ಮೈಸೂರು

ಜೂ.1ರಿಂದ 5 ರವರೆಗೆ ಕರ್ಜನ್ ಪಾರ್ಕ್ ನಲ್ಲಿ ಮಾವು ಮತ್ತು ಹಲಸು ಮೇಳ

ಮೈಸೂರು,ಮೇ.30:- ಮಾವು ಕರ್ನಾಟಕ ರಾಜ್ಯದಲ್ಲಿನ ಒಂದು ಮಹತ್ವ ಪೂರ್ಣ ಹಣ್ಣಿನ ಬೆಳೆ ಇಡೀ ಭಾರತದಲ್ಲಿ ವ್ಯಾಪಕವಾಗಿ ಬೆಳೆಯುವ ಹಣ್ಣುಗಳಲ್ಲಿ ಮಾವಿನ ಹಣ್ಣಿಗೆ ಅಗ್ರಸ್ಥಾನ. ಮಾವಿನ ಹಣ್ಣುಗಳ ಆಕರ್ಷಕ ರೂಪ, ಸ್ವಾದಿಷ್ಟ ರುಚಿ ಹಾಗೂ ಮನಮೋಹಕ ಪರಿಮಳದ ದೆಸೆಯಿಂದಾಗಿ “ಮಾವು ಹಣ್ಣುಗಳ ರಾಜ” ಎಂದು ಕರೆಯುವುದು ವಾಡಿಕೆ.

ಕರ್ನಾಟಕ ರಾಜ್ಯದಲ್ಲಿ ಮಾವಿನ ಬೆಳೆಯನ್ನು ಸುಮಾರು 1.70 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆಸಲಾಗುತ್ತಿದ್ದು, ಸುಮಾರು 7-8 ಲಕ್ಷ ಟನ್ ಗಳಷ್ಟು ಉತ್ಪಾದನೆ ಇರುತ್ತದೆ. ರಾಜ್ಯದಲ್ಲಿ ಮೈಸೂರು, ಕೋಲಾರ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ತುಮಕೂರು, ಚಿಕ್ಕ ಬಳ್ಳಾಪುರ, ಬೆಳಗಾಂ, ಧಾರವಾಡ, ಹಾವೇರಿ, ಶಿವಮೊಗ್ಗ, ಉತ್ತರಕನ್ನಡ ಇತ್ಯಾದಿ ಜಿಲ್ಲೆಗಳಲ್ಲಿ ಬೆಳೆಯಲಾಗುತ್ತಿದೆ. ಇತ್ತೀಚಿನ ದಿನಗಳಲ್ಲಿ ಮಾವಿನ ಹಣ್ಣು ಹೆಚ್ಚು ಲಾಭ ತರುವ ಕಾರಣದಿಂದಾಗಿ ಹಾಗೂ ಸಂಸ್ಕರಣ ರಂಗದಲ್ಲಿ ಇದರ ಉಪಯೋಗದ ದೆಸೆಯಿಂದಾಗಿ  ಮಾವಿನ ಹಣ್ಣುಗಳ ವಾಣಿಜ್ಯ ಪ್ರಾಮುಖ್ಯತೆ ಹೆಚ್ಚುತ್ತಲಿದೆ.

ಕರ್ನಾಟಕ ರಾಜ್ಯದಲ್ಲಿ ಬೇಸಾಯಕ್ಕೆ ಒಳಪಟ್ಟಿರುವ ಮಾವಿನ ತಳಿಗಳಲ್ಲಿ ಬಾದಾಮಿ, ಬಂಗನಪಲ್ಲಿ, ರಸಪುರಿ, ಮಲ್ಲಿಕಾ, ಸೆಂದೂರ, ಮಲಗೋವಾ, ತೋತಾಪುರಿ, ನೀಲಂ, ಆಮ್ರಪಾಲಿ, ಕೇಸರ್, ದಶೇರಿ ಇತ್ಯಾದಿಗಳು ಮುಖ್ಯವಾದವುಗಳು ಬೆಳೆಯಲಾಗುತ್ತಿದೆ.  ಮೈಸೂರು ಜಿಲ್ಲೆಯಲ್ಲಿ ಪ್ರಮುಖ ತೋಟಗಾರಿಕೆ ಬೆಳೆಗಳನ್ನು ಬೆಳೆಯಲಾಗುತ್ತಿದೆ. ಈ ಜಿಲ್ಲೆಯಲ್ಲಿ ಮಾವು ಒಂದು ಪ್ರಮುಖವಾದ ಹಣ್ಣಿನ ಬೆಳೆಯಾಗಿದ್ದು, ರತ್ನಗಿರಿ ಅಲ್ಫಾನ್ಸೋ, ಬಾದಾಮಿ, ರಸಪುರಿ, ಸೆಂಧೂರ, ಮಲಗೋವಾ, ತೋತಾಪುರಿ, ಮಲ್ಲಿಕಾ, ದಶೇರಿ ಮುಂತಾದ ತಳಿಗಳನ್ನು ಸುಮಾರು 4136 ಹೆಕ್ಟೇರ್ ಪ್ರದೇಶದಲ್ಲಿ ಬೆಳೆಯಲಾಗುತ್ತಿದ್ದು, ವಾರ್ಷಿಕ ಉತ್ಪಾದನೆ 40,117 ಟನ್ ಗಳೆಂದು ಅಂದಾಜಿಸಲಾಗಿದೆ. ಈ  ಬಾರಿ  ಮಾವು ಜೊತೆಗೆ ಹಲಸು ಬೆಳೆಯನ್ನು ಪ್ರೋತ್ಸಾಹಿಸುವ ದೃಷ್ಟಿಯಿಂದ ಮೈಸೂರು, ಚಾಮರಾಜನಗರ, ಮಂಡ್ಯ, ರಾಮನಗರ, ಮತ್ತು ಬೆಂಗಳೂರು ಗ್ರಾಮಾಂತರದ ದೊಡ್ಡಬಳ್ಳಾಪುರ ತಾಲೂಕಿನ ವಿವಿಧ ಭಾಗದಲ್ಲಿ  ಬೆಳೆದ ಹಲಸಿನ ಹಣ್ಣುಗಳ ಮಾರಾಟಕ್ಕೆ ಅವಕಾಶ ಕಲ್ಪಿಸಲಾಗಿದೆ. ಮಾವು ಮತ್ತು ಹಲಸು ಬೆಳೆಯುತ್ತಿರುವ ರೈತರಿಗೆ ಉತ್ತಮ ಬೆಲೆ ಸಿಗುವಂತೆ ಮಾಡಲು ಮೈಸೂರು ನಗರದ  ಅರಮನೆ  ಹತ್ತಿರ ಇರುವ ಕರ್ಜನ್ ಪಾರ್ಕ್ ಆವರಣದಲ್ಲಿ ಜೂ.1 ರಿಂದ 5 ರವರೆಗೆ ಮಾವು ಮತ್ತು ಹಲಸು ಮೇಳ-2018 ಅನ್ನು ಆಯೋಜಿಸಲಾಗಿದೆ. ಈ ಮೇಳದಲ್ಲಿ 12 ವಿವಿಧ ಜಾತಿಯ ಮಾವು ಮತ್ತು ಹಲಸು ತಳಿಗಳನ್ನು ಪ್ರದರ್ಶನಕ್ಕೆ ಇಡಲಾಗುತ್ತಿದೆ. ಈ ಮೇಳವನ್ನು ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ಜೂ.1ರಂದು ಬೆಳಿಗ್ಗೆ 11.30 ಕ್ಕೆ ಉದ್ಘಾಟಿಸಲಿದ್ದಾರೆ.
ಈ ವರ್ಷ ಮಾವು ಮತ್ತು ಹಲಸು ಮೇಳವನ್ನು ತೋಟಗಾರಿಕೆ ಇಲಾಖೆಯು ಮಾವಿನ ಉದ್ಯಮವನ್ನು, ಮಾವು ಬೆಳೆಗಾರರನ್ನು ಹಾಗೂ ನಾಗರೀಕರ/ಗ್ರಾಹಕರ ಆರೋಗ್ಯದ ಹಿತದೃಷ್ಟಿ ಹಾಗೂ  ನಗರದ ಪರಿಸರದ  ಸ್ವಚ್ಛತೆಯನ್ನು ಗಣನೆಗೆ ತೆಗೆದುಕೊಂಡು ಈ ಮೇಳವನ್ನು ವಿಶೇಷವಾಗಿ ಆಯೋಜಿಸಲಾಗಿದೆ.

ನಾಗರೀಕರ ಅಥವಾ ಮೈಸೂರಿನ ಮಾವು ಪ್ರಿಯರ ಆರೋಗ್ಯದ ಹಿತದೃಷ್ಟಿಯಿಂದ ಕ್ಯಾಲ್ಸಿಯಂ ಕಾರ್ಬೈಡ್ ಮುಕ್ತ ನೈಸರ್ಗಿಕವಾಗಿ ಮಾಗಿಸಿದ ಮಾವಿನ ಹಣ್ಣುಗಳನ್ನು  ಮೇಳದಲ್ಲಿ ಉತ್ಕೃಷ್ಟ ದರ್ಜೆಯ ವಿವಿಧ ತಳಿಗಳ ಹಣ್ಣನ್ನು ಗ್ರಾಹಕರಿಗೆ ಹೊರೆಯಾಗದಂತೆ ಉತ್ತಮ ಬೆಲೆಗೆ ತೋಟಗಾರಿಕೆ ಇಲಾಖೆಯ ಬೆಲೆ ನಿಗಧಿ ಕಮಿಟಿ ನಿಗಧಿ ಮಾಡಿದ ಬೆಲೆಯಲ್ಲಿ ಮಾರಾಟ ಮಾಡಲಾಗುತ್ತಿದೆ.
ಮೈಸೂರಿನ ಜನತೆಗೆ ವಿವಿಧ ಮಾವಿನ ಹಾಗೂ ಹಲಸಿನ ತಳಿಗಳನ್ನು ವಸ್ತು ಪ್ರದರ್ಶನದ ಮೂಲಕ ಪರಿಚಯಿಸಲಾಗುವುದು.
ಮೈಸೂರಿನ ನಾಗರೀಕರು ಸ್ವಇಚ್ಚೆಯಿಂದ ಹಣ್ಣನ್ನು ಖರೀದಿಸಲು ಬಟ್ಟೆ ಬ್ಯಾಗ್ ಗಳನ್ನು ತರಬೇಕೆಂದು ಇಲಾಖೆಯು ತಿಳಿಸಿದೆ. ರೈತರು ಕೂಡ ಹಣ್ಣುಗಳನ್ನು ಗ್ರಾಹಕರಿಗೆ ಒದಗಿಸಲು ಪೇಪರ್ ಕಾರ್ಟೂನ್ ಬಾಕ್ಸ್ ಹಾಗೂ ಬಟ್ಟೆ ಬ್ಯಾಗ್ ಗಳನ್ನು ಬಳಸಬೇಕೆಂದು ಮನವಿ ಮಾಡಲಾಗಿದೆ.
ಈ ವರ್ಷವೂ ಸಹ ಅಂದಾಜು 100 ಟನ್ ನೈಸರ್ಗಿಕವಾಗಿ ಮಾಗಿಸಿದ ಹಣ್ಣನ್ನು ಮಾರಾಟ ಮಾಡುವ ಅಂದಾಜು ಇಲಾಖೆಗಿದ್ದು, ನೀಫಾ ವೈರಸ್ ಬಾವುಲಿ ಹಾಗೂ ಇತರೆ ಪಕ್ಷಿಗಳ ಸೋಂಕಿನಿಂದ ಹರಡುವ ಸಂಭವವಿದ್ದು, ರೈತರು ತಮ್ಮ ಮಾವಿನ ತೋಪುಗಳಲ್ಲಿ ಕೊಯ್ಲು ಮಾಡುವಾಗ ಯಾವುದೇ ಪ್ರಾಣಿ ಪಕ್ಷಿಗಳಿಂದ ಕಚ್ಚಲ್ಪಟ್ಟ (ಹಾನಿಗೊಳಗಾದ) ಮಾವಿನ ಹಣ್ಣುಗಳನ್ನು ಮೇಳಕ್ಕೆ ತರಬಾರದಂತೆ ಎಚ್ಚರವಹಿಸಲು ಇಲಾಖೆಯು ಸೂಚಿಸಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: