ಪ್ರಮುಖ ಸುದ್ದಿಮನರಂಜನೆ

ಅರಣ್ಯ ಇಲಾಖೆಯ ರಾಯಭಾರಿಯಾಗಿ ಚಾಲೆಂಜಿಂಗ್ ಸ್ಟಾರ್ ದರ್ಶನ್

ರಾಜ್ಯ(ಬೆಂಗಳೂರು)ಮೇ.31;- ಚಂದನವನದ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಪ್ರಾಣಿಗಳೆಂದರೆ ಅಚ್ಚುಮೆಚ್ಚು.  ಕಾಡು ಹಾಗೂ ವನ್ಯಜೀವಿಗಳ ಬಗ್ಗೆ ಅಪಾರ ಪ್ರೀತಿ ತೋರುವ ದರ್ಶನ್ ಅರಣ್ಯ ಇಲಾಖೆಯ ರಾಯಭಾರಿಯಾಗಿ ನೇಮಕಗೊಂಡಿದ್ದಾರೆ.

ಅವರು ವನ್ಯಜೀವಿ ಹಾಗೂ ಅರಣ್ಯ ಸಂರಕ್ಷಣೆಯ ಸಂದೇಶ ಸಾರುವ ಸಾರಥಿಯಾಗಿ ಕಾರ್ಯ ನಿರ್ವಹಿಸಲಿದ್ದಾರಂತೆ. ಈಗಾಗಲೇ ತಮ್ಮದೇ ಆದ ಫಾರಂನಲ್ಲಿ ಅನೇಕ ಪ್ರಾಣಿಗಳನ್ನು ಸಾಕುತ್ತಿರುವ ದರ್ಶನ್, ಮೈಸೂರಿನ ಚಾಮರಾಜೇಂದ್ರ ಮೃಗಾಲಯದಲ್ಲಿ ಹುಲಿ, ಆನೆ ಸೇರಿದಂತೆ ನಾನಾ ಪ್ರಾಣಿಗಳನ್ನು ದತ್ತು ಪಡೆದು ಆ ಪ್ರಾಣಿಗಳ ಪಾಲನೆಗೆ ಸಹಕರಿಸಿದ್ದಾರೆ. ಅವರ ಕುಟುಂಬದ ಸದಸ್ಯರೂ ಕೂಡ ಹಲವು ಬಾರಿ ಮೃಗಾಲಯಕ್ಕೆ ಭೇಟಿ ನೀಡಿದ್ದಾರೆ. ಅರಣ್ಯ ಇಲಾಖೆಯೊಂದಿಗೆ ಅವರಿಗೆ ವಿಶೇಷ ಒಡನಾಟವೂ ಇದೆ. ಇದನ್ನೆಲ್ಲ ಗಮನಿಸಿದ ಅರಣ್ಯ ಇಲಾಖೆಯು ಗುಜರಾತ್‌ ನಲ್ಲಿ ಅಮಿತಾಬ್ ಬಚ್ಚನ್‌ ಅವರನ್ನು ರಾಯಭಾರಿಯಾಗಿ ನೇಮಕ ಮಾಡಿರುವಂತೆ ಕರ್ನಾಟಕದಲ್ಲಿ ದರ್ಶನ್ ಅವರನ್ನು ನೇಮಿಸಿದೆ. ಅರಣ್ಯ ಇಲಾಖೆ ಅಧಿಕಾರಿಗಳು ದರ್ಶನ್ ಅವರಿಗೆ ರಾಯಭಾರಿಯಾಗಿ ನೇಮಕಗೊಂಡಿರುವ ಪತ್ರ ನೀಡಿದ್ದಾರೆ. ದರ್ಶನ್ ಇನ್ನು ಮುಂದೆ ವಿಶ್ವಭೂಮಿ ದಿನಾಚರಣೆ, ಪರಿಸರ ದಿನಾಚರಣೆ, ವನ ಮಹೋತ್ಸವ ಹಾಗೂ ಇನ್ನಿತರ ಅರಣ್ಯ ಇಲಾಖೆಯ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಅರಣ್ಯ ಹಾಗೂ ವನ್ಯಜೀವಿ ಸಂರಕ್ಷಣೆ ಬಗ್ಗೆ ಜಾಗೃತಿ ಮೂಡಿಸಲಿದ್ದಾರೆ.

ಅರಣ್ಯ ಇಲಾಖೆಯು ಜೂ. 5ರಂದು ಪರಿಸರ ದಿನಾಚರಣೆ ಅಂಗವಾಗಿ ರಾಜ್ಯಾದ್ಯಂತ ವನಮಹೋತ್ಸವ ಕಾರ್ಯಕ್ರಮ ಹಮ್ಮಿಕೊಂಡಿದೆ. ಸಾವಿರಾರು ಗಿಡಗಳನ್ನು ನೆಡುವ ಈ ಕಾರ್ಯಕ್ರಮಕ್ಕಾಗಿಯೇ ನಿರ್ಮಿಸುತ್ತಿರುವ ‘ಪ್ಲಾಂಟ್ ಎ ಟ್ರೀ’ ಎಂಬ ಸಾಕ್ಷ್ಯ ಚಿತ್ರದಲ್ಲಿಯೂ ದರ್ಶನ್ ನಟಿಸಲಿದ್ದಾರೆ. ಇಲಾಖೆಯ ನಿರ್ಮಿಸುತ್ತಿರುವ ಈ ಸಾಕ್ಷ್ಯ ಚಿತ್ರಗಳಿಗೆ ದರ್ಶನ್ ಹಣ ಪಡೆದಿಲ್ಲ. ಈ ಚಿತ್ರದ ಚಿತ್ರೀಕರಣ ಮಲೆ ಮಹದೇಶ್ವರ ಬೆಟ್ಟ, ಬಂಡಿಪುರ, ನಾಗರಹೊಳೆ ಸೇರಿದಂತೆ ಇನ್ನಿತರ ಸ್ಥಳಗಳಲ್ಲಿ ನಡೆಯಲಿದೆ. ಈ ಚಿತ್ರೀಕರಣಕ್ಕೆ ಪ್ರಯಾಣ ಕೈಗೊಳ್ಳುವ ಸಂದರ್ಭದಲ್ಲಿ ರಸ್ತೆಯುದ್ದಕ್ಕೂ ಸಿಗುವ ಗ್ರಾಮಗಳು, ಸಾರ್ವಜನಿಕ ಸ್ಥಳಗಳಲ್ಲಿ ‘ಅರಣ್ಯ ಉಳಿಸಿ’ ಎಂಬ ಜನಜಾಗೃತಿ ಮೂಡಿಸಲಿದ್ದಾರಂತೆ ದರ್ಶನ್. ಈ ಎಲ್ಲ ಕಾರ್ಯಗಳಿಗೆ ದರ್ಶನ್ ಸ್ವಯಂ ಪ್ರೇರಣೆಯಿಂದಲೇ ಒಪ್ಪಿಕೊಂಡಿದ್ದಾರೆ ಎನ್ನಲಾಗುತ್ತಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: