ಕರ್ನಾಟಕಪ್ರಮುಖ ಸುದ್ದಿ

ಸಂಸತ್ ಚುನಾವಣೆಗೆ ಸೀಟು ಹಂಚಿಕೆ ಚರ್ಚೆ ಅಂತಿಮವಾಗಿಲ್ಲ: ಡಿಸಿಂ ಪರಮೇಶ್ವರ್ ಸ್ಪಷ್ಟನೆ

ಬೆಂಗಳೂರು (ಜೂನ್ 2): ಮುಂದಿನ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಮಾಡಕೊಳ್ಳುವುದು ಖಚಿತ, ಆದರೆ ಎರಡೂ ಪಕ್ಷಗಳ ನಡುವೆ ಸೀಟು ಹಂಚಿಕೆ ಮಾತುಕತೆ ಪೂರ್ಣಗೊಂಡಿಲ್ಲ ಎಂದು ಉಪಮುಖ್ಯಮಂತ್ರಿ ಜಿ.ಪರಮೇಶ್ವರ್ ಹೇಳಿದ್ದಾರೆ.

ನಗರದಲ್ಲಿಂದು ನೂತನ ಅರ್ಚಬಿಷಫ್ ಫೀಟರ್ ಮಚಾದೋ ಅವರನ್ನು ಭೇಟಿ ಮಾಡಿ ಅಭಿನಂದನೆ ಸಲ್ಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯನ್ನು ಸೋಲಿಸುವ ಸಲುವಾಗಿ ಮೈತ್ರಿ ಮಾಡಿಕೊಂಡಿದ್ದೇವೆ. ಆದರೆ ಯಾವ ಯಾವ ಕ್ಷೇತ್ರಗಳನ್ನು ಜೆಡಿಎಸ್‍’ಗೆ ಬಿಟ್ಟುಕೊಡಬೇಕು ಎಂಬ ಬಗ್ಗೆ ಇನ್ನೂ ಸ್ಪಷ್ಟವಾದ ನಿರ್ಧಾರ ತೆಗೆದುಕೊಂಡಿಲ್ಲ. ಮುಂದಿನ ದಿನಗಳ್ಲಲಿ ಎರಡು ಪಕ್ಷದ ಮುಖಂಡರು ಕುಳಿತು ಚರ್ಚೆ ಮಾಡುತ್ತೇವೆ. ಎರಡು ಪಕ್ಷಗಳು ಪ್ರಾಬಲ್ಯ ಇರುವ ಕಡೆ ನಾನು ಮತ್ತು ಮುಖ್ಯಮಂತ್ರಿ ಕುಳಿತು ಮಾತನಾಡುತ್ತೇವೆ. ಯಾವುದೇ ಗೊಂದಲಕ್ಕೆ ಅವಕಾಶ ಕೊಡುವುದಿಲ್ಲ, ಮೈತ್ರಿ ಸರ್ಕಾರದಲ್ಲಿ ಪಕ್ಷಗಳು ಕೊಟ್ಟು ತೆಗೆದುಕೊಳ್ಳುವ ನಿರ್ಧಾರಕ್ಕೆ ಬದ್ಧರಾಗಿರಬೇಕಾಗುತ್ತದೆ ಎಂದರು.

ಪಕ್ಷೇತರರಿಗೂ ಸಚಿವ ಸ್ಥಾನ:

ಸಚಿವ ಸಂಪುಟ ವಿಸ್ತರಣೆ ಕುರಿತು ಈಗಾಗಲೇ ಚರ್ಚೆಯಾಗಿದೆ, ಸಮಯವೂ ನಿಗದಿಯಾಗಿದೆ. ಎರಡೂ ಪಕ್ಷಗಳ ನಡುವೆ ಖಾತೆ ಹಂಚಿಕೆಯಾಗಿದೆ. ಸಂಪುಟಕ್ಕೆ ಯಾರನ್ನು ಸೇರಿಕೊಳ್ಳಬೇಕು ಎಂಬ ಬಗ್ಗೆ ಪಕ್ಷದದಲ್ಲಿ ಆಂತರಿಕವಾಗಿ ಚರ್ಚೆ ಮಾಡಿ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದರು. ಸಂಪುಟದಲ್ಲಿ ಖಾಲಿ ಇರುವ ಎಲ್ಲಾ ಸ್ಥಾನಗಳನ್ನು ಭರ್ತಿ ಮಾಡದೆ ಕೆಲವು ಸ್ಥಾನಗಳನ್ನು ಉಳಿಸಿಕೊಳ್ಳಲಾಗುತ್ತದೆ. ಕಾಂಗ್ರೆಸ್ ಪಾಲಿಗೆ ಬಂದಿರುವ 22 ಸ್ಥಾನಗಳಲ್ಲಿ ಪಕ್ಷೇತರರಿಗೂ ಅವಕಾಶ ಕಲ್ಪಿಸುವ ಕುರಿತು ಚರ್ಚೆ ನಡೆದಿದೆ. ಸಚಿವ ಸಂಪುಟಕ್ಕೆ ಹಿರಿಯರು-ಕಿರಿಯರು ಇಬ್ಬರೂ ಬೇಕು ಎಂದು ಹೇಳಿದರು.

ಸಿಎಂ ಸಭೆಯಲ್ಲಿ ಮೊಬೈಲ್ ನಿಷೇಧ:

ಇನ್ನು ಸಿಎಂ ಸಭೆಗಳಲ್ಲಿ ಮೊಬೈಲ್ ಫೋನ್ ರದ್ದು ವಿಚಾರದ ಕುರಿತು ಪ್ರತಿಕ್ರಿಯೆ ನೀಡಿ, ಸಭೆಯಗಳಲ್ಲಿ ಮೊಬೈಲ್‌ನಿಂದಾಗಿ ಕಿರಿಕಿರಿ ಉಂಟಾಗುತ್ತದೆ. ಜತೆಗೆ ಕೆಲಸ ಸುಗಮವಾಗಿ ನಡೆಯಲು ಸಾಧ್ಯವಾಗುವುದಿಲ್ಲ ಹಾಗಾಗಿ ಮೊಬೈಲ್ ನಿಷೇಧ ಮಾಡಬೇಕಾಗಿದೆ ಎಂದರು.

 

ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಮತ್ತು ಸಂಸದ ಡಿ.ಕೆ.ಸುರೇಶ್ ಮೇಲಿನ ಸಿಬಿಐ ದಾಳಿ ರಾಜಕೀಯ ದ್ವೇಷದ ಕ್ರಮವಾಗಿದೆ. ಕೇಂದ್ರ ಸರ್ಕಾರ ತನಿಖಾ ಸಂಸ್ಥೆಗಳನ್ನು ದುರುಪಯೋಗಪಡಿಸಿಕೊಂಡು ಕಾಂಗ್ರೆಸ್ ನಾಯಕರನ್ನು ಬೆದರಿಸಲು ಪ್ರಯತ್ನಿಸುತ್ತಿದೆ ಎಂದರು. ಡಿ.ಕೆ.ಶಿವಕುಮಾರ್ ಬೆಂಬಲಿಗರನ್ನು ವಿಚಾರಣೆ ನಡೆಸಿ ಡಿ.ಕೆ.ಸುರೇಶ್ ಅವರ ಹೆಸರು ಹೇಳುವಂತೆ ಒತ್ತಾಯಿಸುತ್ತಿರುವುದು ಸರಿಯಲ್ಲ. ಒಂದು ವೇಳೆ ಅದು ನಿಜವೇ ಆಗಿದ್ದರೆ ಖಂಡನೀಯ ಎಂದು ಹೇಳಿದರು.

ಕೆಪಿಸಿಸಿಗೆ ನೂತನ ಅಧ್ಯಕ್ಷ ನೇಮಕ ಶೀಘ್ರ:

ಕೆಪಿಸಿಸಿಗೆ ಶೀಘ್ರವೇ ಅಧ್ಯಕ್ಷರನ್ನು ನೇಮಿಸಲಾಗುತ್ತದೆ. ನನಗಿಂತಲೂ ಸಮರ್ಥವಾಗಿ ಕೆಲಸ ಮಾಡುವವರು ಪಕ್ಷದಲ್ಲಿದ್ದಾರೆ. ಆಕಾಂಕ್ಷಿಗಳ ಸಂಖ್ಯೆ ಹೆಚ್ಚಿದೆ. ಹೈಕಮಾಂಡ್ ಎಲ್ಲಾ ಲೆಕ್ಕಾಚಾರಗಳನ್ನು ಹಾಕಿ ಸಮರ್ಥ ಅಭ್ಯರ್ಥಿಯನ್ನು ಆಯ್ಕೆ ಮಾಡುತ್ತದೆ. ಆನಂತರ ನಾನು ಅಧ್ಯಕ್ಷ ಸ್ಥಾನದ ಜವಾಬ್ದಾರಿಯನ್ನು ಅವರಿಗೆ ಬಿಟ್ಟುಕೊಡುತ್ತೇನೆ ಎಂದು ಪ್ರಶ್ನೆಯೊಂದಕ್ಕೆ ಪರಮೇಶ್ವರ್ ಉತ್ತರಿಸಿದರು. ಗೌರಿಲಂಕೇಶ್ ಹತ್ಯೆ ಪ್ರಕರಣದಲ್ಲಿ ತನಿಖೆ ಚುರುಕುಗೊಂಡಿದೆ, ಚಾರ್ಜ್‍ಶೀರ್ಟ್ ಸಲ್ಲಿಕೆಯಾಗಿದೆ. ಸದ್ಯದಲ್ಲೇ ತನಿಖೆ ಪೂರ್ಣಗೊಳ್ಳಲಿದೆ ಎಂದು ಅವರು ಹೇಳಿದರು.

ನೂತನ ಅರ್ಚಬಿಷಫ್ ಆಗಿ ನೆಮಕಗೊಂಡಿರುವ ಫೀಟರ್ ಮಚಾದೋ ಅವರನ್ನು ಭೇಟಿಯಾಗಿ ಅಭಿನಂದನೆ ಸಲ್ಲಿಸಿದ್ದೇನೆ. ಮುಂದಿನ ದಿನಗಳಲ್ಲಿ ಪೀಟರ್ ಮಚಾದೋ ಅವರು ಸಂಸ್ಥೆಯನ್ನು ಇನ್ನಷ್ಟು ಸದೃಢವಾಗಿ ಕಟ್ಟಲಿದ್ದಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು. (ಎನ್.ಬಿ)

Leave a Reply

comments

Related Articles

error: