ಮೈಸೂರು

ಅತಿಯಾದ ಆತ್ಮ ವಿಶ್ವಾಸವೇ ಸೋಲಿಗೆ ಮುಖ್ಯ ಕಾರಣ : ಆರ್.ಧೃವನಾರಾಯಣ್

ಮೈಸೂರು,ಮೇ.30:-  ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಕಳಲೆ ಎನ್.ಕೇಶವಮೂರ್ತಿ ಪರಾಭವಗೊಂಡಿರುವುದಕ್ಕೆ ಅತಿಯಾದ ಆತ್ಮ ವಿಶ್ವಾಸವೇ ಮುಖ್ಯ ಕಾರಣವಾಗಿದೆ ಎಂದು ಸಂಸದ ಆರ್.ಧೃವನಾರಾಯಣ್ ತಿಳಿಸಿದ್ದಾರೆ.

ನಂಜನಗೂಡಿನ ಊಟಿ ರಸ್ತೆಯಲ್ಲಿರುವ ಯಾತ್ರಿ ಭವನದಲ್ಲಿ ನಿನ್ನೆ ನಡೆದ ಮತದಾರರರಿಗೆ ಕೃತಜ್ಞತೆ ಹಾಗೂ ಆತ್ಮಾವಲೋಕನ ಸಭೆಯಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು.ಚುನಾವಣೆಯಲ್ಲಿ ಸೋಲು ಗೆಲುವು ಸರ್ವೆಸಾಮಾನ್ಯ ಸೋಲನ್ನು ಸವಾಲಾಗಿ ಸ್ಪೀಕರಿಸಿ, ಹತಾಶೆ, ಉದ್ವೇಗಕ್ಕೊಳಗಾಗದೇ ಮುಂದೆ ಬರುವ ವಿಧಾನ ಪರಿಷತ್, ನಗರಸಭೆ, ಲೋಕಸಭೆ ಚುನಾವಣೆಗೆ ಸಂಘಟಿತರಾಗಿ ಹೋರಾಟ ಮಾಡುವಂತೆ ಕಾರ್ಯಕರ್ತರಿಗೆ ಕಿವಿಮಾತು ಹೇಳಿದರು. ಚುನಾವಣೆ ಪ್ರಾರಂಭ, ಪ್ರತಿ ಹಂತದಲ್ಲೂ ಎಲ್ಲಾ ಕಾರ್ಯಕ್ರಮಗಳನ್ನು ಮಾಡಿದ್ದರೂ ಮೂರು ನಾಲ್ಕು ದಿನದಲ್ಲಿ ಎಡವಟ್ಟಾಯಿತು. ನಾವು ಚುನಾವಣೆಯಲ್ಲಿ ನಮ್ಮ ಅಭ್ಯರ್ಥಿ, ರಾಜ್ಯದಲ್ಲಿ ಸಿದ್ದರಾಮಯ್ಯನವರು ಮಾಡಿದ ಅಭಿವೃದ್ಧಿ ಕೆಲಸಗಳಲ್ಲದೇ ಕ್ಷೇತ್ರದಲ್ಲಿ ಒಂದೂವರೆ ವರ್ಷದಲ್ಲಿ ಸಾವಿರಾರು ಕೋಟಿ ಅಭಿವೃದ್ದಿ ಕೆಲಸಗಳನ್ನು ಮಾಡಿದ್ದರೂ ನಿರೀಕ್ಷೆಗೆ ತಕ್ಕಂತೆ ಮತ ಬರಲಿಲ್ಲ,  ಕಳಲೆ ಕೇಶವಮೂರ್ತಿ ಅಪ್ರಮಾಣಿಕರೇ, 11 ತಿಂಗಳಲ್ಲಿ ಜನರಲ್ಲಿ ಸ್ಪಂದಿಸಲಿಲ್ಲವೇ ಎಂದು ಪ್ರಶ್ನಿಸಿದ ಅವರು ಎಲ್ಲಾ ಮಾಡಿದ್ದರೂ ಕೆಲವು ಸಮಯ ಸನ್ನಿವೇಶಕ್ಕೆ ತಕ್ಕಂತೆ ಚುನಾವಣೆಗಳಲ್ಲಿ ಏರುಪೇರಾಗುತ್ತದೆ. ಮುಂದಿನ ಚುನಾವಣೆಗಳ ಲೆಕ್ಕಾಚಾರ ಬೇರೆ ಆಗಿರುತ್ತದೆ. ಧೃತಿಗೆಡದೆ ಮುಂದಿನ ಹೆಜ್ಜೆ ಇಡೋಣ. ಜನಕ್ಕೆ ಮತ್ತೆ ತಪ್ಪಿನ ಅರಿವಾಗುತ್ತದೆ. ರಾಜ್ಯದಲ್ಲಿ ಸ್ಥಾನಗಳಿಕೆಯಲ್ಲಿ ಕಾಂಗ್ರೆಸ್ ಕಡಿಮೆಯಾಗಿದ್ದರೂ ರಾಜ್ಯದ ಶೇ 38 ಮತದಾರರು ಕಾಂಗ್ರೆಸ್ ಬೆಂಬಲಿಸಿದ್ದಾರೆ ಎಂದರು.

ಮಾಜಿ ಶಾಸಕ ಕಳಲೆ ಎನ್ ಕೇಶವಮೂರ್ತಿ ಮಾತನಾಡಿ, ಕಳೆದ ಚುನಾವಣೆಯಲ್ಲಿ ಸೋಲಿನ ಹೊಣೆಯನ್ನು ನಾನೇ ಹೋರುತ್ತೇನೆ. ಈ ಚುನಾವಣೆಯಲ್ಲಿ ಮತದಾರರು ನನಗೆ 65,551 ಮತ ನೀಡಿದ್ದಾರೆ. ಅವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ಈಗಾಗಲೇ ಸೋಲಿನ ಬಗ್ಗೆ ಸಾಕಷ್ಟು ಚರ್ಚೆಯಾಗಿದೆ. ಜಿಲ್ಲಾ ಪಂಚಾಯಿತಿ ವ್ಯಾಪ್ತಿಯಲ್ಲಿ ನಾಯಕತ್ವವನ್ನು ನೀಡಿದ್ದನ್ನು ಪ್ರಸ್ತಾಪಿಸಿ, ಮುಂಬರುವ ಚುನಾವಣೆಯಲ್ಲಿ ಗ್ರಾಮ ಪಂಚಾಯಿತಿಯಿಂದ ಸಂಘಟಿಸಲಾಗುವುದು. ಯಾರೂ ಎದೆಗುಂದದೆ ಮುಂದೆ ಸಾಗೋಣ ಎಂದರು.

ಜಿಲ್ಲಾ ಕಾಂಗ್ರೇಸ್ ಜಿಲ್ಲಾಧ್ಯಕ್ಷ ವಿಜಯ್ ಕುಮಾರ್, ಜಿ.ಪಂ ಸದಸ್ಯರಾದ ಲತಾಸಿದ್ದಶೆಟ್ಟಿ, ಪುಷ್ಪ, ಟಿ.ಎ.ಪಿ.ಸಿ.ಎಂ.ಎಸ್ ಅಧ್ಯಕ್ಷ ಕುರಹಟ್ಟಿ ಮಹೇಶ್,ಉಪಾಧ್ಯಕ್ಷ ವಿಜಯ್ ಕುಮಾರ್, ನಗರಸಭಾ ಅಧ್ಯಕ್ಷೆ ಪುಷ್ಪಲತಾ, ಉಪಾಧ್ಯಕ್ಷ ಪ್ರದೀಪ್, ತಾ.ಪಂ ಸದಸ್ಯರಾದ ಹೆಚ್.ಎಸ್ ಮೂಗಶೆಟ್ಟಿ, ಮಹೇಂದ್ರ, ಜಿಲ್ಲಾ ಹಿಂದುಳಿದ ವರ್ಗದ ಅದ್ಯಕ್ಷ ಕೆ,ಮಾರುತಿ,  ಮತ್ತಿತರರು ಉಪಸ್ಥಿತರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: