ಮೈಸೂರು

ವಿಶ್ವ ಪರಿಸರ ದಿನಾಚರಣೆ: ಎನ್ಆರ್ ಸಮೂಹದಿಂದ `ಬೀಟ್ ಪ್ಲಾಸ್ಟಿಕ್ ಪಲ್ಯುಶನ್’ ಸ್ವಚ್ಛತಾ ಅಭಿಯಾನಕ್ಕೆ ಚಾಲನೆ

ಮೈಸೂರು,ಜೂ.5-ಸ್ವಚ್ಛ ಮತ್ತು ಸಮರ್ಥನೀಯ ಮೈಸೂರು ಕಡೆಗಿನ ತನ್ನ ಬದ್ಧತೆಯ ಭಾಗವಾಗಿ `ವಿಶ್ವ ಪರಿಸರ ದಿನಾಚರಣೆಯಂದು ಎನ್.ಆರ್.ಸಮೂಹ ಮಂಗಳವಾರ `ಬೀಟ್ ಪ್ಲಾಸ್ಟಿಕ್ ಪಲ್ಯುಶನ್’ ಸ್ವಚ್ಛತಾ ಅಭಿಯಾನಕ್ಕೆ ಚಾಲನೆ ನೀಡಿತು. ಎನ್‍ಆರ್ ಸಮೂಹದ ಸುಮಾರು 200ಕ್ಕೂ ಹೆಚ್ಚಿನ ನೌಕರರು ಕುಕ್ಕರಹಳ್ಳಿ ಕೆರೆಯ ಫೀಡರ್ ಕಾಲುವೆಯನ್ನು ಸ್ವಚ್ಛಗೊಳಿಸಿದರು.

ಈ ಉಪಕ್ರಮಕ್ಕೆ ಎನ್‍ಆರ್ ಸಮೂಹದ, ಚೀಫ್ ಆಪರೇಟಿಂಗ್ ಆಫೀಸರ್ ಎಂ.ಆರ್.ಸುರೇಶ್ ಚಾಲನೆ ನೀಡಿದರು. ಹಸಿರು ತುಂಬಿದ ಕುಕ್ಕರಹಳ್ಳಿಗಾಗಿ ಶ್ರಮಿಸುತ್ತಿರುವ ಎನ್‍ಆರ್ ಸಮೂಹದ ವತಿಯಿಂದ ಇದೇ ವೇಳೆ ರೈತರಿಗೆ ಮತ್ತು ಹಳ್ಳಿಗರಿಗೆ 10,000 ಸಸಿಗಳನ್ನು ವಿತರಿಸಲಾಯಿತು.

ಕೆರೆಗಳ ನೆಲೆಯಾಗಿರುವ ಮೈಸೂರಿನಲ್ಲಿ ಪರಿಸರ ವ್ಯವಸ್ಥೆಯ ಅವಿಭಾಜ್ಯ ಭಾಗವಾಗಿರುವ ನಾಲ್ಕು ವಿವಿಧ ಕೆರೆಗಳಿವೆ. ಈ ಪ್ರಮುಖ ಕೆರೆಗಳಲ್ಲಿ ಕುಕ್ಕರಹಳ್ಳಿ ಕೆರೆಯೂ ಒಂದು. ಮೈಸೂರು ನಗರದ ಪಶ್ಚಿಮ ದಿಕ್ಕಿನಲ್ಲಿರುವ ಈ ಕೆರೆ ಪಕ್ಷಿ ವೀಕ್ಷಣೆ ಮತ್ತು ವಾಯುವಿಹಾರಕ್ಕೆ ಸುಪ್ರಸಿದ್ಧವಾಗಿದ್ದು, ಈ ಹಿಂದೆ ಇದು 176 ವಿವಿಧ ಪ್ರಭೇದಗಳಿಂದ ಕೂಡಿದ ಸುಮಾರು 10,000-15,000 ಪಕ್ಷಿಗಳಿಗೆ ಮೂಲ ನೆಲೆಯಾಗಿತ್ತು. ಆದರೆ ಒಳಚರಂಡಿ ಮತ್ತು ಪ್ಲಾಸ್ಟಿಕ್ ತ್ಯಾಜ್ಯ ಫೀಡರ್‍ ಕಾಲುವೆಯ ಮೂಲಕ ಈ ಕೆರೆಯನ್ನು ಪ್ರವೇಶಿಸುವುದರಿಂದಾಗಿ ಈಗ ಈ ಪಕ್ಷಿಗಳ ಸಂಖ್ಯೆ ಕೇವಲ 2000ಕ್ಕೆ ಇಳಿದಿದೆ. ಕಳೆದ ಕೆಲವು ವರ್ಷಗಳಲ್ಲಿ ಈ ಕೆರೆಯ ಹತ್ತಿರ ಮೀನು ಮತ್ತು ಪಕ್ಷಿಗಳು ಸಾವಿಗೀಡಾಗುತ್ತಿರುವ ಬಗ್ಗೆ ಹಲವಾರು ವರದಿಗಳೂ ಬಂದಿವೆ.

ಈ ಬಗ್ಗೆ ಮಾತನಾಡಿದ, ಎನ್‍ಆರ್ ಸಮೂಹದ, ಚೀಫ್ ಆಪರೇಟಿಂಗ್ ಆಫೀಸರ್ ಸುರೇಶ್, ಕುಕ್ಕರಹಳ್ಳಿ ಕೆರೆ ಮಾತ್ರವಲ್ಲ, ನಮ್ಮ ಸುತ್ತಲೂ ಇರುವಎಲ್ಲಾ ಕೆರೆಗಳಿಗೆ ಉಂಟಾಗಿರುವ ಹಾನಿಗಳನ್ನು ಸರಿಪಡಿಸಬೇಕಾದ ನೈತಿಕ ಜವಾಬ್ದಾರಿ ನಮ್ಮ ಮೇಲಿದೆ. `ವಿಶ್ವ ಪರಿಸರ ದಿನಾಚರಣೆ’ ನೆಪದಲ್ಲಿ ಈ ಸ್ವಚ್ಛತಾ ಉಪಕ್ರಮದೊಂದಿಗೆ ನಾವು ಸುಸ್ಥಿರ ಭವಿಷ್ಯದತ್ತ ಒಂದು ಹೆಜ್ಜೆ ಮುಂದೆ ಸಾಗಿದ್ದೇವೆ ಎಂದರು.

ಮಾನಸಗಂಗೋತ್ರಿಯ ಸೆನೆಟ್ ಭವನದ ಪ್ರವೇಶದ್ವಾರದಲ್ಲಿ ಮಧ್ಯಾಹ್ನ 3.30ಕ್ಕೆ ಪ್ರಾರಂಭವಾದ ಸ್ವಚ್ಛತಾ ಅಭಿಯಾನ ಸಂಜೆ 6ರವರೆಗೆ ಮುಂದುವರೆಯಿತು. ಇದು ಒಂದು ವರ್ಷ ಅವಧಿಯ ಅಭಿಯಾನದ ಮೊದಲ ಹೆಜ್ಜೆಯಾಗಿತ್ತು. ಮುಂದಿನ ದಿನಗಳಲ್ಲಿ ಆನ್.ಆರ್.ಸಮೂಹದ ಉದ್ಯೋಗಿಗಳು ಪ್ರತಿ ತಿಂಗಳ ಮೊದಲ ಭಾನುವಾರದಂದು ಮೈಸೂರಿನ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಈ ರೀತಿಯ ಉಪಕ್ರಮಗಳನ್ನು ನಡೆಸಲಿದ್ದಾರೆ. (ಎಂ.ಎನ್)

Leave a Reply

comments

Related Articles

error: