ಮೈಸೂರು

ಜಿ.ಪಿ. ರಾಜರತ್ನಂ ಅವರಿಗೆ ಸಲ್ಲಬೇಕಾದ ಗೌರವ ಸಂದಿಲ್ಲ: ಕೆ. ರಾಜು ಬೇಸರ

ನಾಗನವ ಕಲಾ ಸಾಹಿತ್ಯ ವೇದಿಕೆ ಮತ್ತು ಹಿರಣ್ಮಯಿ ಪ್ರತಿಷ್ಠಾನದ ವತಿಯಿಂದ ಬುಧವಾರ ಮೈಸೂರಿನ ತ್ಯಾಗರಾಜ ರಸ್ತೆಯ ಅಕ್ಕನಬಳಗ ಪ್ರೌಢಶಾಲೆಯಲ್ಲಿ ‘ಜಿ.ಪಿ.ರಾಜರತ್ನಂ ನೆನಪು’ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಲೇಖಕ ಬನ್ನೂರು ಕೆ. ರಾಜು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಕನ್ನಡ ಭಾಷೆಯನ್ನು ಕಟ್ಟಿ ಬೆಳೆಸಿದವರು ಜಿ.ಪಿ. ರಾಜರತ್ನಂ ಅವರು. ಕರ್ನಾಟಕದ ನಿಜವಾದ ರಾಜರತ್ನ. ಅದ್ಭುತ ಸಾಹಿತ್ಯವನ್ನು ಕನ್ನಡಕ್ಕೆ ಕೊಟ್ಟ ಮಹನೀಯ. ಅವರಿಗೆ ಕನ್ನಡ ಭಾಷೆಯ ಮೇಲೆ ಅತೀವ ಕಾಳಜಿ ಇತ್ತು. ಅವರ ಸಾಹಿತ್ಯ ಕೃಷಿ ಮತ್ತು ಕೃತಿಗಳ ಮೂಲಕ ಇಂದಿಗೂ ಅವರು ನಮ್ಮ ನಡುವೆ ಹಸಿರಾಗಿ ಉಳಿದಿದ್ದಾರೆ. ‘ನರಕಕ್ಕಿಳಿಸಿ ನಾಲಿಗೆ ಸೀಳಿಸಿದರೂ ಮೂಗ್‍ನಲ್ ಕನ್ನಡ ಪದವಾಡ್ತೀನಿ…’ ಎಂದು ಹೇಳುವ ಮೂಲಕ ತಮ್ಮ ಕನ್ನಡಾಭಿಮಾನವನ್ನು ಮೆರೆದಿದ್ದರು. ಅವರು ಕನ್ನಡ ಸಾರಸ್ವತ ಲೋಕದಲ್ಲಿ ಮಿನುಗುತ್ತಿರುವ ಧ್ರುವತಾರೆ ಎಂದರು. ಆದರೆ ನಮ್ಮ ಕನ್ನಡ ಭಾಷೆಯಲ್ಲಿ ಅವರಿಗೆ ಸಲ್ಲಬೇಕಾದ ಗೌರವಗಳು ಸಂದಿಲ್ಲ. ಕೇಂದ್ರ ಸರ್ಕಾರದ ಯಾವ ಪುರಸ್ಕಾರಗಳೂ ಅವರಿಗೆ ಲಭಿಸಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರಲ್ಲದೇ, ಅವರು ಕನ್ನಡ ಸಾಹಿತ್ಯಕ್ಕೆ ನೀಡಿದ ಕೊಡುಗೆಯನ್ನು ಶ್ಲಾಘಿಸಿದರು.

ಪುಟಾಣಿ ಮಕ್ಕಳು ಜಿ.ಪಿ. ರಾಜರತ್ನಂ ಅವರ ‘ನಾಯಿಮರಿ ನಾಯಿಮರಿ ತಿಂಡಿಬೇಕೆ…?’ ‘ಬ‍ಣ್ಣದ ತಗಡಿನ ತುತ್ತೂರಿ…’ ಮುಂತಾದ ಶಿಶುಗೀತೆಗಳನ್ನು ಹಾಡಿದರು. ಇದಕ್ಕೂ ಮುನ್ನ ಹಿರಣ್ಮಯಿ ಪ್ರತಿಷ್ಠಾನದ ಅಧ್ಯಕ್ಷರಾದ ಸಂಗಪ್ಪ ಅವರ ನೇತೃತ್ವದಲ್ಲಿ ವಿದ್ಯಾರ್ಥಿಗಳಿಗೆ ರಸಪ್ರಶ್ನೆ ಸ್ಪರ್ಧೆ ನಡೆಸಲಾಯಿತು. ನಂತರ ಸ್ಪರ್ಧೆಯಲ್ಲಿ ಗೆದ್ದ ಮಕ್ಕಳಿಗೆ ಬಹುಮಾನವನ್ನು ವಿತರಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಾಹಿತಿಗಳಾದ ಕೆರೋಡಿ ಎಂ. ಲೋಲಾಕ್ಷಿ ವಹಿಸಿದ್ದರು. ವಿಶ್ರಾಂತ ಶಿಕ್ಷಕಿ ಕಾವೇರಮ್ಮ, ಪತ್ರಕರ್ತ ಹೊಮ್ಮ ಮಂಜುನಾಥ್ ಉಪಸ್ಥಿತರಿದ್ದರು.

Leave a Reply

comments

Related Articles

error: