ಪ್ರಮುಖ ಸುದ್ದಿ

ಕಂದಾಯ ಆದೇಶ ಹಿಂಪಡೆಯದಿದ್ದರೆ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ : ಶಾಸಕ ಕೆ.ಜಿ.ಬೋಪಯ್ಯ ಎಚ್ಚರಿಕೆ

ರಾಜ್ಯ(ಮಡಿಕೇರಿ) ಜೂ.4 : – ಜಾಗದ ಕಂದಾಯ ನಿಗದಿಪಡಿಸಲು ಮತ್ತು ಪರಿವರ್ತನೆಗೊಳಿಸಲು ಕಂದಾಯ ಇಲಾಖೆ 1912ನೇ ಇಸವಿಯ ಜಮಾಬಂದಿಯನ್ನು ಕಡ್ಡಾಯಗೊಳಿಸಿರುವುದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಶಾಸಕ ಕೆ.ಜಿ.ಬೋಪಯ್ಯ ಅವರು, ಇದನ್ನು ತಕ್ಷಣ ಹಿಂದಕ್ಕೆ ಪಡೆಯಬೇಕೆಂದು ಒತ್ತಾಯಿಸಿದ್ದಾರೆ. ಒಂದು ವಾರದೊಳಗೆ ಕ್ರಮ ಕೈಗೊಳ್ಳದಿದ್ದಲ್ಲಿ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕುವುದಾಗಿ ಎಚ್ಚರಿಕೆ ನೀಡಿದ್ದಾರೆ.

ಪೊನ್ನಂಪೇಟೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 2013ರಲ್ಲಿ ರಾಜ್ಯದಲ್ಲಿ ಬಿ.ಜೆ.ಪಿ. ಸರಕಾರ ಅಧಿಕಾರದಲ್ಲಿದ್ದ ಸಂದರ್ಭದಲ್ಲಿ ಕರ್ನಾಟಕ ಭೂ ಕಂದಾಯ ಕಾಯ್ದೆಗೆ ತಿದ್ದುಪಡಿ ತರಲಾಗಿದೆ. ಈ ತಿದ್ದುಪಡಿಯ ಹಿನ್ನೆಲೆಯಲ್ಲಿ ಬಾಣೆ ಸೇರಿದಂತೆ ಇನ್ನಿತರ ಜಾಗಕ್ಕೆ ಕಂದಾಯ ನಿಗದಿಪಡಿಸುವುದು ಇಲಾಖೆಯ ಕರ್ತವ್ಯವಾಗಿದೆ. ಆದರೆ ಇದೀಗ ಕಂದಾಯ ಇಲಾಖೆ ಕಾನೂನನ್ನು ಗಾಳಿಗೆ ತೂರಿ ಕಂದಾಯ ನಿಗದಿಗೆ 1912ನೇ ಇಸವಿಯ ಜಮಾಬಂದಿ ಹಾಜರುಪಡಿಸುವಂತೆ ಜನರಿಗೆ ಕಿರುಕುಳ ನೀಡುತ್ತಿದೆ ಎಂದು ಆರೋಪಿಸಿದರು.

ಕಂದಾಯ ನಿಗದಿ ಮತ್ತು ಜಾಗ ಪರಿವರ್ತನೆ ಕಡತಗಳನ್ನು ಜಮಾಬಂದಿಯ ನೆಪ ಹೇಳಿ ಉಪ ವಿಭಾಗಾಧಿಕಾರಿಗಳು ಹಿಂತಿರುಗಿಸುತ್ತಿದ್ದಾರೆ. ಅಧಿಕಾರಿಗಳ ಈ ಕ್ರಮ  ಸರಿಯಲ್ಲ. ಇದನ್ನು  ಸಹಿಸಲು ಸಾಧ್ಯವಿಲ್ಲ.    ಇದೊಂದು ಜನವಿರೋಧಿ ನೀತಿಯಾಗಿದ್ದು, ಇದು ಕಂದಾಯ ಇಲಾಖೆ ಜನತೆಗೆ ಮಾಡುತ್ತಿರುವ ಅನ್ಯಾಯವಾಗಿದೆ ಎಂದು ಕೆ.ಜಿ. ಬೋಪಯ್ಯ ಕಿಡಿಕಾರಿದರು.

ಜಾಗದ ಕಂದಾಯ ನಿಗದಿಪಡಿಸಲು ಮತ್ತು ಜಾಗ ಪರಿವರ್ತನೆಗೊಳಿಸುವ ಜನರ ನೂರಾರು ಕಡತಗಳನ್ನು ಉಪವಿಭಾಗಾಧಿಕಾರಿಗಳು ಇತ್ತಿಚೇಗೆ ಹಿಂದಕ್ಕೆ ಕಳುಹಿಸಿದ್ದಾರೆ. ಇದರಿಂದ ಜನರಿಗೆ ತೀವ್ರ ತೊಂದರೆಯಾಗುತ್ತಿದೆ. ಹಲವಾರು ಬಡ ಜನರು ಇದರಿಂದ ತೀವ್ರ ಸಂಕಷ್ಟಕ್ಕೆ ಒಳಗಾಗಿದ್ದು, ಪ್ರತಿನಿತ್ಯ ಕಂದಾಯ ಕಚೇರಿಗಳಿಗೆ ಅಲೆದಾಡಿ ಸುಸ್ತಾಗಿದ್ದಾರೆ. ಉಪವಿಭಾಗಾಧಿಕಾರಿಗಳ ಈ ಕ್ರಮ ಇಲಾಖೆಯಲ್ಲಿ ಮತ್ತಷ್ಟು ಭ್ರಷ್ಟಾಚಾರಕ್ಕೆ ಅವಕಾಶ ಮಾಡಿಕೊಟ್ಟಂತಿದೆ.   ಇದರಿಂದಾಗಿ ಜನತೆ ರೋಸಿ ಹೋಗಿದ್ದು, ಜನರ ತಾಳ್ಮೆಯ ಕಟ್ಟೆಯೊಡೆಯುವ ಮುನ್ನ ಕಂದಾಯ ಇಲಾಖಾಧಿಕಾರಿಗಳು ಎಚ್ಚೆತ್ತುಕೊಳ್ಳುವುದು ಉತ್ತಮ ಅವರು ಅಭಿಪ್ರಾಯಪಟ್ಟರು.

ಈ ಬಗ್ಗೆ ಜಿಲ್ಲಾಧಿಕಾರಿಗಳು ಕೂಡಲೇ ಗಮನ ಹರಿಸಿ ಆದೇಶ ಹಿಂಪಡೆಯಲು ಕ್ರಮ ತೆಗೆದುಕೊಳ್ಳಬೇಕು. ಮುಂದಿನ 8 ದಿನಗೊಳಗಾಗಿ ಆದೇಶ ಹಿಂಪಡೆದು ಸಮಸ್ಯೆ ಪರಿಹರಿಸದಿದ್ದಲ್ಲಿ ಬಿ.ಜೆ.ಪಿ.   ವತಿಯಿಂದ ಸಾರ್ವಜನಿಕರನ್ನು ಸಂಘಟಿಸಿ ಜಿಲ್ಲಾಧಿಕಾರಿಗಳ ಕಚೇರಿಗೆ ಮುತ್ತಿಗೆ ಹಾಕಿ ತೀವ್ರ ರೀತಿಯ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.

ಈ ಸಂದರ್ಭ ಬಿಜೆಪಿ ಪ್ರಮುಖರಾದ ಕೆ.ಬಿ.ಗಿರೀಶ್ ಗಣಪತಿ, ಮಲ್ಲಂಡ ಮಧು ದೇವಯ್ಯ ಮೊದಲಾದವರು ಹಾಜರಿದ್ದರು.  (ಕೆಸಿಐ,ಎಸ್.ಎಚ್)

Leave a Reply

comments

Related Articles

error: