ಕರ್ನಾಟಕಮನರಂಜನೆ

ಜ್ಯೂನಿಯರ್ ಅಂಬಿಗೆ ಸೀನಿಯರ್ ಅಂಬಿ ಹೇಳಿದ ಕಿವಿಮಾತೇನು?

ಬೆಂಗಳೂರು (ಮೇ 30): ರೆಬಲ್ ಸ್ಟಾರ್ ಅಂಬರೀಷ್ ಪುತ್ರ ಅಭಿಷೇಕ್ ಅಭಿನಯದ ‘ಅಮರ್’ ಚಿತ್ರದ ಮುಹೂರ್ತ ನೆರವೇರಿದೆ. ಇಡೀ ಚಿತ್ರರಂಗ ಅಂಬರೀಷ್‍ ಅವರನ್ನೂ ಮೀರಿಸುವ ಸಾಧನೆ ಮಾಡು ಎಂದು ಹಾರೈಸುತ್ತಿದೆ. ಆದರೆ ಅಂಬರೀಷ್ ಅವರು ತಮ್ಮ ಪುತ್ರನಿಗೆ ತಣ್ಣಗೆ ನೀತಿ ಪಾಠ ಹೇಳಿದ್ದಾರೆ.

ನಾನು ಮಾಡಿದಂತೆ ನೀನು ಮಾಡಬೇಡ. ಸೆಟ್‍ಗೆ ಟೈಂಗೆ ಸರಿಯಾಗಿ ಹೋಗಬೇಕು ಎಂಬುದು ಮೊದಲನೇ ಬುದ್ಧಿಮಾತು. ಸಾಮಾನ್ಯವಾಗಿ ಅಂಬರೀಷ್ ಅವರು ಸೆಟ್‍ಗೆ ಲೇಟ್ ಆಗಿ ಹೋಗೋದ್ರಲ್ಲಿ ಫೇಮಸ್. ಆದ್ರೆ ತಮ್ಮ ಮಗ ಆ ರೀತಿಮಾಡುವುದು ಅವರಿಗೆ ಇಷ್ಟವಿಲ್ಲ.

ಸೆಟ್‍ನಲ್ಲಿದ್ದಾಗ ನೀನು ನಟ ಅಷ್ಟೆ, ಅಂಬರೀಷ್ ಮಗ ಅಲ್ಲ. ನಿರ್ದೇಶಕರು ಹೇಳಿದಂತೆ ಕೇಳಬೇಕು. ಹೊರಗೆ ನಿನಗೆ ಆ ನಿರ್ದೇಶಕ ಸ್ನೇಹಿತನೇ ಆಗಿರಬಹುದು. ಆದರೆ, ಸೆಟ್‍ನಲ್ಲಿ ನಿರ್ದೇಶಕ ನಿರ್ದೇಶಕನೇ – ನಟ ನಟಾನೇ. ಅದನ್ನು ಶಿಸ್ತಿನಿಂದ ಪಾಲಿಸಬೇಕು ಎಂಬುದು ಅಂಬರೀಶ್ ಅವರು ಹೇಳಿರುವ 2ನೇ ಬುದ್ಧಿವಾದ.

ವಿಶೇಷವೆಂದರೆ, ಅಂಬರೀಷ್ ಅವರು ಇವೆರಡೂ ಬುದ್ಧಿ ಮಾತಿಗೆ ವಿರುದ್ಧವೇ ಇದ್ದವರು. ಬಹುಶಃ ಪುಟ್ಟಣ್ಣ ಅವರಂತಹ ನಿರ್ದೇಶಕರನ್ನು ಬಿಟ್ಟರೆ, ಅಂಬರೀಷ್‍ ಅವರನ್ನು ಪ್ರಶ್ನಿಸುವ ಅಥವಾ ಬಯ್ಯುವ ಧೈರ್ಯ ಮಾಡಿದ ನಿರ್ದೇಶಕರೇ ಇರಲಿಲ್ಲ ಎನ್ನುವುದೂ ವಾಸ್ತವ.

ಆದರೆ, ಅಂಬರೀಶ್ ಅವರು ಆತ್ಮೀಯತೆಯಿಂದ ಜೋರು ಮಾಡುವುದು ಬಿಟ್ಟರೆ ಸೆಟ್‍ನಲ್ಲಿ ಅಹಂಕಾರ ತೋರಿದರವಲ್ಲ. ಯಾವುದೋ ಒಂದು ಸೀನ್ ಚೆನ್ನಾಗಿ ಬಂದಿಲ್ಲ ಎಂದು ನಿರ್ದೇಶಕರು ಹೇಳಿದರೆ, ಬಾಯ್ತುಂಬಾ ಬೈದರೂ ಅಷ್ಟೇ ಪ್ರೀತಿಯಿಂದ ಮತ್ತೊಮ್ಮೆ ನಟಿಸುತ್ತಿದ್ದರು ಅಂಬಿ.

ಅಂಬರೀಶ್ ಅವರು ನಿರ್ದೇಶಕರಿಗೆ ಇಷ್ಟವಾಗಿದ್ದ ನಟ. ನಿರ್ದೇಶಕರ ಸ್ವಾತಂತ್ರ್ಯದಲ್ಲಿ ಯಾವತ್ತೂ ಮೂಗು ತೂರಿಸದ ಅಂಬರೀಷ್, ತಮ್ಮ ಮಗನಿಗೂ ಅದನ್ನೇ ಹೇಳಿಕೊಟ್ಟಿದ್ದಾರೆ. ಒಟ್ಟಿನಲ್ಲಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿರುವ ತಮ್ಮ ಮಗನಿಗೆ ಅಂಬರೀಶ್ ಅವರು ಕಿವಿಮಾತು ಹೇಳಿರುವುದು ವಿಶೇಷವಾಗಿದೆ. (ಎನ್.ಬಿ)

Leave a Reply

comments

Related Articles

error: