ಪ್ರಮುಖ ಸುದ್ದಿಮೈಸೂರು

ಕ್ರಿಮಿನಲ್ ಆರೋಪ ಎದುರಿಸುತ್ತಿರುವ ಮೇಲುಕೋಟೆ ಶಾಸಕ ಪುಟ್ಟರಾಜುಗೆ ಸಚಿವ ಸ್ಥಾನ ಬೇಡ : ಆಗ್ರಹ

ಮೈಸೂರು,ಮೇ.30 : ಅಕ್ರಮ ಕಲ್ಲು ಗಣಿಗಾರಿಕೆ ಸೇರಿದಂತೆ ಹಲವಾರು ಗುರುತರ ಕ್ರಿಮಿನಲ್ ಆರೋಪಗಳನ್ನು ಎದುರಿಸುತ್ತಿರುವ ಮೇಲುಕೋಟೆ ಶಾಸಕ ಸಿ.ಎಸ್.ಪುಟ್ಟರಾಜು ಅವರಿಗೆ ಸಮ್ಮಿಶ್ರ ಸರ್ಕಾರದಲ್ಲಿ ಸಚಿವ ಸ್ಥಾನ ನೀಡಬಾರದೆಂದು ಆರ್.ಟಿ.ಐ ಕಾರ್ಯಕರ್ತ ಕೆ.ಆರ್.ರವೀಂದ್ರ ಅವರು ಮುಖ್ಯಮಂತ್ರಿ ಕುಮಾರಸ್ವಾಮಿಯವರನ್ನು ಒತ್ತಾಯಿಸಿದರು.

ಬುಧವಾರ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು,ಸಿ.ಎಸ್.ಪುಟ್ಟರಾಜು ಅವರನ್ನು ಸಚಿವ ಸಂಪುಟಕ್ಕೆ ತೆಗೆದುಕೊಳ್ಳುವುದರಿಂದ ಸರ್ಕಾರಕ್ಕೆ ಕೆಟ್ಟ ಹೆಸರು ಬರುವುದರ ಜೊತೆಗೆ ಮುಜುಗರಕೀಡಾಗುವುದು ಖಚಿತ.

ಇವರ ವಿರುದ್ಧ ಮಂಡ್ಯ ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ಅಕ್ರಮ ನಿವೇಶನಕ್ಕೆ ಸಂಬಂಧಪಟ್ಟಂತೆ  ಸಿಬಿಐ ವಿಶೇಷ ನ್ಯಾಯಾಲಯದಲ್ಲಿ ದೋಷಾರೋಪಣ ಪಟ್ಟಿ ಸಲ್ಲಿಸಲಾಗಿದೆ. ಚುನಾವಣಾ ಶಪಥ ಪತ್ರದಲ್ಲಿ ಘೋಷಿಸಿಕೊಂಡಿರುವಂತೆ ಮಂಡ್ಯ ಜೆ.ಎಂ.ಎಫ್.ಸಿ ನ್ಯಾಯಾಲಯದಲ್ಲಿ ಪ್ರಕರಣ ದಾಖಲಾಗಿರುತ್ತದೆ ಎಂದರು.

ರೈತ ಸಂಘದ ಕಾರ್ಯಕರ್ತ ಕೆ.ಎನ್. ದೀಕ್ಷಿತ್ ಮೇಲಿನ ಹಲ್ಲೆ ಹಿನ್ನೆಲೆಯಲ್ಲಿ ಕ್ರಿಮಿನಲ್ ಪ್ರಕರಣ, ಮಂಡ್ಯ ಉಪ ಅರಣ್ಯ ಸಂರಕ್ಷಣಾಧಿಕಾರಿ ಎಸ್.ಧನಂಜಯ ಅವರಿಗೆ ಬೆದರಿಕೆ ಹಾಕಿ ಕರ್ತವ್ಯಕ್ಕೆ ಅಡ್ಡಿಪಡಿಸಿದ ಬಗ್ಗೆ ಪಾಂಡವ ಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಲ್ಲದೇ, ಚಿನಕುರಳಿ, ಹೊನಗಾನಹಳ್ಳಿ, ಬೇಬಿ ಬೆಟ್ಟದ ಅಮೃತ್ ಮಹಲ್ ಕಾವಲ್ ನ 2016 ಎಕರೆ ಅರಣ್ಯ ಪ್ರದೇಶದಲ್ಲಿ ಪುಟ್ಟರಾಜು ಕುಟುಂಬ ಒಡೆತನದಲ್ಲಿ ನಡೆಯುತ್ತಿರುವ ಎಸ್.ಟಿ.ಜಿ ಸ್ಟೋನ್ ಕ್ರಷರ್ ಗೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಹಿರಿಯ ಭೂ ವಿಜ್ಞಾನಿ ಕೆ.ಎಂ.ನಾಗಭೂಷಣ್ ಅವರು 90 ಲಕ್ಷ ದಂಡ ವಿಧಿಸಿ ಠಾಣೆಯಲ್ಲಿ ಪ್ರತ್ಯೇಕ 3 ಪ್ರಕರಣಗಳನ್ನು ದಾಖಲೆಸಿದ್ದಾರೆ.

ಇಂತಹ ಕ್ರಿಮಿನಲ್ ಅಪರಾಧ ಹಿನ್ನೆಲೆಯುಳ್ಳ ಶಾಸಕ ಪುಟ್ಟರಾಜುಗೆ ಸಚಿವ ಸಂಪುಟದಲ್ಲಿ ಸ್ಥಾನ ನೀಡಿದರೆ ಪಾರದರ್ಶಕತೆ ಹಾಗು ಭ್ರಷ್ಟಾಚಾರ ರಹಿತ ಆಡಳಿತ ನೀಡಲು ಅಡ್ಡಿಯುಂಟಾಗುವುದರಿಂದ ಇವರನ್ನು ಅಧಿಕಾರದಿಂದ ದೂರವಿಡಬೇಕೆಂದು ಆಗ್ರಹಿಸಿದರು.

ಮಂಚೇಗೌಡ ಗೋಷ್ಠಿಯಲ್ಲಿ ಜೊತೆಯಾಗಿದ್ದರು. (ವರದಿ : ಕೆ.ಎಂ.ಆರ್)

Leave a Reply

comments

Related Articles

error: