
ಮೈಸೂರು
ನಾಯಕ ಸಮಾಜದ ಮೇಲಾಗುತ್ತಿರುವ ದೌರ್ಜನ್ಯ ತಡೆಯಿರಿ : ರಾಜ್ಯ ನಾಯಕರ ಯುವ ಸೇನೆ ಪ್ರತಿಭಟನೆ
ಮಹರ್ಷಿ ವಾಲ್ಮೀಕಿ ಭಾವಚಿತ್ರಕ್ಕೆ ಅವಮಾನ ಮಾಡಿರುವುದನ್ನು ಖಂಡಿಸಿ ಮತ್ತು ನಾಯಕ ಸಮಾಜದ ಮೇಲೆ ಆಗುತ್ತಿರುವ ದೌರ್ಜನ್ಯ ತಡೆಗಟ್ಟುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ನಾಯಕರ ಯುವಸೇನೆ ವತಿಯಿಂದ ಪ್ರತಿಭಟನೆ ನಡೆಯಿತು.
ಮೈಸೂರು ಜಿಲ್ಲಾಧಿಕಾರಿಗಳ ಕಚೇರಿ ಎದುರು ಬುಧವಾರ ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡ ಪ್ರತಿಭಟನಾಕಾರರು ರಾಜ್ಯದ ವಿವಿಧೆಡೆ ವಾಲ್ಮೀಕಿ ಭಾವಚಿತ್ರಕ್ಕೆ ಅವಮಾನ ಮಾಡಲಾಗಿದೆ. ಅಷ್ಟೇ ಅಲ್ಲದೇ ನಾಯಕ ಸಮಾಜದವರ ಮನೆಗೆ ನುಗ್ಗಿ ಅವರ ಮೇಲೆ ಹಲ್ಲೆ ಮಾಡಲಾಗಿದೆ. ಇದುವರೆಗೂ ಪೊಲೀಸ್ ಇಲಾಖೆ ನಿಷ್ಪಕ್ಷಪಾತವಾದ ತನಿಖೆ ಮಾಡದೆ ಇದಕ್ಕೆ ಕಾರಣರಾದ ಆರೋಪಿಗಳನ್ನು ಬಂಧಿಸಿಲ್ಲ. ಸಂಬಂಧಪಟ್ಟ ಮೇಲಧಿಕಾರಿಗಳು ಆದಷ್ಟು ಬೇಗ ಆರೋಪಿಗಳನ್ನು ಪತ್ತೆ ಹಚ್ಚಿ ಬಂಧಿಸಬೇಕೆಂದು ಆಗ್ರಹಿಸಿದರು.
ಆರೋಪಿಗಳ ಮೇಲೆ ದೂರು ದಾಖಲಾಗಿದ್ದರೂ ಅವರನ್ನು ಇನ್ನೂ ಬಂಧಿಸಿಲ್ಲ. ಆರೋಪಿಗಳನ್ನು ಬಂಧಿಸಿ ನಾಯಕ ಸಮಾಜದವರಿಗೆ ಸೂಕ್ತ ರಕ್ಷಣೆ ನೀಡಬೇಕೆಂದು ಹೇಳಿದರು. ಮೈಸೂರು ಜಿಲ್ಲೆಯಲ್ಲಿ ನಾಯಕ ಸಮಾಜದವರಿಗೆ ಎಸ್.ಟಿ ಪ್ರಮಾಣ ಪತ್ರ ವಿತರಿಸಲು ಶಾಲಾ ದೃಢೀಕೃತ ದಾಖಲಾತಿಗಳಿದ್ದರೂ ಕೂಡಾ ವಿನಾಕಾರಣ ಅನಗತ್ಯ ದಾಖಲಾತಿಗಳನ್ನು ಕೇಳಿ ಜಾತಿ ಪ್ರಮಾಣ ಪತ್ರ ನೀಡಲು ಕೆಲವು ತಹಶೀಲ್ದಾರರು ಮಾನಸಿಕವಾಗಿ ತುಂಬಾ ಕಿರುಕುಳ ನೀಡುತ್ತಿದ್ದಾರೆ ಇದರಿಂದ ವಿದ್ಯಾರ್ಥಿಗಳಿಗೆ ಹಾಗೂ ನಾಯಕ ಸಮಾಜದವರಿಗೆ ತುಂಬಾ ತೊಂದರೆಯಾಗುತ್ತಿದೆ. ಸರ್ಕಾರದ ಸುತ್ತೋಲೆಯಂತೆ ಶಾಲಾ ದಾಖಲಾತಿ, ಸ್ಥಳ ಪರಿಶೀಲನೆ ಹಾಗೂ ಪ್ರಮಾಣಪತ್ರದ ಮೂಲಕ ಜಾತಿ ಪ್ರಮಾಣಪತ್ರ ನೀಡುವಂತೆ ಸಂಬಂಧಪಟ್ಟ ತಹಶೀಲ್ದಾರರಿಗೆ ನಿರ್ದೇಶನ ನೀಡಬೇಕೆಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ರಾಜ್ಯ ನಾಯಕರ ಯುವಸೇನೆಯ ರಾಜ್ಯಾಧ್ಯಕ್ಷ ದೇವರಾಜ್ ಟಿ.ಕಾಟೂರು, ರಾಜ್ಯ ಉಪಾಧ್ಯಕ್ಷ ಶಿವಕುಮಾರ್, ರಾಜ್ಯ ಸಂಚಾಲಕ ಶಿವಪ್ರಸಾದ್ ಎಂ, ಜಿಲ್ಲಾಧ್ಯಕ್ಷ ಚನ್ನನಾಯಕ, ರಾಮನಾಯಕ, ಶಿವಕುಮಾರ ಮತ್ತಿತರರು ಪಾಲ್ಗೊಂಡಿದ್ದರು.