ಪ್ರಮುಖ ಸುದ್ದಿಮೈಸೂರು

ಮೈಸೂರು ವಿವಿ ಘಟಿಕೋತ್ಸವ ಡಿ.13 ರಂದು: ಹೆಚ್ಚಿನ ಪದಕಗಳು ಮಹಿಳೆಯರ ಪಾಲು

ಮೈಸೂರು ವಿಶ್ವವಿದ್ಯಾನಿಲಯದ 97ನೇ ವಾರ್ಷಿಕ ಘಟಿಕೋತ್ಸವವು ಡಿ.13ರಂದು ಕ್ರಾಫರ್ಡ್ ಹಾಲ್‍ನಲ್ಲಿ ನಡೆಯಲಿದೆ ಎಂದು ಪ್ರೊ. ಕೆ.ಎಸ್. ರಂಗಪ್ಪ ಅವರು ತಿಳಿಸಿದರು.

ಬುಧವಾರದಂದು ಕ್ರಾಫರ್ಡ್ ಹಾಲ್‍ನಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿ, ಕರ್ನಾಟಕದ ರಾಜ್ಯಪಾಲರು ಹಾಗೂ ಮೈಸೂರು ವಿಶ್ವವಿದ್ಯಾನಿಲಯದ ಕುಲಾಧಿಪತಿಗಳಾದ ವಜುಭಾಯ್ ರೂಡಾಭಾಯ್ ವಾಲಾ ಅವರು ಅಧ್ಯಕ್ಷತೆ ವಹಿಸುವರು. ಟಿಬೆಟನ್ ಜನಾಂಗದ ಆಧ್ಯಾತ್ಮಿಕ ಗುರುಗಳಾದ 14ನೇ ದಲೈ ಲಾಮ ಘಟಿಕೋತ್ಸವ ಭಾಷಣ ಮಾಡಲಿದ್ದಾರೆ. ಉನ್ನತ ಶಿಕ್ಷಣ ಸಚಿವರು ಹಾಗೂ ಮೈಸೂರು ವಿವಿ ಸಮ ಕುಲಾಧಿಪತಿಗಳಾದ ಬಸವರಾಜ ರಾಯರೆಡ್ಡಿ ಅವರು ಉಪಸ್ಥಿತರಿರುವರು ಎಂದರು.

ಕಾರ್ಯಕ್ರಮದಲ್ಲಿ ದಲೈ ಲಾಮ ಮತ್ತು ರಾಜಮಾತೆ ಪ್ರಮೋದಾ ದೇವಿ ಒಡೆಯರ್‍ ಅವರಿಗೆ ಗೌರವ ಡಾಕ್ಟರೇಟ್ ಪದವಿ ಪ್ರದಾನ ಮಾಡಲಾಗುವುದು.

ಈ ಶೈಕ್ಷಣಿಕ ವರ್ಷದಲ್ಲಿ ಎರಡು ಘಟಿಕೋತ್ಸವಗಳನ್ನು ನಡೆಸಲು ವಿಶೇಷ ಅನುಮತಿಯನ್ನು ಪಡೆಯಲಾಗಿದ್ದು, ಕಾಯಿದೆಯನ್ನು ಉಲ್ಲಂಘಿಸಿಲ್ಲ ಎಂದು ಪ್ರೊ. ಕೆ.ಎಸ್. ರಂಗಪ್ಪ ಅವರು ತಿಳಿಸಿದರು.

ಮಹಿಳೆಯರದೇ ಮೇಲುಗೈ: 97ನೇ ಘಟಿಕೋತ್ಸವದಲ್ಲಿ ಶೇ. 65 ರಷ್ಟು ಮಹಿಳೆಯರು ಪದವಿ ಪಡೆಯಲಿದ್ದಾರೆ. 16,675 ಮಂದಿ ಪದವಿಯನ್ನು ಪಡೆಯಲಿದ್ದು, ಇವರಲ್ಲಿ 10,798 ಮಂದಿ ಮಹಿಳೆಯರೇ ಇದ್ದಾರೆ. 312 ಪದಕಗಳು ಮತ್ತು 180 ನಗದು ಬಹುಮಾನವನ್ನು 201 ಅಭ್ಯರ್ಥಿಗಳಿಗೆ ವಿತರಿಸಲಾಗುವುದು. 139 ಮಂದಿ ಮಹಿಳಾ ಅಭ್ಯರ್ಥಿಗಳೇ ಇದ್ದಾರೆ. ಒಟ್ಟು 7,388 ಅಭ್ಯರ್ಥಿಗಳಲ್ಲಿ 3,889 ಮಂದಿ ಮಹಿಳೆಯರು (ಶೇ.53) ಸ್ನಾತಕೋತ್ತರ ಪದವಿ ಪಡೆಯುತ್ತಿದ್ದಾರೆ.

ಕಲಾ ಪದವಿ ವಿಭಾಗದಲ್ಲಿ ಕಾವ್ಯ ಎಸ್. ಪ್ರಥಮ ಸ್ಥಾನ ಪಡೆದಿದ್ದು, ಮೂರು ಪದಕ ಮತ್ತು ಮೂರು ನಗದು ಬಹುಮಾನಗಳನ್ನು ತನ್ನದಾಗಿಸಿಕೊಂಡಿದ್ದಾರೆ. ವಾಣಿಜ್ಯ ವಿಭಾಗದಲ್ಲಿ ರಶ‍್ಮಿ ಜಿ. ಪ್ರಭು ಪ್ರಥಮ ಸ್ಥಾನ ಪಡೆದಿದ್ದು, ಮೂರು ಪದಕ ಮತ್ತು ಐದು ನಗದು ಬಹುಮಾನಗಳನ್ನು ಪಡೆಯಲಿದ್ದಾರೆ. ವಿಜ್ಞಾನ ವಿಭಾಗದಲ್ಲಿ ಮಸೀರಾ ಖಾನುಮ್ ಪ್ರಥಮ ಸ್ಥಾನ ಪಡೆದಿದ್ದು, 2 ಪದಕ ಮತ್ತು 2 ನಗದು ಬಹುಮಾನಗಳನ್ನು ಪಡೆಯಲಿದ್ದಾರೆ. ಗಾಯತ್ರಿ ಜಿ.ಎಸ್. 4 ಪದಕ ಮತ್ತು 6 ನಗದು ಬಹುಮಾನಗಳನ್ನು ತನ್ನದಾಗಿಸಕೊಳ್ಳಲಿದ್ದಾರೆ.

ಸ್ನಾತಕೋತ್ತರ ವಿಭಾಗದಲ್ಲಿ ವೇದಾವತಿ ಪ್ರಥಮ ಸ್ಥಾನವನ್ನು ಪಡೆದಿದ್ದು, 7 ಪದಕಗಳು ಮತ್ತು 4 ನಗದು ಬಹುಮಾನಗಳನ್ನು ಪಡೆಯಲಿದ್ದಾರೆ. ವಾಣಿಜ್ಯ ವಿಭಾಗದ ವರ್ಷ ಎಂ. ಕೌಶಿಕ್ ಪ್ರಥಮ ಸ್ಥಾನವನ್ನು ಪಡೆದಿದ್ದು, 5 ಚಿನ್ನದ ಪದಕಗಳನ್ನು ಪಡೆಯಲಿದ್ದಾರೆ.

Leave a Reply

comments

Related Articles

error: