ಪ್ರಮುಖ ಸುದ್ದಿ

ಬೆಂಗಳೂರಿನಲ್ಲಿ ಅಮೇರಿಕ ರಾಯಭಾರಿ ಕಚೇರಿ ಆರಂಭಿಸಲು ಹೆಚ್.ಡಿ.ಕೆ ಆಗ್ರಹ

ರಾಜ್ಯ(ಬೆಂಗಳೂರು)ಮೇ.31:- ಬೆಂಗಳೂರಿನಲ್ಲಿ ಅಮೇರಿಕದ ರಾಯಭಾರ ಕಚೇರಿಯನ್ನು ಆರಂಭಿಸುವಂತೆ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅವರು ಇಂದು ತಮ್ಮನ್ನು ಭೇಟಿ ಮಾಡಿದ ಅಮೇರಿಕದ ನಿಯೋಗಕ್ಕೆ ತಿಳಿಸಿದ್ದಾರೆ.

ಬೆಂಗಳೂರಿನಿಂದ ಅಮೇರಿಕ ತೆರಳುವವರಿಗೆ ವೀಸಾ ನೀಡುವ ನಿಟ್ಟಿನಲ್ಲಿ ಈ ಕಚೇರಿಯನ್ನು ತಕ್ಷಣದಲ್ಲಿ ಆರಂಭಿಸುವುದು ಅಗತ್ಯವಾಗಿದೆ ಎಂದು ತಿಳಿಸಿದ್ದು, ಭಾರತದಲ್ಲಿನ ಅಮೇರಿಕ ರಾಯಭಾರಿ ಕೆನ್ನೆತ್ ಜಸ್ಟರ್, ಚೆನ್ನೈ ಅಮೇರಿಕಾ ಕಾನ್ಸುಲ್ ಜನರಲ್ ರಾಬರ್ಟ್ ಜಿ ಬರ್ಗೆಸ್, ರಾಜಕೀಯ ಹಾಗೂ ಆರ್ಥಿಕ ಅಧಿಕಾರಿ ಜೋಸೆಫ್ ಬರ್ನಥ್ ಹಾಗೂ ಸಾರ್ವಜನಿಕ ವ್ಯವಹಾರ ಅಧಿಕಾರಿ ಲಾರೆನ್ ಲವಲೇಸ್   ನಿಯೋಗದಲ್ಲಿದ್ದರು.

ಅಮೇರಿಕ ರಾಯಭಾರ ಕಚೇರಿ ಆರಂಭಿಸುವ ಸಂಬಂಧ ಅಗತ್ಯವಿರುವ ಜಾಗ ಹಾಗೂ ಇತರ ಎಲ್ಲಾ ಮೂಲ ಸೌಕರ್ಯವನ್ನು ರಾಜ್ಯ ಸರ್ಕಾರ ಒದಗಿಸುತ್ತದೆ ಎಂದು ಭರವಸೆ ನೀಡಿದರು. ಅಮೇರಿಕದಲ್ಲಿ ದೊಡ್ಡ ಸಂಖ್ಯೆಯಲ್ಲಿ ಕನ್ನಡಿಗರು ಪ್ರಮುಖ ಹುದ್ದೆಗಳಲ್ಲಿ ಕೆಲಸ ಮಾಡುತ್ತಿದ್ದಾರೆ.  ಇದಲ್ಲದೆ  ‘ಪ್ರವಾಸಿ ವೀಸಾ’ದ ಅಡಿ ಅಮೇರಿಕಗೆ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆಯಲ್ಲಿಯೂ ಹೆಚ್ಚಳವಾಗುತ್ತಿದೆ. ವಿವಿಧ ರೀತಿಯ ವೀಸಾದಡಿ ಅಮೇರಿಕಗೆ ಭೇಟಿ ನೀಡುತ್ತಿರುವವರಿಗೆ ಇಲ್ಲಿಯೇ ಕಚೇರಿಯನ್ನು ಆರಂಭಿಸುವುದರಿಂದ ಸಹಾಯವಾಗಲಿದೆ ಎಂದರು. ಇದಕ್ಕೆ ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದ ರಾಯಭಾರಿ  ಜಸ್ಟರ್ ಅವರು ಈ ಬಗ್ಗೆ ಉನ್ನತ ಹಂತದಲ್ಲಿ ಪ್ರಸ್ತಾಪಿಸುವುದಾಗಿ ತಿಳಿಸಿದರು. ಬೆಂಗಳೂರಿನಲ್ಲಿ ಸುಮಾರು 370 ಅಮೇರಿಕದ ಕಂಪನಿಗಳು ಕಾರ್ಯನಿರ್ವಹಿಸುತ್ತಿದ್ದು ರಾಜ್ಯದ ಆರ್ಥಿಕ ಅಭಿವೃದ್ಧಿಗೆ ತನ್ನದೇ ಕೊಡುಗೆಯನ್ನು ನೀಡಿದೆ. ಈ ಕಂಪನಿಗಳು ಎದುರಿಸುತ್ತಿರುವ ಮೂಲಭೂತ ವ್ಯವಸ್ಥೆಗಳ ಬಗ್ಗೆ ರಾಜ್ಯ ಸರ್ಕಾರ ಗಮನ ಹರಿಸಬೇಕು ಎಂದು ಮನವಿ ಮಾಡಿದರು. ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅವರು ಮನವಿಗೆ ಸ್ಪಂದಿಸಿ ಈ ಸಮಸ್ಯೆಗಳನ್ನು ಅಧ್ಯಯನ ಮಾಡಿ ಪರಿಹಾರ ಒದಗಿಸುವಂತೆ ಅಲ್ಲಿಯೇ ಅಧಿಕಾರಿಗಳಿಗೆ ನಿರ್ದೇಶಿಸಿದರು.

ಮುಖ್ಯ ಕಾರ್ಯದರ್ಶಿ ಎನ್ ರತ್ನಪ್ರಭಾ ಮಾತನಾಡಿ ಬೆಂಗಳೂರಿನಲ್ಲಿ ಕೈಗೊಂಡಿರುವ ವಿವಿಧ ರೀತಿಯ ಅಭಿವೃದ್ಧಿ ಕ್ರಮಗಳನ್ನು ವಿವರಿಸಿದರು. ಮೆಟ್ರೋ ರೈಲು ವ್ಯವಸ್ಥೆ, ಎಕ್ಸ್ಪ್ರೆಸ್ ಹೆದ್ದಾರಿ, ಕುಡಿಯುವ ನೀರಿನ ವ್ಯವಸ್ಥೆಯ ಬಗ್ಗೆ ನಿಯೋಗಕ್ಕೆ ಮನವರಿಕೆ ಮಾಡಿದರು.  ಪ್ರವಾಸೋದ್ಯಮ ಹಾಗೂ ಮಾಹಿತಿ ಹಾಗೂ ಜೈವಿಕ ತಂತ್ರಜ್ಞಾನ ಕ್ಷೇತ್ರದಲ್ಲಿ ಕರ್ನಾಟಕ ಅತ್ಯಂತ ಕಡಿಮೆ ಅವಧಿಯಲ್ಲಿ ಜಾಗತಿಕ ಭೂಪಟದಲ್ಲಿ ಗುರುತಿಸಿಕೊಂಡಿರುವುದನ್ನು ಅಮೇರಿಕ ನಿಯೋಗ ಶ್ಲಾಘಿಸಿತು.

ಸಭೆಯಲ್ಲಿ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳಾದ ವಿಜಯ ಭಾಸ್ಕರ್, ಡಿ ವಿ ಪ್ರಸಾದ್, ಲಕ್ಷ್ಮಿ ನಾರಾಯಣ್, ಗೌರವ್ ಗುಪ್ತ ಮತ್ತಿತರರು ಉಪಸ್ಥಿತರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: