ಮೈಸೂರು

ಕಲೆ ಕೇವಲ ಪ್ರದರ್ಶನಕ್ಕೆ ಸೀಮಿತವಾಗುತ್ತಿರುವುದು ದುರದೃಷ್ಟಕರ: ಡಾ.ಆರ್.ವಿ. ರಾಘವೇಂದ್ರ

ಇಂದು ನೃತ್ಯ, ಸಂಗೀತ ಸೇರಿದಂತೆ ಎಲ್ಲ ಕಲೆಗಳು ಕೇವಲ ಪ್ರದರ್ಶನಕ್ಕೆ ಮಾತ್ರ ಸೀಮಿತವಾಗಿದ್ದು, ಕಲೆಯ ಬೆಳವಣಿಗೆಗೆ ಸಂಬಂಧಿಸಿದಂತಹ ಕಾರ್ಯಕ್ರಮಗಳು ಹೆಚ್ಚಾಗಿ ನಡೆಯುತ್ತಿಲ್ಲ ಎಂದು ಬೆಂಗಳೂರಿನ ಅನನ್ಯ ಸಂಸ್ಥೆಯ ನಿರ್ದೇಶಕ ಡಾ.ಆರ್.ವಿ. ರಾಘವೇಂದ್ರ ಅಭಿಪ್ರಾಯಪಟ್ಟರು.

ಗುರುವಾರ ಕರ್ನಾಟಕ ರಾಜ್ಯ ಡಾ.ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಗಾನಭಾರತಿಯ ವೀಣೆ ಶೇಷಣ್ಣ ಭವನದಲ್ಲಿ ಆಯೋಜಿಸಿದ್ದ ನೃತ್ಯದ ವಿವಿಧ ಆಯಾಮಗಳು ವಿಚಾರಸಂಕಿರಣವನ್ನು ಉದ್ಘಾಟಿಸಿ ಮಾತನಾಡಿದ ಅವರು, ಇಂದು ಕಲಾವಿದರು ಅರೆಬಲ್ಲವರಿಗೆ ತಮ್ಮ ಕಲೆಯನ್ನು ಪ್ರದರ್ಶಿಸುತ್ತಿದ್ದಾರೆ. ಇದರಿಂದ ಕಲಾವಿದ ಪರಿಪಕ್ವವಾಗದೆ ಕಲಿಕೆಯಲ್ಲಿ ಹಿಂದುಳಿಯುತ್ತಾರೆ. ಅಲ್ಲದೆ, ಇಂದು ಕಲೆಯನ್ನು ಕೇವಲ ಪ್ರದರ್ಶನದ ವಸ್ತುವಾಗಿ ನೋಡುತ್ತಿರುವುದರಿಂದ ಕಲೆಯ ಪೂರ್ವಾಪರಗಳು ಗೊತ್ತಿಲ್ಲದಿದ್ದವರೂ ಕಲಾವಿದರಾಗುತ್ತಿರುವುದು ಬೇಸರದ ಸಂಗತಿ ಎಂದು ಹೇಳಿದರು.

ಕಲಾವಿದರು ವಿಜ್ಞಾನಿಗಳಂತೆ ಸಂಶೋಧಿಸುವ ಮನೋಭಾವ ಬೆಳೆಸಿಕೊಳ್ಳಬೇಕು. ತಾವು ತೊಡಗಿಸಿಕೊಂಡಿರುವ ಕಲೆಯ ಒಳಹೊಕ್ಕು ಎಲ್ಲ ವಿಚಾರಗಳನ್ನು ತಿಳಿದುಕೊಳ್ಳಬೇಕು. ವಿವಿಗಳು ಕೇವಲ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಿದರೆ ಸಾಲದು, ಶೈಕ್ಷಣಿಕ ಆಧಾರಿತ ಕಾರ್ಯಕ್ರಮಗಳಿಗೆ ಒತ್ತು ನೀಡಿ ಹೆಚ್ಚೆಚ್ಚು ಆಯೋಜಿಸಬೇಕು. ಆಗ ಮಾತ್ರ ಕಲಾವಿದರಿಗೆ ಕಲೆಯ ನಿಜವಾದ ಅರ್ಥ ತಿಳಿಯುವುದಲ್ಲದೆ ಕಲೆಯೂ ಬೆಳೆಯುತ್ತದೆ ಎಂದರು.

ಬಳಿಕ ಮಾತನಾಡಿದ ನೂಪುರ ಕಲಾವಿದ ಪ್ರೊ.ರಾಮಮೂರ್ತಿ ರಾವ್, ಇಂದು ಕಲೆಯನ್ನು ಬಹುಮಾನ ಗೆಲ್ಲುವ ಉದ್ದೇಶದಿಂದ ಪ್ರದರ್ಶನಕ್ಕೆ ಮಾತ್ರ ಸೀಮಿತಗೊಳಿಸಿದ್ದು ಯಾವ ಕಲಾವಿದರೂ ಕಲೆಯ ಬಗ್ಗೆ ಚಿಂತನ ಮಂಥನ ಮಾಡುತ್ತಿಲ್ಲ. ಸಂಶೋಧಕ ಬುದ್ಧಿ ಯಾವ ಕಲಾವಿದರಲ್ಲೂ ಇಲ್ಲ. ಮೈಸೂರು ಕಲೆಯ ನೆಲೆಯೂರಾಗಿದ್ದು, ಕಲೆಯ ಆರಾಧಕರಾಗಿದ್ದ ಮೈಸೂರು ಅರಸರು ಸಾಕಷ್ಟು ಕೆಲಸಗಳನ್ನು ಮಾಡಿದ್ದಾರೆ. ಇಂಜಿನಿಯರಿಂಗ್, ವೈದ್ಯಕೀಯ ಸೇರಿದಂತೆ ವಿವಿಧ ಕೋರ್ಸ್‌ಗಳಿಗೆ ವಿದೇಶಕ್ಕೆ ತೆರಳಿ ವಿದ್ಯಾಭ್ಯಾಸ ಮಾಡುವಂತೆ ಸಂಗೀತ ಕಲಿಯಲು ಮೈಸೂರಿಗೆ ಬರುವಂತಾಗಬೇಕು. ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಂಗೀತ ವಿವಿ ಬೆಳೆಯಬೇಕು. ಆ ನಿಟ್ಟಿನಲ್ಲಿ ಸರ್ಕಾರ ಕಾರ್ಯಕ್ರಮಗಳನ್ನು ರೂಪಿಸಬೇಕು ಎಂದು ಮನವಿ ಮಾಡಿದರು.

ಕಾರ್ಯಕ್ರಮದ ಬಳಿಕ ‘ಯಂತ್ರ, ಮಂತ್ರ, ತಂತ್ರ ಮತ್ತು ನಾಟ್ಯ-ನರ್ತಕಿಯ ದೃಷ್ಟಿಕೋನ’ದ ಕುರಿತು ಡಾ.ಪದ್ಮಜ ಸುರೇಶ್, ‘ಭಾರತೀಯ ಶಾಸ್ತ್ರೀಯ ಮತ್ತು ಸಮಕಾಲೀನ ನೃತ್ಯ ಶೈಲಿಗಳಲ್ಲಿ ನೃತ್ಯ ಸಂಯೋಜನೆ’ ಕುರಿತು ವಿದುಷಿ ಚಿತ್ರ ಅರವಿಂದ್, ‘ರಾಮಾಯಣ-ಮಹಾಭಾರತ ಮತ್ತು ಭಾಗವತ ಪುರಾಣಗಳಲ್ಲಿ ನೃತ್ಯದ ಸ್ಥಾನ’ ಕುರಿತಂತೆ ಪ್ರೊ.ರಾಮಮೂರ್ತಿರಾವ್ ಉಪನ್ಯಾಸ ನೀಡಿದರು.

ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಡಾ.ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯ ಕುಲಸಚಿವ ಪ್ರೊ.ನಿರಂಜನ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Leave a Reply

comments

Related Articles

error: