕ್ಷೆಯನ್ನು ನಮ್ಮ ಸೆಂಟರ್ ಸರ್ವೇಲೆನ್ಸ್ ಪ್ರಯೋಗಾಲಯದಲ್ಲಿ ಉಚಿತವಾಗಿ ಪರೀಕ್ಷಿಸಲಾಗುತ್ತಿದೆ.

ಡೆಂಗ್ಯೂ ಜ್ವರ ಪ್ರಕರಣಗಳು ಇತ್ತೀಚಿನ ದಿನಗಳಲ್ಲಿ ಹೆಚ್ಚು ಕಂಡು ಬರುತ್ತಿದ್ದರೂ ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾ ಕಚೇರಿ ವತಿಯಿಂದ ತೆಗೆದುಕೊಳ್ಳಲಾಗುತ್ತಿರುವ ಕ್ರಮಗಳಿಂದ ಕಳೆದ ವರ್ಷಗಳಲ್ಲಿ ಇದ್ದ ಮರಣ ಸಂಖ್ಯೆ ಪ್ರಮಾಣ ಶೇಕಡಾ 20ರಿಂದ 0.03ಗೆ ಇಳಿದಿದೆ. ಪ್ರಸಕ್ತ ಸಾಲಿನಲ್ಲಿ ಜನವರಿಯಿಂದ ಇಲ್ಲಿಯವರೆಗೆ 12 ಡೆಂಗ್ಯೂ ಪ್ರಕರಣಗಳು ದಾಖಲಾಗಿದ್ದು, ಇಲ್ಲಿಯವರೆಗೂ ಒಂದು ಸಾವಿನ ಪ್ರಕರಣ ದಾಖಲಾಗಿಲ್ಲ ಎಂದು ಅವರು ತಿಳಿಸಿದರು.

ಹಾಗಾಗಿ ಇಲಾಖೆಯಿಂದ ಹಮ್ಮಿಕೊಂಡ ಸೊಳ್ಳೆ ನಿಯಂತ್ರನ ಕ್ರಮಗಳಿಗೆ ಸಾರ್ವಜನಿಕರು ಸಹಕಾರ ನೀಡಬೇಕೆಂದು ಅವರು ಡಾ.ಚಿದಂಬರಂ ಮನವಿ ಮಾಡಿದರು. (ವರದಿ : ಕೆ.ಎಂ.ಆರ್)

Leave a Reply

comments

Related Articles

error: