ಕರ್ನಾಟಕ

ಕ್ಷಯ ರೋಗ ನಿರ್ಮೂಲನೆಗೆ ಕ್ರಮ ಕೈಗೊಳ್ಳಿ : ಜಿಲ್ಲಾಧಿಕಾರಿ ಸಲಹೆ

ರಾಜ್ಯ(ಮಡಿಕೇರಿ) ಮೇ 31 :- ಕ್ಷಯರೋಗ ನಿರ್ಮೂಲನೆ ಸಂಬಂಧಿಸಿದಂತೆ ಸರ್ಕಾರ ಹಲವು ಕಾರ್ಯಕ್ರಮಗಳನ್ನು ರೂಪಿಸಿದ್ದು, ಆ ನಿಟ್ಟಿನಲ್ಲಿ ಸರ್ಕಾರಿ ಆಸ್ಪತ್ರೆಗಳಂತೆ ಖಾಸಗಿ ಆಸ್ಪತ್ರೆಗಳಲ್ಲಿಯೂ ಕ್ಷಯರೋಗ ನಿರ್ಮೂಲನಾ ಔಷಧಿ ಉಚಿತವಾಗಿ ದೊರೆಯಲಿದ್ದು, ಈ ಬಗ್ಗೆ ಎಲ್ಲಾ ಖಾಸಗಿ ಆಸ್ಪತ್ರೆ ಹಾಗೂ ಮೆಡಿಕಲ್ ಸ್ಟೋರ್‍ಗಳಲ್ಲಿ ಅರಿವು ಮೂಡಿಸುವಂತೆ ಜಿಲ್ಲಾಧಿಕಾರಿ ಪಿ.ಐ.ಶ್ರೀವಿದ್ಯಾ ಸಲಹೆ ನೀಡಿದ್ದಾರೆ.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಕ್ಷಯರೋಗ ನಿಯಂತ್ರಣ ಸಂಬಂಧ ಕೈಗೊಳ್ಳಲಾಗಿರುವ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ಪಡೆದು ಮಾತನಾಡಿದರು.  ಕ್ಷಯರೋಗ ನಿರ್ಮೂಲನೆ ಸಂಬಂಧ ಸರ್ಕಾರಿ ಆಸ್ಪತ್ರೆಗಳಲ್ಲಿ ಎಲ್ಲಾ ರೀತಿಯ ಔಷಧೋಪಚಾರಗಳು ದೊರೆತರೂ ಸಹ ರೋಗಿಗಳು ಖಾಸಗಿ ಆಸ್ಪತ್ರೆಗೆ ತೆರಳುತ್ತಾರೆ. ಆದ್ದರಿಂದ ಖಾಸಗಿ ಆಸ್ಪತ್ರೆಗಳಲ್ಲಿ ಉಚಿತವಾಗಿ ಔಷಧಿಗಳು ದೊರೆಯಬೇಕು ಎಂಬ ಉದ್ದೇಶದಿಂದ ಸರ್ಕಾರ ಈ ವ್ಯವಸ್ಥೆ ಮಾಡಿದೆ ಎಂದು ನುಡಿದರು.

ಕ್ಷಯರೋಗ ಸಂಬಂಧಿಸಿದಂತೆ ಖಾಸಗಿಯಾಗಿ ಚಿಕಿತ್ಸೆ ನೀಡುತ್ತಿದ್ದಲ್ಲಿ ಸಂಬಂಧಪಟ್ಟ ವೈದ್ಯರು ಸರ್ಕಾರಕ್ಕೆ ಮಾಹಿತಿ ನೀಡಬೇಕಿದೆ ಎಂದು ತಿಳಿಸಿದರು.  ಕ್ಷಯರೋಗಿಗಳಿಗೆ ಉತ್ತಮ ಆರೋಗ್ಯ ಸೇವೆ ನೀಡಬೇಕು. ಪೌಷ್ಟಿಕ ಆಹಾರ ಪಡೆಯುತ್ತಿದ್ದಾರೆಯೇ ಎಂಬುದನ್ನು ಪರಿಶೀಲನೆ. ಮಾಡಬೇಕು. ಕ್ಷಯ ರೋಗವನ್ನು ನಿರ್ಮೂಲನೆಗೆ ಸರ್ಕಾರೇತರ ಸಂಸ್ಥೆಗಳು ಕೈಜೋಡಿಸಬೇಕಿದೆ ಎಂದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ರಾಜೇಶ್ ಅವರು ಜಿಲ್ಲೆಯಲ್ಲಿ ಸುಮಾರು 412 ಕ್ಷಯರೋಗಿಗಳನ್ನು ಪತ್ತೆ ಹಚ್ಚಲಾಗಿದ್ದು, ಇವರಿಗೆ ಉಚಿತ ಚಿಕಿತ್ಸೆ ನೀಡಲಾಗುತ್ತಿದೆ. ಶೇ.80 ರಷ್ಟು ಮಂದಿ ಗುಣಮುಖರಾಗಿದ್ದಾರೆ ಎಂದು ತಿಳಿಸಿದರು.

ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ ಡಾ.ಎ.ಸಿ.ಶಿವಕುಮಾರ್ ಅವರು ಇತ್ತೀಚಿನ ದಿನಗಳಲ್ಲಿ ಸರ್ಕಾರಿ ಆಸ್ಪತ್ರೆಗಳಲ್ಲಿ ಎಲ್ಲಾ ರೀತಿಯ ಆರೋಗ್ಯ ಉಚಿತ ಸೌಲಭ್ಯಗಳು ದೊರೆಯುತ್ತಿದ್ದರೂ ಸಹ ಶೇ.50 ರಷ್ಟು ಜನರು ತಮ್ಮ ಅನಾರೋಗ್ಯದ ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಾರೆ. ಇದರಿಂದ ಖಾಸಗಿ ಆಸ್ಪತ್ರೆಗಳಲ್ಲಿಯೂ ಕ್ಷಯರೋಗ ನಿಯಂತ್ರಣದ ಔಷಧಿಗಳು ದೊರೆಯುವಂತಾಗಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ಮಾಹಿತಿ ನೀಡಿದರು.  ಕ್ಷಯರೋಗಿಗಳ ಪೌಷ್ಟಿಕ ಆಹಾರಕ್ಕಾಗಿ ಏಪ್ರಿಲ್ 1 ರಿಂದ 500 ರೂ ಸಹಾಯಧನ ನೀಡಲಾಗುತ್ತದೆ ಎಂದು ಅವರು ಮಾಹಿತಿ ನೀಡಿದರು.

ಭಾರತೀಯ ವೈದ್ಯಕೀಯ ಮಂಡಳಿ ಜಿಲ್ಲಾ ಘಟಕದ ಅಧ್ಯಕ್ಷರಾದ ಮೋಹನ್ ಅಪ್ಪಾಜಿ ಅವರು ಮಾತನಾಡಿ ಕ್ಷಯ ರೋಗ ನಿಯಂತ್ರಣಕ್ಕೆ ಹಲವು ಕಾರ್ಯಕ್ರಮ ರೂಪಿಸಲಾಗಿದೆ. ಆ ದಿಸೆಯಲ್ಲಿ ಸ್ಪತ್ರೆಗಳಲ್ಲಿ ಗುಣಮಟ್ಟದ ಚಿಕಿತ್ಸೆ ದೊರೆಯುತ್ತಿದೆ ಎಂದು ಅವರು ತಿಳಿಸಿದರು.  ಸ್ತ್ರೀರೋಗ ತಜ್ಞರಾದ ಡಾ.ಮಂಜುನಾಥ್, ಹರ್ಷ, ಮೆಡಿಕಲ್ ಸ್ಟೋರ್ ಅಧ್ಯಕ್ಷರಾದ ಜೀವನ್, ಅಂಬೆಕಲ್ ನವೀನ್, ಪ್ರಾಯೋಗಾಲಯ ತಂತ್ರಜ್ಞರು ಇತರರು ಇದ್ದರು.   (ಕೆಸಿಐ,ಎಸ್.ಎಚ್)

Leave a Reply

comments

Related Articles

error: