ಮೈಸೂರು

ಮಹಿಳೆಯ ಸರ ಕಸಿಯಲು ಮಸಲತ್ತು ನಡೆಸಿದಾತ ಪೊಲೀಸರ ಅತಿಥಿ

ಮೈಸೂರು,ಮೇ.30:- ಮಹಿಳೆಯ ಚಿನ್ನದ ಸರ ಲಪಟಾಯಿಸಲು ಪ್ರಯತ್ನಿಸಿದ ಕಳ್ಳನೀಗ ಪೊಲೀಸ್ ಅತಿಥಿಯಾದ ಘಟನೆ ನಗರದ ಕೆ.ಆರ್.ಆಸ್ಪತ್ರೆಯ ಮುಖ್ಯದ್ವಾರದಲ್ಲಿ ನಡೆದಿದೆ.

ಇಂದು ಬೆಳ್ಳಂಬೆಳಿಗ್ಗೆ ಸರಗಳ್ಳ ತನ್ನ ಕೈಚಳಕ ತೋರಿಸಲು ಯತ್ನಿಸಿ ಗೂಸಾ ತಿಂದು ಸಿಕ್ಕಿಬಿದ್ದಿದ್ದಾನೆ.ಕೆ.ಆರ್.ಆಸ್ಪತ್ರೆಯ ಮುಖ್ಯದ್ವಾರದಲ್ಲಿ ಘಟನೆ ನಡೆದಿದ್ದು, ಮಹಿಳೆಯೊಬ್ಬರು ಆಸ್ಪತ್ರೆಗೆ ಚಿಕಿತ್ಸೆಗಾಗಿ ಬಂದು ವಾಪಸ್ ತೆರಳುತ್ತಿದ್ದ ವೇಳೆ ಏಕಾ ಏಕಿ ಬಂದ ಅಪರಿಚಿತ ವ್ಯಕ್ತಿ ಕುತ್ತಿಗೆಗೆ ಕೈ ಹಾಕಿದ್ದಾನೆ.ಹುಷಾರಿಲ್ಲದ ಮಗುವನ್ನು ಎತ್ತಿಕೊಳ್ಳುವ ಅವಸರದಲ್ಲಿದ್ದ  ಮಹಿಳೆಯ ಕುತ್ತಿಗೆಗೆ ಕೈ ಹಾಕಿದ ಚೋರನ ಮಸಲತ್ತು ಅಲ್ಲಿ ನಡೆಯಲಿಲ್ಲ. ಕೂಡಲೇ ಹುಷಾರಾದ ಮಹಿಳೆ ಚಿನ್ನದ ಸರವನ್ನು ಬಿಗಿಯಾಗಿ ಹಿಡಿದುಕೊಂಡಿದ್ದಾಳೆ.ಇಬ್ಬರೂ ಎಳೆದಾಡಿದ ರಭಸಕ್ಕೆ ಮಾಂಗಲ್ಯ ಸರ ತುಂಡಾಗಿದೆ. ಜನನಿಬಿಡ ಪ್ರದೇಶದಲ್ಲೇ ಕಳ್ಳನ ಕೈಚಳಕ ಸಾರ್ವಜನಿಕರನ್ನು ದಂಗಾಗಿಸಿದೆ.  ಸಿಕ್ಕಿಬಿದ್ದ ಕಳ್ಳನಿಗೆ ಸಕ್ಕತ್ತಾಗೇ ಧರ್ಮದೇಟು ಬಿದ್ದಿದೆ. ವಿಷಯ ತಿಳಿಯುತ್ತಿದ್ದಂತೆ  ಮಂಡಿ ಪೊಲೀಸ್ ರು ಸ್ಥಳಕ್ಕೆ ಆಗಮಿಸಿ ಸರಗಳ್ಳನನ್ನು ಸಾರ್ವಜನಿಕರಿಂದ ತಪ್ಪಿಸಿ ಠಾಣೆಗೆ ಕರೆದೊಯ್ದಿದ್ದಾರೆ. ಹಾಡು ಹಗಲೇ ಇಂತಹ ಕೃತ್ಯಗಳಿಗೆ ಕೈ ಹಾಕುತ್ತಿರುವ ದುಷ್ಕರ್ಮಿಗಳ ವರ್ತನೆ ಸಾರ್ವಜನಿಕರಲ್ಲಿ ಆತಂಕ ಸೃಷ್ಟಿಸುತ್ತಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: