ಮೈಸೂರು

ಸಮಾಜವನ್ನು ಚಾರಿತ್ರಿಕವಾಗಿ ಜಾಗೃತಗೊಳಿಸಿ ಎಚ್ಚರಿಸುವುದೇ ಬಹುಜನ ಸಮಾಜ ಪಕ್ಷದ ಚಳುವಳಿಯ ಪ್ರಮುಖ ಉದ್ದೇಶ : ಬಿ.ಆರ್.ಪುಟ್ಟಸ್ವಾಮಿ

ಮೈಸೂರು,ಜೂ.4:- ಪ್ರಸ್ತುತ ಸಮಾಜವನ್ನು ಚಾರಿತ್ರಿಕವಾಗಿ ಜಾಗೃತಗೊಳಿಸಿ, ಬಹುಜನರನ್ನು ರಾಜಕೀಯದಿಂದ ಎಚ್ಚರಿಸುವುದೇ ಬಹುಜನ ಸಮಾಜ ಪಕ್ಷದ ಚಳುವಳಿಯ ಪ್ರಮುಖ ಉದ್ದೇಶವಾಗಿದೆ ಎಂದು ಬಿಎಸ್ಪಿ ಕ್ಷೇತ್ರ ಉಸ್ತುವಾರಿ ಹಾಗೂ ಹಿರಿಯ ಮುಖಂಡ ಬಿ.ಆರ್.ಪುಟ್ಟಸ್ವಾಮಿ ಹೇಳಿದರು.

ತಿ.ನರಸೀಪುರ ಪಟ್ಟಣದ ಕಾಲೇಜು ರಸ್ತೆಯಲ್ಲಿ ಇತ್ತೀಚೆಗೆ  ನಡೆದ ಬಹುಜನ ಸಮಾಜ ಪಕ್ಷದ ಕಛೇರಿ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿ, ಪ್ರಬುದ್ಧ ರಾಷ್ಟ್ರವಾಗಬೇಕಿದ್ದ ಭಾರತ ದೇಶದ ಹಲವಾರು ಐತಿಹಾಸಿಕ ಘಟನೆಗಳನ್ನು ಮರೆಮಾಚಿರುವ ಮನುವಾದಿ ವ್ಯವಸ್ಥೆ ಬರೀ ಸುಳ್ಳನ್ನೇ ಜನರ ತಲೆಯಲ್ಲಿ ತುಂಬುತ್ತಿದೆ. ಗತಕಾಲದಲ್ಲಿ ಮುಚ್ಚಿ ಹೋಗಿರುವ ಐತಿಹಾಸಿಕ ಸತ್ಯ ಸಂಗತಿಗಳನ್ನು ತೆಗೆದು ಜನರಲ್ಲಿ ಚಾರಿತ್ರಿಕ ಜಾಗೃತಿ ಮೂಡಿಸುವುದು ಬಿಎಸ್ಪಿ ಚಳುವಳಿಯಾಗಿದೆ ಎಂದರು. ಮೈಸೂರು ಸಂಸ್ಥಾನದ ದೊರೆಯಾಗಿದ್ದ ನಾಲ್ವಡಿ ಕೃಷ್ಣರಾಜ ಓಡೆಯರ್ ಅವರು ಬಂಜರು ಕೃಷಿ ಭೂಮಿಗೆ ನೀರಾವರಿ ಸೌಲಭ್ಯವನ್ನು ಕಲ್ಪಿಸಲು ಕೆಆರ್‍ಎಸ್ ಜಲಾಶಯವನ್ನು ನಿರ್ಮಾಣ ಮಾಡಿದರು. ಆದರೆ ಡ್ಯಾಂ ಕಟ್ಟಿದವರು ಇಂಜಿನಿಯರ್ ಆಗಿದ್ದ ಸರ್.ಎಂ.ವಿಶ್ವೇಶ್ವಯ್ಯ ಅವರು ಎಂಬಂತೆ ಬಿಂಬಿಸಲಾಗಿದೆ. ಜೊತೆಗೆ ರಾಜಕೀಯ ಅಧಿಕಾರದ ಬಗ್ಗೆ ಜನರನ್ನು ಎಚ್ಚರಗೊಳಿಸುವ ಕೆಲಸವನ್ನು ಮಾಡುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದು ತಿಳಿಸಿದರು.

ನೂತನ ಕಛೇರಿಯನ್ನು ನಳಂದ ಬುದ್ಧ ವಿಹಾರದ ಬೋಧಿರತ್ನ ಭಂತೇಜಿ ಉದ್ಘಾಟಿಸಿದರು. ಇದೇ ಸಂದರ್ಭದಲ್ಲಿ ಪಕ್ಷದ ರಾಜ್ಯಾಧ್ಯಕ್ಷ, ಕೊಳ್ಳೇಗಾಲ ಶಾಸಕ ಎನ್.ಮಹೇಶ್ ಅವರ 63ನೇ ವರ್ಷದ ಹುಟ್ಟುಹಬ್ಬವನ್ನು ಸರಳವಾಗಿ ಆಚರಣೆ ಮಾಡಲಾಯಿತು. ಬಿಎಸ್ಪಿ ಜಿಲ್ಲಾ ಕಾರ್ಯದರ್ಶಿ ಯರಗನಹಳ್ಳಿ ಬಿ.ಮಹದೇವಸ್ವಾಮಿ, ತಾಲೂಕು ಪ್ರಧಾನ ಕಾರ್ಯದರ್ಶಿ ಪುಟ್ಟಮರುಡಯ್ಯ, ಮತ್ತಿತರರು ಉಪಸ್ಥಿತರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: