ಕರ್ನಾಟಕಪ್ರಮುಖ ಸುದ್ದಿ

ಕುಮಾರಸ್ವಾಮಿ ರಾಜೀನಾಮೆ ಬೆದರಿಕೆ : ಜೆಡಿಎಸ್ ಬಿಗಿಪಟ್ಟಿಗೆ ಮಣಿದ ಕಾಂಗ್ರೆಸ್

ಬೆಂಗಳೂರು (ಮೇ 31): ಸಂಪುಟ ರಚನೆ ಸಂಬಂಧ ಕಾಂಗ್ರೆಸ್ ಪಕ್ಷವು ಕೊನೆಗೂ ಜೆಡಿಎಸ್ ಪಟ್ಟಿಗೆ ಮಣಿದಿದೆ ಎನ್ನಲಾಗಿದ್ದು, ಎರಡೂ ಪಕ್ಷಗಳ ಸಹಮತದ ಮೇಲೆ ಸಚಿವರಾಗುವವರ ಅಂತಿಮ ಪಟ್ಟಿಯನ್ನು ಸಿದ್ಧಪಡಿಸಲಾಗಿವೆ ಎಂದು ಮೂಲಗಳು ತಿಳಿಸಿವೆ.

ಅಂತಿಮ ಒಪ್ಪಂದದ ಪ್ರಕಾರ ಜೆಡಿಎಸ್ ಪಕ್ಷವು ಹಣಕಾಸು ಖಾತೆಯನ್ನು ತನ್ನಲ್ಲಿ ಇರಿಸಿಕೊಳ್ಳಲಿದೆ. ಕಾಂಗ್ರೆಸ್ ಪಕ್ಷಕ್ಕೆ ಗೃಹಖಾತೆಯನ್ನು ಬಿಟ್ಟುಕೊಡಲಾಗಿದೆ. ಇದರ ಜೊತೆಗೆ ಕಾಂಗ್ರೆಸ್‌ ಭಾರಿ ಕೈಗಾರಿಕೆ, ಐಟಿ/ಬಿಟಿ, ಶಿಕ್ಷಣ ಮತ್ತು ಪ್ರವಾಸೋದ್ಯಮಗಳನ್ನು ತನ್ನಲ್ಲಿ ಉಳಿಸಿಕೊಳ್ಳಲಿದೆ.

ಜೆಡಿಎಸ್ ಪಕ್ಷಕ್ಕೆ ಲೋಕೋಪಯೋಗಿ, ಸಹಕಾರ ವ್ಯವಹಾರ ಖಾತೆ ಮತ್ತು ಕಂದಾಯ ಖಾತೆಗಳನ್ನು ನೀಡಲಾಗಿದೆ. ಮುಖ್ಯಮಂತ್ರಿ ಸೇರಿದಂತೆ ಒಟ್ಟು 12 ಖಾತೆಗಳನ್ನು ಜೆಡಿಎಸ್ ಹೊಂದಲಿದೆ. ಉಪಮುಖ್ಯಮಂತ್ರಿ ಸೇರಿದಂತೆ 22 ಖಾತೆಗಳು ಕಾಂಗ್ರೆಸ್ ಶಾಸಕರಿಗೆ ಒಲಿಯಲಿವೆ.

ಸಿಎಂ ರಾಜೀನಾಮೆ ಬೆದರಿಕೆ :

ತೀವ್ರ ಚರ್ಚೆಯ ಬಳಿಕ ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರು ಖಾತೆ ಹಂಚಿಕೆ ವಿಚಾರದಲ್ಲಿ ಒಮ್ಮತಕ್ಕೆ ಬಂದಿದ್ದಾರೆ. ನವದೆಹಲಿಯಲ್ಲಿ ಗುಲಾಂ ನಬಿ ಆಜಾದ್ ಜತೆ ನಡೆಸಿದ ಸಭೆ ವೇಳೆ ಹಣಕಾಸು ಖಾತೆಯನ್ನು ತಮ್ಮ ಪಕ್ಷಕ್ಕೆ ನೀಡದೆ ಇದ್ದರೆ ರಾಜೀನಾಮೆ ನೀಡುವುದಾಗಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಬೆದರಿಕೆ ಒಡ್ಡಿದ್ದರು ಎನ್ನಲಾಗಿದೆ.

ಸಾಲಮನ್ನಾ ವಿವಾದಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಅಂತಿಮ ನಿರ್ಧಾರ ತೆಗೆದುಕೊಂಡಿದ್ದು, ಎರಡು ಹಂತಗಳಲ್ಲಿ ಸಾಲಮನ್ನಾ ಮಾಡುವುದಾಗಿ ತಿಳಿಸಿದ್ದಾರೆ. ಅದರ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಲು 15 ದಿನಗಳ ಕಾಲಾವಕಾಶ ಕೇಳಿದ್ದಾರೆ. ಹಣಕಾಸು ಖಾತೆಯನ್ನು ತಮಗೆ ನೀಡಿದರೆ ಪ್ರಣಾಳಿಕೆಯಲ್ಲಿ ನೀಡಿದ 53,000 ಕೋಟಿ ರೂ. ರೈತರ ಸಾಲಮನ್ನಾ ಭರವಸೆಯನ್ನು ಅನುಷ್ಠಾನಗೊಳಿಸಲು ಸಾಧ್ಯ ಎಂಬ ಸಲುವಾಗಿ ಕುಮಾರಸ್ವಾಮಿ ಅವರು ಪಟ್ಟುಹಿಡಿದಿದ್ದರು.

ಇದೀಗ ಬಿಕ್ಕಟ್ಟ ಬಗೆಹರಿದಿದೆ ಎನ್ನಲಾಗಿದ್ದು, ಎಚ್‌.ಡಿ.ಕುಮಾರಸ್ವಾಮಿ ಅವರ ನೇತೃತ್ವದ ಸಮ್ಮಿಶ್ರ ಸರ್ಕಾರದ ನೂತನ ಸಚಿವ ಸಂಪುಟವು ವಾರಾಂತ್ಯದ ವೇಳೆಗೆ ಪ್ರಮಾಣವಚನ ಸ್ವೀಕರಿಸುವ ನಿರೀಕ್ಷೆಯಿದೆ. (ಎನ್.ಬಿ)

Leave a Reply

comments

Related Articles

error: