
ಮೈಸೂರು
ಮೈಸೂರಿನಲ್ಲಿ ಜಾಂಬೋರಿ ಕಾರ್ಯಕ್ರಮ ಡಿ. 29ರಿಂದ : ಪಿ.ಜಿ.ಆರ್. ಸಿಂಧ್ಯಾ
ಡಿಸೆಂಬರ್ 29 ರಿಂದ ಮೈಸೂರಿನಲ್ಲಿ ನಡೆಯಲಿರುವ 17ನೇ ರಾಷ್ಟ್ರೀಯ ಜಾಂಬೋರಿ ಕಾರ್ಯಕ್ರಮವು 33 ವರ್ಷಗಳ ನಂತರ ಕರ್ನಾಟಕಕ್ಕೆ ಸಿಕ್ಕಿರುವ ಅವಕಾಶವಾಗಿದ್ದು, ಈ ಅವಕಾಶ ಅವಿಸ್ಮರಣೀಯವಾಗಿ ಉಳಿಯುವಂತೆ ಆಯೋಜಿಸಬೇಕು ಎಂದು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ನ ರಾಜ್ಯ ಮುಖ್ಯ ಆಯುಕ್ತರಾದ ಪಿ.ಜಿ.ಆರ್. ಸಿಂಧ್ಯಾ ಅವರು ಹೇಳಿದರು.
ಬುಧವಾರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಡಿಸೆಂಬರ್ 29 ರಿಂದ ಜನವರಿ 4 ರವರೆಗೆ ಪ್ರತಿ ದಿನ ಬೆಳಗ್ಗೆ 6 ಗಂಟೆಯಿಂದ ರಾತ್ರಿ 10 ಗಂಟೆವರೆಗೆ ವಿವಿಧ ಕಾರ್ಯಕ್ರಮಗಳು ನಡೆಯುತ್ತವೆ. ಭಾರತದ ಪೂರ್ವ, ಪಶ್ಚಿಮ, ಉತ್ತರ, ದಕ್ಷಿಣ ಭಾಗದ ಕಲಾ ವೈಶಿಷ್ಟ್ಯಗಳು ಇಲ್ಲಿ ಮೇಳೈಸಲಿವೆ ಎಂದು ಹೇಳಿದರು.
ಸ್ಕೌಟ್ಸ್ ನ ಸುಮಾರು 25 ಸಾವಿರ ವಿದ್ಯಾರ್ಥಿಗಳು ಭಾಗವಹಿಸುವುದರಿಂದ ಅವರ ವಿಶೇಷ ಅನುಭವಕ್ಕಾಗಿ ವಿಮಾನ ಹಾರಾಟ ಪ್ರದರ್ಶನ, ಗಡಿ ಭದ್ರತಾ ಪಡೆಯಿಂದ ಸೇನಾ ಚಟುವಟಿಕೆ ಪ್ರದರ್ಶನ, ಎಚ್.ಎ.ಎಲ್. ಸಂಸ್ಥೆ ವತಿಯಿಂದ ಯುದ್ಧ ಶಸ್ತ್ರಾಸ್ತ್ರಗಳ ಪ್ರದರ್ಶನ ಏರ್ಪಡಿಸಲಾಗಿದೆ. ಅರಣ್ಯ, ಪ್ರವಾಸೋದ್ಯಮ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಕೃಷಿ ಇಲಾಖೆ, ರೇಷ್ಮೆ ಇಲಾಖೆ, ವಸ್ತು ಪ್ರದರ್ಶನ ಮಳಿಗೆಗಳು ಸಹ ಇರುತ್ತವೆ. ಇಸ್ರೋ ಸಂಸ್ಥೆ ಸಹ ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದೆ ಎಂದು ಹೇಳಿದರು.
ಕುಡಿಯುವ ನೀರು, ಸಾರಿಗೆ, ಕೊಠಡಿ, ವಿದ್ಯುತ್, ಭದ್ರತೆ, ಆರೋಗ್ಯ, ಹಾಗೂ ಸ್ವಚ್ಛತೆ ಸಮಿತಿಗಳ ಜವಾಬ್ದಾರಿ ಹೆಚ್ಚಿದ್ದು, ಈ ಸಮಿತಿಗಳ ಪಾತ್ರ ಪ್ರಮುಖವಾಗಿದೆ ಎಂದು ಹೇಳಿದರು. ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ನ ರೋವೆರ್ಸ್ ಮತ್ತು ರೇಂಜರ್ಸ್ಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಸ್ವಯಂ ಸೇವಕರಾಗಿ ನಿಯೋಜಿಸಲಾಗುತ್ತದೆ ಎಂದು ಅವರು ಹೇಳಿದರು.
ಸಭೆಯಲ್ಲಿ ಜಿಲ್ಲಾಧಿಕಾರಿ ರಂದೀಪ್, ಅಪರ ಜಿಲ್ಲಾಧಿಕಾರಿ ಟಿ. ವೆಂಕಟೇಶ್, ಜಿಲ್ಲಾ ಸ್ಕೌಟ್ಸ್ ಮತ್ತು ಗೈಡ್ಸ್ನ ಜಿಲ್ಲಾ ಮುಖ್ಯ ಆಯುಕ್ತರಾದ ವಿಶ್ವನಾಥ್ ಮತ್ತಿತರರು ಉಪಸ್ಥಿತರಿದ್ದರು.