
ಮೈಸೂರು
ಹಾಸ್ಟೆಲ್ ಅವ್ಯವಸ್ಥೆ ವಿರುದ್ಧ ತಾಪಂ ಅಧ್ಯಕ್ಷರ ಅಸಮಾಧಾನ
ತಾಲೂಕು ಪಂಚಾಯಿತಿ ಅಧ್ಯಕ್ಷೆ ಕಾಳಮ್ಮ ಕೆಂಪರಾಮಯ್ಯ ಮತ್ತು ಉಪಾಧ್ಯಕ್ಷ ಮಂಜು ಅವರು ಗುರುವಾರದಂದು ಪಡುವಾರಹಳ್ಳಿಯಲ್ಲಿರುವ ಸಮಾಜ ಕಲ್ಯಾಣ ಇಲಾಖೆಯ ಹಾಸ್ಟೆಲ್ಗೆ ಭೇಟಿ ನೀಡಿದರು.
ಈ ವೇಳೆ ಹಾಸ್ಟೆಲ್ನಲ್ಲಿದ್ದ ವಿದ್ಯಾರ್ಥಿನಿಯರು ತಮ್ಮ ಕುಂದುಕೊರತೆಗಳನ್ನು ತಾಪಂ ಅಧ್ಯಕ್ಷರಲ್ಲಿ ಹಂಚಿಕೊಂಡರು. ಬಿಸಿ ನೀರಿಗೆ ಸೋಲಾರ್ ವ್ಯವಸ್ಥೆಯನ್ನು ಅಳವಡಿಸಲಾಗಿದ್ದರೂ, ಇಲ್ಲಿಯವರೆಗೆ ಸಂಪರ್ಕ ನೀಡಿಲ್ಲ. ಹಾಗಾಗಿ ಸ್ನಾನಕ್ಕೆ ಬಿಸಿನೀರು ಬರುತ್ತಿಲ್ಲ. ಕುಡಿಯಲು ಶುದ್ಧೀಕರಿಸಿದ ನೀರು ನೀಡುತ್ತಿಲ್ಲ. ಇದರಿಂದಾಗಿ ಆಗಾಗ ಆರೋಗ್ಯದಲ್ಲಿ ಏರುಪೇರಾಗುತ್ತಿದೆ. ರಾತ್ರಿ ವೇಳೆ ಕೆಲ ಕಿಡಿಗೇಡಿಗಳು ಹಾಸ್ಟೆಲ್ ಹಿಂಭಾಗದ ಕಿಟಕಿ ಮೂಲಕ ಕಲ್ಲು ಎಸೆಯುತ್ತಾರೆ, ಕಿರುಚಾಡುತ್ತಾರೆ. ಇದಕ್ಕೆ ಕಡಿವಾಣ ಹಾಕಬೇಕೆಂದು ಮನವಿ ಮಾಡಿದರು.
ವಿದ್ಯಾರ್ಥಿನಿಯರ ಸಮಸ್ಯೆಯನ್ನು ಆಲಿಸಿದ ಬಳಿಕ ತಾಪಂ ಅಧ್ಯಕ್ಷೆ ಕಾಳಮ್ಮ ಅವರು ಸಮಾಜ ಕಲ್ಯಾಣ ಅಧಿಕಾರಿಗಳಿಗೆ ಸೋಲಾರ್ ನೀರಿನ ವ್ಯವಸ್ಥೆ, ಕುಡಿಯಲು ಶುದ್ಧ ನೀರು ಮತ್ತು ಹಾಸ್ಟೆಲ್ ಸುತ್ತ ಸಿಸಿಟಿವಿ ಕ್ಯಾಮೆರಾ ಹಾಕುವಂತೆ ಸೂಚಿಸಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿದ್ಯಾಭ್ಯಾಸಕ್ಕಾಗಿ ಹಳ್ಳಿಯಿಂದ ಹಾಸ್ಟೆಲ್ಗಳಿಗೆ ಬರುವ ವಿದ್ಯಾರ್ಥಿಗಳಿಗೆ ಮೂಲಸೌಲಭ್ಯವನ್ನು ಸಮರ್ಪಕವಾಗಿ ಒದಗಿಸುವುದು ನಮ್ಮೆಲ್ಲರ ಕರ್ತವ್ಯ. ಸರಕಾರವು ಹಲವು ಸೌಲಭ್ಯಗಳನ್ನು ನೀಡಿದೆ. ಆದರೆ, ಅಧಿಕಾರಿಗಳ ಉದಾಸೀನದಿಂದ ವಿದ್ಯಾರ್ಥಿಗಳು ಸೌಲಭ್ಯದಿಂದ ವಂಚಿತರಾಗಿದ್ದಾರೆ. ಒಂದು ವಾರದಲ್ಲಿ ಎಲ್ಲ ಸಮಸ್ಯೆಗಳನ್ನು ಬಗೆಹರಿಸಿ ವರದಿ ನೀಡುವಂತೆ ಸೂಚಿಸಿದ್ದೇನೆ. ಮತ್ತೆ ವಿಳಂಬ ಮಾಡಿದಲ್ಲಿ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.