
ಮೈಸೂರು
ಸಂಭ್ರಮದಿಂದ ಸಹಬಾಳ್ವೆ ನಡೆಸಲು ಸಾಧ್ಯ: ಹೆಚ್. ಜನಾರ್ದನ್
ಸಂಭ್ರಮದಿಂದ ಮಾತ್ರ ಸಹಬಾಳ್ವೆ ಜೀವನ ನಡೆಸಲು ಸಾಧ್ಯ ಎಂದು ರಂಗಾಯಣದ ಮಾಜಿ ನಿರ್ದೇಶಕ ಹೆಚ್. ಜನಾರ್ದನ್ ಹೇಳಿದರು.
ಜೆಎಸ್ಎಸ್ ಕಾಲೇಜ್ ಆಫ್ ನರ್ಸಿಂಗ್ ವತಿಯಿಂದ ಬುಧವಾರ ಮೈಸೂರಿನ ಶ್ರೀ ಶಿವರಾತ್ರಿ ರಾಜೇಂದ್ರ ಭವನದಲ್ಲಿ ಆಯೋಜಿಸಲಾಗಿದ್ದ ‘ಸಂಭ್ರಮ-2016’ ಸಾಂಸ್ಕೃತಿಕ ಕಾರ್ಯಕ್ರಮವನ್ನು ಹೆಚ್. ಜನಾರ್ಧನ್ ಹಾಗೂ ಕಲಾವಿದ ಮೈಮ್ ರಮೇಶ್ ಜಂಟಿಯಾಗಿ ಉದ್ಘಾಟಿಸಿದರು.
ಬಳಿಕ ಮಾತನಾಡಿದ ಜನಾರ್ದನ್ ಅವರು, ಮನುಷ್ಯನಿಗೆ ಮುಖ್ಯವಾಗಿ ಬೇಕಾಗಿರುವುದು ಸಂಭ್ರಮ. ಸಂಭ್ರಮಿಸಬೇಕಾಗಿರುವುದು ನಮ್ಮ ಸಂಸ್ಕೃತಿ. ಹಳ್ಳಿಗಳಲ್ಲಿ ಜಾತ್ರೆ, ಹಬ್ಬ-ಆಚರಣೆಗಳು, ಉತ್ಸವಗಳನ್ನು ನಡೆಸುವುದು ಸಂಭ್ರಮಕ್ಕಾಗಿ. ಎಲ್ಲರ ಒಳಿತಿಗಾಗಿಯೇ ಹೊರತು ವೈಯುಕ್ತಿಕ ಉದ್ದೇಶಕ್ಕಲ್ಲ. ಸಂಭ್ರಮವನ್ನು ಕಳೆದುಕೊಳ್ಳಬಾರದು, ಗಳಿಸಿಕೊಳ್ಳಬೇಕು. ಆದರೆ ಇಂದು ಅನಾವಶ್ಯಕ ಕಾರಣಗಳಿಂದ ಸಮಾಜ ಒಡೆಯುತ್ತಿದೆ. ಅಲ್ಲಿ ಸಂಭ್ರಮ ಕಾಣ ಸಿಗುತ್ತಿಲ್ಲ. ಡಿ.ವಿ.ಜಿ. ಅವರ ಮಂಕುತಿಮ್ಮನ ಕಗ್ಗದಂತೆ ಎಲ್ಲರೊಳಗೊಂದಾಗಬೇಕು. ಆಗ ಮಾತ್ರ ನಿಜವಾದ ಸಂಭ್ರಮ ಕಾಣಲು ಸಾಧ್ಯ ಎಂದರು.
ರೋಗಿಗಳಿಗೆ ವೈದ್ಯರು ದೇವರಿದ್ದಂತೆ. ವಿದ್ಯಾರ್ಥಿಗಳು ಈ ಸಂಭ್ರಮ ಕಾರ್ಯಕ್ರಮದಲ್ಲಿ ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸಬೇಕು. ವ್ಯಕ್ತಿತ್ವ ವಿಕಸನ ಮಾಡಿಕೊಳ್ಳಬೇಕು ಎಂದು ನರ್ಸಿಂಗ್ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಖ್ಯಾತ ಕಲಾವಿದ ಮೈಮ್ ರಮೇಶ್ ಮಾತನಾಡಿ, ಮನುಷ್ಯನ ಬಳಿ ಎಷ್ಟೇ ಹಣ-ಆಸ್ತಿ ಇದ್ದರೂ ಸಹ ಅನಾರೋಗ್ಯಕ್ಕೆ ಒಳಗಾದಾಗ ವೈದ್ಯರೇ ದೇವರಾಗುತ್ತಾರೆ. ನರ್ಸ್ ಗಳು ನಮ್ಮ ತಾಯಿಯರಂತೆ. ಅವರು ರೋಗಿಗಳನ್ನು ತಾಯಿ ಸ್ಥಾನದಲ್ಲಿ ನಿಂತು ಶುಶ್ರೂಷೆ ಮಾಡುತ್ತಾರೆ. ನರ್ಸಿಂಗ್ ಕಲಿಕೆಯಲ್ಲಿ ರ್ಯಾಂಕಿಂಗ್ ಇಲ್ಲ. ಒಂದು ಜೀವ ಕಾಪಾಡುವುದೇ ಅವರಿಗೆ ರ್ಯಾಂಕಿಂಗ್ ಆಗಿರುತ್ತದೆ. ಆದ್ದರಿಂದ ಇದು ಕರ್ತವ್ಯದ ಕಲಿಕೆಯಾಗಿರುತ್ತದೆ ಎಂದರು.
ಸಂಸ್ಕೃತಿ ಮತ್ತು ಸಂಭ್ರಮ ಇಲ್ಲದೇ ಬದುಕಲು ಸಾದ್ಯವಿಲ್ಲ. ನಿಮ್ಮ ಮನಸ್ಸಿನಲ್ಲಿರುವ ನೋವು, ದುಃಖವನ್ನು ಹೊರಹಾಕಲು ಇರುವ ವೇದಿಕೆಯೇ ಈ ಸಂಭ್ರಮ ಎಂದು ಹೇಳಿದರು.
ಜೆಎಸ್ಎಸ್ ನ ವೈದ್ಯಕೀಯ ಶಿಕ್ಷಣ ವಿಭಾಗದ ನಿರ್ದೇಶಕ ಮಹೇಶ್ ಆರ್, ಜೆಎಸ್ಎಸ್ ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲೆ ಪ್ರೊ. ಶೀಲಾ ವಿಲಿಯಮ್ಸ್ ಉಪಸ್ಥಿತರಿದ್ದರು. ಸುಮಾರು 300 ಕ್ಕೂ ಅಧಿಕ ನರ್ಸಿಂಗ್ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.