ಕರ್ನಾಟಕಪ್ರಮುಖ ಸುದ್ದಿ

ಪೇಜಾವರ ಶ್ರೀಗಳ ಇಫ್ತಾರ್ ಕೂಟಕ್ಕೆ ಪ್ರಮೋದ ಮುತಾಲಿಕ್ ವಿರೋಧ

ಬೆಳಗಾವಿ (ಜೂನ್ 2): ಮುಸ್ಲಿಮರಿಗೆ ರಂಜಾನ್ ಮಾಸಾಚರಣೆ ಪ್ರಯುಕ್ತ ಪೇಜವರ ಶ್ರೀಗಳು ಇಫ್ತಾರ್ ಕೂಟ ಆಯೋಜಿಸಲು ಮುಂದಾಗಿರುವ ಕ್ರಮಕ್ಕೆ ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ವಿರೋಧಿಸಿದ್ದಾರೆ.

ಇಫ್ತಾರ್ ಕೂಟವನ್ನು ಆಯೋಜಿಸಿರುವುದು ಸರಿಯಲ್ಲ. ಅದರ ವಿರುದ್ಧ ರಾಜ್ಯವ್ಯಾಪಿ ಪ್ರತಿಭಟನೆ ನಡೆಸುವುದಾಗಿ ಮುತಾಲಿಕ್ ಎಚ್ಚರಿಕೆ ನೀಡಿದ್ದಾರೆ. ಈ ಸಂಬಂಧ ವಿಡಿಯೋವೊಂದನ್ನು ಮಾಡಿರುವ ಮುತಾಲಿಕ್, ಸೌಹಾರ್ದ ತರುವ ಪ್ರಯತ್ನಗಳು ಒಂದು ಸಮುದಾಯದಿಂದ ಮಾತ್ರ ನಡೆಯುತ್ತಿದೆ. ಇನ್ನೊಂದು ಕಡೆಯಿಂದಲೂ ಅಂತಹ ಪ್ರಯತ್ನಗಳು ನಡೆದರೆ ಮಾತ್ರ ಅದಕ್ಕೆ ಅರ್ಥ ಬರುತ್ತದೆ ಎಂದಿದ್ದಾರೆ.

ಪೂಜ್ಯ ಪೇಜಾವರ ಸ್ವಾಮೀಜಿ ಅವರು ಮಠದ ಆವರಣದ ಹೊರಗೆ ಎಲ್ಲೋ ಮತ್ತೆ ಈ ವರ್ಷ ಇಫ್ತಾರ್ ಕೂಟ ಆಯೋಜನೆ ಮಾಡುವುದಾಗಿ ಹೇಳಿದ್ದಾರೆ. ಇದನ್ನು ಖಂಡಿಸುತ್ತೇವೆ. ಪೂಜ್ಯ ಪೇಜಾವರ ಸ್ವಾಮೀಜಿ ಬಗ್ಗೆ ಗೌರವವಿದೆ. ಅವರು ಅತ್ಯಂತ ಜ್ಞಾನಿಗಳು. ಅವರ ಮುಂದೆ ನಾವು ಏನೂ ಅಲ್ಲ. ಆದರೆ ನಮ್ಮದೂ ಒಂದು ಕರ್ತವ್ಯ ಇದೆ. ಗೋಮಾತೆಯ ರಕ್ಷಣೆಯ ಹಿನ್ನೆಲೆಯಲ್ಲಿ ನಾವು ಈ ಇಫ್ತಾರ್ ಕೂಟವನ್ನು ವಿರೋಧಿಸುತ್ತಿದ್ದೇವೆ ಎಂದು ಮುತಾಲಿಕ್ ಹೇಳಿದ್ದಾರೆ.

ಸೌಹಾರ್ದ ಎನ್ನುವುದು ಒಂದು ಕಡೆಯಿಂದ ಆಗಬಾರದು. ಹಿಂದೂಗಳಿಗೆ ಮಾತ್ರ ಸೌಹಾರ್ದದ ಉಪದೇಶ ಮಾಡುವಂತೆ ಆಗಬಾರದು. ಮುಸ್ಲಿಂ ಬಾಂಧವರಿಗೂ ಸೌಹಾರ್ದದ ಉಪದೇಶ ಮಾಡಬೇಕು. ಅವರ ಮಸೀದಿ ಒಳಗೆ ಗಣೇಶ ಮೂರ್ತಿಯನ್ನು ಇರಿಸಿ ಪೂಜೆ ಮಾಡಿದರೆ ಆಗ ಸೌಹಾರ್ದ ಸಾಕಾರವಾಗುತ್ತದೆ ಎಂದು ಮುತಾಲಿಕ್ ಆಗ್ರಹಪಡಿಸಿದ್ದಾರ.

ರಾಮಮಂದಿರ ಕಟ್ಟುವಂತಹ ಕಾರ್ಯಕ್ಕೆ ನಮ್ಮ ಅಭ್ಯಂತರ ಇಲ್ಲ ಎಂದು ಮುಸ್ಲಿಂ ಸಮುದಾಯ ಸಹಕಾರ ಕೊಟ್ಟರೆ ಅದು ಸೌಹಾರ್ದ ಆಗುತ್ತದೆ. ನೂರು ಕೋಟಿ ಜನ ಹಿಂದೂಗಳು ರಾಮಮಂದಿರದ ಜಪ ಮಾಡ್ತಿದ್ದೇವೆ. ಗೋ ಮಾತೆಯ ಬಗ್ಗೆ ಮಾತನಾಡುತ್ತಿದ್ದೇವೆ. ಇಂತಹ ಸಂದರ್ಭದಲ್ಲಿ ಸೌಹಾರ್ದದ ಪ್ರಯತ್ನ ಒಂದು ಕಡೆಯಿಂದ ಮಾತ್ರ ಆಗುತ್ತಿರುವುದನ್ನು ಖಂಡಿಸುತ್ತಿದ್ದೇವೆ ಎಂದು ಮುತಾಲಿಕ್ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ. (ಎನ್.ಬಿ)

Leave a Reply

comments

Related Articles

error: