ದೇಶಮನರಂಜನೆ

ನಟ ಸುನೀಲ್ ಶೆಟ್ಟಿಯವರನ್ನು ಭೇಟಿಯಾದ `ಡ್ಯಾನ್ಸಿಂಗ್ ಅಂಕಲ್’ ಸಂಜೀವ್ ಶ್ರೀವಾಸ್ತವ

ಭೋಪಾಲ್,ಜೂ.5-ತಮ್ಮ ನೃತ್ಯದ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಹವಾ ಸೃಷ್ಟಿಸಿ `ಡ್ಯಾನ್ಸಿಂಗ್ ಅಂಕಲ್’ ಎಂದೇ ಹೆಸರು ಗಳಿಸಿರುವ ಸಂಜೀವ್ ಶ್ರೀವಾಸ್ತವ ಈಗ ದೊಡ್ಡ ಸೆಲೆಬ್ರಿಟಿಯಾಗಿದ್ದಾರೆ.

ಮಧ್ಯಪ್ರದೇಶದ ಭೋಪಾಲ್‌ನ ಭಾಭಾ ಎಂಜಿನಿಯರಿಂಗ್ ರೀಸರ್ಚ್ ಸಂಸ್ಥೆಯಲ್ಲಿ ಅಸಿಸ್ಟೆಂಟ್ ಪ್ರೊಫೆಸರ್ ಆಗಿರುವ ಶ್ರೀವಾಸ್ತವಗೆ ಈಗ ದೊಡ್ಡ ಫಾನ್ ಫಾಲೋಯಿಂಗ್ ಇದೆ. ಡ್ಯಾನ್ಸಿಂಗ್ ಅಂಕಲ್ ಅವರನ್ನು ಕಂಡೊಡನೆ ಜನರು ಎಲ್ಲಿದ್ದರೂ ಓಡಿ ಬಂದು ಅವರೊಂದಿಗೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳುತ್ತಿದ್ದಾರೆ.

ಶ್ರೀವಾಸ್ತವ್ ಅವರ ಡ್ಯಾನ್ಸ್, ಬಾಲಿವುಡ್ ಸ್ಟಾರ್‌ಗಳ ಗಮನವನ್ನೂ ಸೆಳೆದಿದೆ. ಇತ್ತೀಚೆಗೆ ಮುಂಬೈಗೆ ತೆರಳಿದ್ದ ಶ್ರೀವಾಸ್ತವ್ ನಟ ಸುನೀಲ್ ಶೆಟ್ಟಿ ಅವರನ್ನು ಭೇಟಿಯಾಗಿದ್ದಾರೆ. ನನಗೆ ಮೊದಲ ಆಹ್ವಾನ ಬಂದಿದ್ದು ಸುನೀಲ್ ಶೆಟ್ಟಿ ಅವರಿಂದ. ಅವರನ್ನು ಭೇಟಿ ಮಾಡಿದ್ದೆ. ಶೀಘ್ರದಲ್ಲಿಯೇ ನನಗಾಗಿ ಒಂದು ಯೋಜನೆಯನ್ನು ರೂಪಿಸುವುದಾಗಿ ಅವರು ತಿಳಿಸಿದ್ದಾರೆ ಎಂದು ಶ್ರೀವಾಸ್ತವ್ ಹೇಳಿದ್ದಾರೆ. ಸುನೀಲ್ ಶೆಟ್ಟಿ ಮಾತ್ರವಲ್ಲದೆ, ನಟಿ ನೀಲಂ ಅವರನ್ನೂ ಭೇಟಿಯಾಗಿದ್ದಾರೆ.

ಇವರ ಡ್ಯಾನ್ಸಿಂಗ್ ವಿಡಿಯೋ ನೋಡಿರುವ ಗೋವಿಂದ ಅವರು, ನೀವು ನರ್ತಿಸುವಾಗ ಎಂಜಾಯ್ ಮಾಡುತ್ತಿದ್ದುದ್ದನ್ನು ನೋಡಿದೆ. ನಿಮ್ಮೊಳಗೆ ಎಂಜಾಯ್ ಮಾಡುವುದನ್ನು ಮುಂದುವರಿಸಿ. ವೇದಿಕೆಯಲ್ಲಿ ನಿಮ್ಮ ಪತ್ನಿ ಕೂಡ ನರ್ತಿಸಿದ್ದು ಇಷ್ಟವಾಯಿತು ಎಂದಿದ್ದರು.

ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರೂ ಡ್ಯಾನ್ಸಿಂಗ್ ಅಂಕಲ್‌ನ ನೃತ್ಯ ಮೆಚ್ಚಿ ಸಾಮಾಜಿಕ ಮಾಧ್ಯಮಗಳಲ್ಲಿ ಶುಭಾಶಯದ ಪೋಸ್ಟ್ ಹಾಕಿದ್ದಾರೆ.

ಕಾಲೇಜು ತರಗತಿಗಳ ಕಾರಣ ಶ್ರೀವಾಸ್ತವ ಅವರಿಗೆ ನರ್ತಿಸಲು ಹೆಚ್ಚು ಸಮಯ ಸಿಗುತ್ತಿಲ್ಲ. ಆದರೆ, ಕಡೇಪಕ್ಷ ಭಾನುವಾರದ ಕೆಲವು ಸಮಯವನ್ನಾದರೂ ಅದಕ್ಕೆ ಮೀಸಲಿಡುತ್ತಿರುವುದಾಗಿ ಅವರು ಹೇಳಿದ್ದಾರೆ. ಇಷ್ಟು ಅಲ್ಪಾವಧಿಯಲ್ಲಿ ಸ್ಟಾರ್‌ಗಿರಿ ಪಡೆದಿದ್ದು ಚಮತ್ಕಾರವೇ ಸರಿ ಎನ್ನುವುದು ಅವರ ಅಭಿಪ್ರಾಯ. ಭಾರತ ಮಾತ್ರವಲ್ಲ, ಅವರಿಗೆ ವಿದೇಶಗಳಲ್ಲಿಯೂ ಅಭಿಮಾನಿಗಳು ಹುಟ್ಟಿಕೊಂಡಿದ್ದಾರೆ. ಇದೆಲ್ಲವೂ ದೇವರ ಕೃಪೆ ಮತ್ತು ತಂದೆ ತಾಯಿಗಳ ಆಶೀರ್ವಾದದ ಫಲ ಎನ್ನುತ್ತಾರೆ ಶ್ರೀವಾಸ್ತವ್. (ಎಂ.ಎನ್)

Leave a Reply

comments

Related Articles

error: