ಮೈಸೂರು

ತಲೆತಗ್ಗಿಸಿ ಪುಸ್ತಕ ಓದಿದರೆ, ತಲೆಎತ್ತಿ ಓಡಾಡುವಂತೆ ಮಾಡುತ್ತದೆ: ಎನ್.ನಿರಂಜನ್ ನಿಕ್ಕಂ

ಕಲಿಸು ಫೌಂಡೇಶನ್ ವತಿಯಿಂದ ನಗರದ ಕಲ್ಯಾಣಗಿರಿಯ ಸರ್ಕಾರಿ ಉರ್ದು ಉನ್ನತ ಪ್ರಾಥಮಿಕ ಶಾಲೆಯಲ್ಲಿ ನೂತನವಾಗಿ ನಿರ್ಮಿಸಿರುವ ಗ್ರಂಥಾಲಯವನ್ನು ಹಿರಿಯ ಪತ್ರಕರ್ತ ಎನ್.ನಿರಂಜನ್ ನಿಕ್ಕಂ ಉದ್ಘಾಟಿಸಿದರು.

ಬಳಿಕ ಮಾತನಾಡಿದ ಅವರು, ಪುಸ್ತಕಗಳು ಮಾನವನನ್ನು ನಿಜವಾದ ಮನುಷ್ಯನನ್ನಾಗಿ ಮಾಡುತ್ತವೆ. ಪುಸ್ತಕವನ್ನು ತಲೆತಗ್ಗಿಸಿ ಓದಿದರೆ ಜೀವಮಾನವಿಡಿ ತಲೆ ಎತ್ತಿ ಓಡಾಡುವಂತೆ ಮಾಡುತ್ತವೆ. ಅಂತಹ ಶಕ್ತಿ ಪುಸ್ತಕಗಳಿಗಿದೆ. ಆದರೆ, ಇತ್ತೀಚಿನ ಅತ್ಯಾಧುನಿಕ ಯುಗದಲ್ಲಿ ಎಲ್ಲವೂ ತಂತ್ರಜ್ಞಾನಮಯವಾಗುತ್ತಿರುವುದರಿಂದ ಪುಸ್ತಕಗಳ ಮಹತ್ವ ಕಡಿಮೆಯಾಗುತ್ತಿದ್ದು, ಓದುಗರ ಸಂಖ್ಯೆಯೂ ಕ್ಷೀಣಿಸುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಗ್ರಂಥಾಲಯಗಳು ಶಾಲೆಯ ತರಗತಿಯಲ್ಲಿ ಕಲಿಯುವುದಕ್ಕಿಂತ ಹೆಚ್ಚಿನದನ್ನು ಕಲಿಸುತ್ತವೆ. ಪುಸ್ತಕಗಳನ್ನು ಓದುವುದರಿಂದ ಭಾಷಾಭಿವೃದ್ಧಿಯಾಗುವುದಲ್ಲದೆ, ಸೃಜನಶೀಲತೆ, ಉತ್ತಮ ಹವ್ಯಾಸ, ಒಳ್ಳೆಯ ಮನೋಭಾವನೆಗಳನ್ನು ಬೆಳೆಸುವುದರ ಜತೆಗೆ ಪ್ರಾಪಂಚಿಕ ಜ್ಞಾನವೂ ಬೆಳೆಯುತ್ತದೆ. ಹಾಗಾಗಿ ಮಕ್ಕಳು ಹೆಚ್ಚೆಚ್ಚು ಪುಸ್ತಕಗಳನ್ನು ಓದುವ ಹವ್ಯಾಸವನ್ನು ಮೈಗೂಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದ ಅವರು, ಸಾಮಾಜಿಕ ಕಳಕಳಿಯೊಂದಿಗೆ ಕಲಿಸು ಫೌಂಡೇಷನ್ ನಿಮ್ಮ ಶಾಲೆಯಲ್ಲಿ ಗ್ರಂಥಾಲಯ ನಿರ್ಮಿಸಿದ್ದು, ಅದನ್ನು ಸೂಕ್ತ ರೀತಿಯಲ್ಲಿ ಕಲಿಕೆಗೆ ಪೂರಕವಾಗಿ ಬಳಸಿಕೊಳ್ಳಿ ಎಂದು ಕಿವಿಮಾತು ಹೇಳಿದರು.

ಕಾರ್ಯಕ್ರಮದಲ್ಲಿ ಸನ್‍ಪ್ಯೂರ್ ಆಯಿಲ್ ಕಂಪನಿಯ ನಿರ್ದೇಶಕರಾದ ಹನ್ನಾನ್ ಖಾನ್, ನಿರ್ದೇಶಕ ಇಮ್ರಾನ್ ಖಾನ್, ಶಾಲೆಯ ಮುಖ್ಯೋಪಾಧ್ಯಾಯಿನಿ ತಲಾಥ್ ಫಾತಿಮಾ, ಕಲಿಸು ಫೌಂಡೇಷನ್ ಸಿಇಒ ನಿಖಿಲೇಶ್, ತೇಜಸ್, ವರುಣ್, ರಂಗನಾಥ್, ಗಣೇಶ್, ನಾಗಶ್ರೀ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Leave a Reply

comments

Related Articles

error: