ಕರ್ನಾಟಕಪ್ರಮುಖ ಸುದ್ದಿ

ಸಚಿವ ಸ್ಥಾನ ಕೈತಪ್ಪಿದ ಹಿನ್ನಲೆ: ಎಂ.ಬಿ.ಪಾಟೀಲ್ ರಿಂದ ರಾಜೀನಾಮೆ ನಿರ್ಧಾರ?

ಬೆಂಗಳೂರು,ಜೂ.6-ಕಾಂಗ್ರೆಸ್ -ಜೆಡಿಎಸ್ ಸಮ್ಮಿಶ್ರ ಸರ್ಕಾರದಲ್ಲಿ ಸಚಿವ ಸ್ಥಾನ ಪಡೆಯುವ ಅಪಾರ ನಿರೀಕ್ಷೆ ಹೊಂದಿದ್ದ ಶಾಸಕ ಹಾಗೂ ಕಾಂಗ್ರೆಸ್ ಪ್ರಭಾವಿ ನಾಯಕ ಎಂ.ಬಿ.ಪಾಟೀಲ್ ಅವರಿಗೆ ಸಚಿವ ಸ್ಥಾನ ಕೈತಪ್ಪಿದ ಬೆನ್ನಲ್ಲೇ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲು ಪಾಟೀಲ್ ಮುಂದಾಗಿದ್ದಾರೆ ಎನ್ನಲಾಗಿದೆ.

ಸ್ಪೀಕರ್ ರಮೇಶ್‍ಕುಮಾರ್ ಅವರನ್ನು ಭೇಟಿ ಮಾಡಿ ರಾಜೀನಾಮೆ ಸಲ್ಲಿಸಲು ಸಮಯಾವಕಾಶ ಕೋರಿದ್ದು, ಖುದ್ದಾಗಿ ಅಥವಾ ಬೆಂಬಲಿಗರ ಮುಖಾಂತರ ರಾಜೀನಾಮೆ ಸಲ್ಲಿಸಲಿದ್ದಾರೆ ಎನ್ನಲಾಗಿದೆ.

ಸಚಿವ ಸ್ಥಾನ ಕೈತಪ್ಪಿರುವ ಬಗ್ಗೆ ಮಾತನಾಡಿರುವ ಪಾಟೀಲ್, ನಾನು ಯಾರ ಮನೆ ಬಾಗಿಲಿಗೂ ಹೋಗಿ ಅಂಗಲಾಚುವುದಿಲ್ಲ. ತಮಗೆ ಸಚಿವ ಸ್ಥಾನ ಸಿಗದಿರುವುದಕ್ಕೆ ಕಾರ್ಯಕರ್ತರು ಬೇಸರ ಮಾಡಿಕೊಳ್ಳುವುದು ಬೇಡ. ಅಧಿಕಾರ ಅಥವಾ ರಾಜಕೀಯ ನಮ್ಮ ಮನೆಯ ಆಸ್ತಿಯಲ್ಲ. ಸಚಿವ ಸ್ಥಾನ ಕೈ ತಪ್ಪಿರುವುದಕ್ಕೆ ಕಾರಣ ಗೊತ್ತಾಗಿಲ್ಲ. ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ವಿಷಯ ತಿಳಿದುಕೊಳ್ಳುತ್ತೇನೆ ಎಂದಿದ್ದಾರೆ.

ಎಂ.ಬಿ.ಪಾಟೀಲ್ ಅವರ ನಿವಾಸಕ್ಕೆ ಕಾಂಗ್ರೆಸ್ ಶಾಸಕ ಮತ್ತು ಸಂಭಾವ್ಯ ಸಚಿವ ಕೃಷ್ಣ ಭೈರೇಗೌಡ ಅವರು ಭೇಟಿ ನೀಡಿ ಮಾತುಕತೆಯನ್ನು ನಡೆಸಿದ್ದಾರೆ. ಇತ್ತ ಬೆಂಗಳೂರಿನ ಪಾಟೀಲ್ ನಿವಾಸದ ಎದುರು ನೂರಾರು ಕಾರ್ಯಕರ್ತರು ಜಮಾಯಿಸಿ ಪ್ರತಿಭಟನೆ ನಡೆಸುತ್ತಿದ್ದು, ಪಾಟೀಲ್ ಗೆ ಸಚಿವ ಸ್ಥಾನ ನೀಡದಿದ್ದರೆ ವಿಷ ಸೇವಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.

ಪ್ರತ್ಯೇಕ ಲಿಂಗಾಯತ ಧರ್ಮ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದು ಹಗಲಿರುಳು ದುಡಿದಿದ್ದ ಎಂ.ಬಿ.ಪಾಟೀಲ್ ಅವರ ಬೆಂಬಲಕ್ಕೆ ಹತ್ತಾರು ಲಿಂಗಾಯತ ಸ್ವಾಮೀಜಿಗಳು ನಿಂತಿದ್ದು, ಕಾಂಗ್ರೆಸ್ ಹೈಕಮಾಂಡ್ ಗೆ ಒತ್ತಡ ಹಾಕಲು ಮುಂದಾಗಿದ್ದಾರೆ ಎಂದು ವರದಿಯಾಗಿದೆ.

ಮದ್ದೂರಿನ ಶಾಸಕ ಡಿ.ಸಿ.ತಮ್ಮಣ್ಣ ಅವರಿಗೆ ಸಚಿವ ಸ್ಥಾನ ಕೈ ತಪ್ಪಿದ ಹಿನ್ನಲೆಯಲ್ಲಿ ಅವರ ಬೆಂಬಲಿಗರು ಮೈಸೂರು-ಬೆಂಗಳೂರು ಹೆದ್ದಾರಿಯಲ್ಲಿ ಪ್ರತಿಭಟನೆ ನಡೆಸಿದ್ದಾರೆ.

ಜೆಡಿಎಸ್ ನ ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಅವರು ಸಚಿವ ಸ್ಥಾನ ಸಿಗದ ಹಿನ್ನಲೆಯಲ್ಲಿ ಅಸಮಾಧಾನ ಹೊರ ಹಾಕಿದ್ದಾರೆ. ಸಿಎಸ್ ಶಿವಳ್ಳಿ ಬೆಂಬಲಿಗರು ಕೆಂಗಲ್ ಗೇಟ್ ಬಳಿ ಪ್ರತಿಭಟನೆ ನಡೆಸುತ್ತಿದ್ದಾರೆ. ಅಜಯ್ ಸಿಂಗ್ ಬೆಂಬಲಿಗರು ಅವರ ಊರಿನಲ್ಲಿ ಟೈರ್ ಗೆ ಬೆಂಕಿ ಹಚ್ಚಿ ಪ್ರತಿಭಟನೆ ನಡೆಸಿದ್ದಾರೆ. (ಎಂ.ಎನ್)

Leave a Reply

comments

Related Articles

error: