ಕರ್ನಾಟಕಪ್ರಮುಖ ಸುದ್ದಿ

ಕೊನೆಗೂ ಅರ್ಜಿ ಸಲ್ಲಿಸಿದ ಕಲ್ಲಡ್ಕ ಶಾಲೆ! ಅನ್ನ ದಾಸೋಹ ಕಲ್ಪಿಸಲು ಅಧಿಕಾರಿಗಳ ಕ್ರಮ

ಬಂಟ್ವಾಳ (ಜೂನ್ 1): ವಿವಾದವಾಗಿ ಪರಿಣಮಿಸಿದ್ದ ಕಲ್ಲಡ್ಕ ಶಾಲೆಯ ಆಡಳಿತ ಮಂಡಳಿ ಬಿಸಿಯೂಟಕ್ಕಾಗಿ ಸರಕಾರಕ್ಕೆ ಅರ್ಜಿ ಸಲ್ಲಿಸಿದ್ದು, ಸರಕಾರ ಸೂಕ್ತ ಕ್ರಮ ಕೈಗೊಳ್ಳಲು ಮುಂದಾಗಿದೆ. ಇದದರೊಂಗಿಗೆ ಬಿಸಿಯೂಟ ಜಟಾಪಟಿ ಮುಗಿಯುವ ಹಂತಕ್ಕೆ ಬಂದಿದೆ.

ಆರ್‌ಎಸ್‌ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ ಅವರಿಗೆ ಸೇರಿದ ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರ ಹಾಗೂ ಪುಣಚದ ಶ್ರೀದೇವಿ ವಿದ್ಯಾಸಂಸ್ಥೆಗಳ ಮಕ್ಕಳಿಗೆ ಕಳೆದ ಶೈಕ್ಷಣಿಕ ಅವಧಿಯ ತನಕ ಕೊಲ್ಲೂರು ದೇವಾಲಯದಿಂದ ಬಿಸಿಯೂಟ ಪೂರೈಸಲಾಗುತ್ತಿತ್ತು. ಸಿದ್ದರಾಮಯ್ಯ ಅವರ ಸರ್ಕಾರ ದೇವಾಲಯದಿಂದ ಊಟ ಪೂರೈಸುವುದು ನಿಯಮ ಬಾಹಿರ, ದೇವಾಲಯದ ಆದಾಯವನ್ನು ನೇರವಾಗಿ ಶಾಲೆಗೆ ಬಳಸಿಕೊಳ್ಳುವಂತಿಲ್ಲ ಎಂದು ನಿರ್ಬಂಧಿಸಿತ್ತು.

ನೇರವಾಗಿ ಶಾಲೆಯ ಆಡಳಿತ ಮಂಡಳಿ ಸರ್ಕಾರಕ್ಕೆ ಅರ್ಜಿಸಲ್ಲಿಸಿದರೆ ಬಿಸಿಯೂಟ ಪೂರೈಸುವ ವ್ಯವಸ್ಥೆ ಮಾಡಲಾಗುವುದು ಎಂಬ ಸರ್ಕಾರದ ಸೂಚನೆಯನ್ನು ಶಾಲೆಯ ಆಡಳಿತ ಮಂಡಳಿ ತಿರಸ್ಕರಿದ ಕಾರಣ ಬಿಸಿಯೂಟ ಪೂರೈಕೆ ಸ್ಥಗಿತಗೊಂಡಿತ್ತು. ಕೊನೆಗೆ ಇದು ಚುನಾವಣಾ ವಿಷಯವಾಗಿ ಮಾರ್ಪಟ್ಟು ಕ್ಷೇತ್ರದ ಕಾಂಗ್ರೆಸ್ ಶಾಸಕರಾಗಿದ್ದ ರಮಾನಾಥ್ ರೈ ಅವರ ಸೋಲಿಗೂ ಕಾರಣವಾಗಿತ್ತು.

ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಬಿಸಿಯೂಟ ಸೌಲಭ್ಯ ಒದಗಿಸುವಂತೆ ಕಲ್ಲಡ್ಕದ ಶ್ರೀ ರಾಮ ಶಾಲೆ ಹಾಗೂ ಪುಣಚದ ಶ್ರೀದೇವಿ ಶಾಲೆಗಳು ಸರ್ಕಾರಕ್ಕೆ ಬೇಡಿಕೆ ಸಲ್ಲಿಸಿವೆ. ಅಕ್ಷರ ದಾಸೋಹದ ಅಧಿಕಾರಿಗಳು ಅರ್ಜಿ ಸ್ವೀಕರಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

ಜಟಾಪಟಿ ಹಿನ್ನೆಲೆ :

ಶ್ರೀರಾಮ ವಿದ್ಯಾಕೇಂದ್ರದ ಅನುದಾನಿತ ವಿಭಾಗಕ್ಕೆ ಸರ್ಕಾರದ ಅಕ್ಷರ ದಾಸೋಹದಡಿಯಲ್ಲಿ ಬಿಸಿಯೂಟ ಒದಗಿಸಲು ಅವಕಾಶವಿದ್ದು, ಈ ಕುರಿತಾಗಿ ಮನವಿ ಸಲ್ಲಿಸುವಂತೆ ಜಿ.ಪಂ.ಕಾರ್ಯನಿರ್ವಹಣಾಧಿಕಾರಿ, ಬಂಟ್ವಾಳ ಕ್ಷೇತ್ರ ಶಿಕ್ಷಣಾಧಿಕಾರಿಯವರು ಶಾಲಾ ಆಡಳಿತ ಮಂಡಳಿಗೆ ನಿರ್ದೇಶಿಸಿದ್ದರು. ಆದರೆ ಈ ಸಂಧರ್ಭ ‘ಸರ್ಕಾರದ ಯಾವುದೇ ನೆರವು ಬೇಡ, ಮಕ್ಕಳ ಪೋಷಕರು, ದಾನಿಗಳು, ಶಿಕ್ಷಣ ಪ್ರೇಮಿಗಳ ನೆರವಿನಿಂದ ಮಕ್ಕಳಿಗೆ ಮಧ್ಯಾಹ್ನದ ಊಟ ಕೊಡುತ್ತೇವೆ, ಎಂದು ಶಿಕ್ಷಣ ಇಲಾಖೆಯ ಅಕ್ಷರದಾಸೋಹದ ಬಗ್ಗೆ ನಿರಾಸಕ್ತಿ ತೋರಿದ್ದರು.

ಈ ಎಲ್ಲ ಬೆಳವಣಿಗೆಗಳ ಮಧ್ಯೆ ಕಲ್ಲಡ್ಕ ಶ್ರೀ ರಾಮ ಹಾಗೂ ಪುಣಚ ಶ್ರೀದೇವಿ ವಿದ್ಯಾ ಸಂಸ್ಥೆಗಳು ಮಧ್ಯಾಹ್ನದ ಬಿಸಿಯೂಟ ಯೋಜನೆಗೆ ಅರ್ಜಿ ಸಲ್ಲಿಸಿದ್ದು,

ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರದಲ್ಲಿ ಮೂರು ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳಿದ್ದರೂ, ಅನುದಾನಿತ ದ ವ್ಯಾಪ್ತಿಗೆ ಒಳಪಡುವ ಸುಮಾರು 900ರಷ್ಟು ಮಕ್ಕಳು ಹಾಗೂ ಪುಣಚದಲ್ಲಿ ಸುಮಾರು 100ರಷ್ಟು ಮಕ್ಕಳು ಸರ್ಕಾರದ ಬಿಸಿಯೂಟ ಯೋಜನೆಯ ಫಲಾನುಭವಿಗಳಾಗಲಿದ್ದಾರೆ. (ಎನ್.ಬಿ)

Leave a Reply

comments

Related Articles

error: