ಮೈಸೂರುಸಿಟಿ ವಿಶೇಷ

ಯಾರ ಪಾಲಾಗುತ್ತಿದೆ ಆದಿವಾಸಿಗಳಿಗೆ ಸಿಗಬೇಕಾದ ಸೌಲಭ್ಯ…?

1962ರಲ್ಲಿ ಸ್ಥಾಪನೆಯಾದ ಮೂಲ ಆದಿವಾಸಿಗಳ ಆಶ್ರಮ ಶಾಲೆಗಳಲ್ಲಿ ಅಕ್ಷರ ಕಲಿಯುತ್ತಿರುವ ಅನೇಕ  ವಿದ್ಯಾರ್ಥಿಗಳಿದ್ದಾರೆ. ಸರ್ಕಾರವು ಆದಿವಾಸಿಗಳ ಅಭಿವೃದ್ದಿಗೆ ನೂರಾರು ಕೋಟಿಗಳಷ್ಟು ಹಣ ಖರ್ಚು ಮಾಡುತ್ತಿದೆ. ಒಬ್ಬ ವಿದ್ಯಾರ್ಥಿಗೆ ಪ್ರತಿ ತಿಂಗಳಿಗೆ 1,500 ಕ್ಕೂ ಹೆಚ್ಚು ಹಣವನ್ನು ಬಳಸಿ ಉತ್ತಮ ಪೌಷ್ಟಿಕಾಂಶದ ಆಹಾರ ಪದಾರ್ಥಗಳನ್ನು ನೀಡಬೇಕೆಂದು ಸರ್ಕಾರ ನಿಯಮ ರೂಪಿಸಿದೆ. ಆದರೆ, ಅಲ್ಲಿ ಕಾರ್ಯ ನಿರ್ವಹಿಸುವ ಮೇಲ್ವಿಚಾರಕರ ಬೇಜವಾಬ್ದಾರಿಯಿಂದ ಆಶ್ರಮ ಶಾಲೆಯ ಮಕ್ಕಳಿಗೆ ದೊರಕಬೇಕಾದ ಮೂಲಭೂತ ಸೌಕರ್ಯಗಳು ಮಾತ್ರ ಕಣ್ಮರೆಯಾಗಿದೆ.

ಇದಕ್ಕೆ ಉತ್ತಮ ಉದಾಹರಣೆ ಎಂದರೆ, ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ನಾಗಣಪುರ ಮತ್ತು ವೆಂಕಟಗಿರಿ ಆಶ್ರಮ ಶಾಲೆಗಳು. ಕಾಡಂಚಿನ ಗಡಿ ಭಾಗದ ಆಶ್ರಮ ಶಾಲೆಗಳಾಗಿರುವ ಕಾರಣ ಅಧಿಕಾರಿಗಳು ಪರಿಶೀಲನೆಗೆ ಬರುವುದಿಲ್ಲ ಎಂಬ ಧೈರ್ಯದಿಂದ ಮಕ್ಕಳಿಗೆ ಸಮರ್ಪಕ ಆಹಾರ ಪದಾರ್ಥಗಳು, ಪಠ್ಯ ಪುಸ್ತಕ, ಸಮವಸ್ತ್ರಗಳು, ಕೊಬ್ಬರಿ ಎಣ್ಣೆ, ಸೋಪು, ಶ್ಯಾಂಪು ಮುಂತಾದ ಎಲ್ಲ ರೀತಿಯ ಸೌಲಭ್ಯಗಳನ್ನು ನೀಡದೆ ವಂಚಿಸುತ್ತಿದ್ದಾರೆ ಎಂಬ ಆರೋಪಗಳು ಕೇಳಿ ಬಂದಿವೆ.

adivasi-story

ಸಾವಿರಕ್ಕೂ ಅಧಿಕ ಆದಿವಾಸಿಗಳ ವಾಸ: ತಾಲೂಕಿನಲ್ಲಿ ಐದು ಕಾಲೋನಿಗಳಲ್ಲಿ 2000ಕ್ಕೂ ಹೆಚ್ಚು ಮೂಲ ಆದಿವಾಸಿಗಳು ವಾಸಿಸುತ್ತಿದ್ದಾರೆ. ನಾಗಣಪುರ ಮತ್ತು ವೆಂಕಟಗಿರಿ ಎಂಬ ಎರಡು ಆಶ್ರಮ ಶಾಲೆಗಳಿವೆ.  ಅಲ್ಲಿ ಒಂದರಿಂದ ಏಳನೇ ತರಗತಿಯವರೆಗೆ ಪಾಠ ಪ್ರವಚನಗಳು ನಡೆಯುತ್ತಿವೆ. ಜೊತೆಯಲ್ಲಿ ಅಲ್ಲೇ ವಾಸ್ತವ್ಯ ಹೂಡುವ ಅವಕಾಶವನ್ನು ಕೂಡ ಸರ್ಕಾರ ಕಲ್ಪಿಸಿದೆ. ನಾಗಣಪುರ ಆಶ್ರಮ ಶಾಲೆಯಲ್ಲಿ 53 ವಿದ್ಯಾರ್ಥಿಗಳಿದ್ದು, ವೆಂಕಟಗಿರಿ ಆಶ್ರಮ ಶಾಲೆಯಲ್ಲಿ 33 ವಿದ್ಯಾರ್ಥಿಗಳು ಸೇರಿ, ಒಟ್ಟಾರೆ, 86 ವಿದ್ಯಾರ್ಥಿಗಳಿದ್ದಾರೆ.

ಸರ್ಕಾರಿ ಸೌಲಭ್ಯ ವಂಚಿತ ಮಕ್ಕಳು: ಇನ್ನು, ಈ‌ ಬಗ್ಗೆ ಮಾತನಾಡಿದ ಆಶ್ರಮ ಶಾಲೆಯ ವಿದ್ಯಾರ್ಥಿನಿ ಸವಿತ, ನಮಗೆ ಇದುವರೆಗೂ ಮುದ್ದೆ ಊಟ ಮತ್ತು ಚಪಾತಿಯನ್ನು ನೀಡಿಲ್ಲ. ಕೆಲವು ತಿಂಗಳಿಂದ ಸೋಪು, ಬ್ರಶ್ ಇನ್ನಿತರ ಸಾಮಗ್ರಿಗಳನ್ನು ಸಹ ನೀಡದೆ ಪುಸ್ತಕದಲ್ಲಿ ಮಾತ್ರ ಬರೆದಿದ್ದಾರೆ. ಪಠ್ಯ ಪುಸ್ತಕಗಳನ್ನು ಅಲ್ಪ- ಸ್ವಲ್ಪ ನೀಡಿದ್ದಾರೆ ಎಂದು ಹೇಳಿದಳು.

ಒಟ್ಟಾರೆ, ಸರ್ಕಾರದ ಸವಲತ್ತು ಸರ್ಕಾರಿ ಸದಸ್ಯರ ಮನೆ ತುಂಬುವ ಪ್ರವೃತ್ತಿ ಇಂದಿಗೂ ಜೀವಂತವಾಗಿರುವುದಂತು ಸತ್ಯ. ಆದಿವಾಸಿಗಳನ್ನು ಸಮಾಜದ ಮುಖ್ಯವಾಹಿನಿಗೆ ಕರೆತರಬೇಕೆಂದು ಸರಕಾರ ಹಲವಷ್ಟು ಯೋಜನೆಗಳನ್ನು ಜಾರಿಗೆ ತಂದಿದೆ. ಆದರೆ ಈ ಯೋಜನೆಯು ಫಲಾನುಭವಿಗಳಿಗೆ ತಲುಪದೆ, ಅಧಿಕಾರಿಗಳ ಮನೆ ತಲುಪುತ್ತಿರುವುದು ವಿಷಾದನೀಯ. ಅಧಿಕಾರಿಗಳು ಇನ್ನಾದರೂ ಎಚ್ಚೆತ್ತು ತಮ್ಮ ಕಾರ್ಯವ್ಯಾಪ್ತಿಯಲ್ಲಿರುವ ಆದಿವಾಸಿ ಫಲಾನುಭವಿಗಳಿಗೆ ಎಲ್ಲ ಸೌಲಭ್ಯಗಳು ಲಭಿಸಿವೆಯೇ ಎಂಬುದನ್ನು ಪರಿಶೀಲಿಸುವ ಅಗತ್ಯವಿದೆ.

ಸುರೇಶ್ ಎನ್.

Leave a Reply

comments

Related Articles

error: