
ಪ್ರಮುಖ ಸುದ್ದಿ
ತಲಕಾವೇರಿ ಭಾಗಮಂಡಲದಲ್ಲಿ ಡ್ರೆಸ್ ಕೋಡ್ ಜಾರಿ
ರಾಜ್ಯ(ಮಡಿಕೇರಿ)ಜೂ.7:- ಇತ್ತೀಚೆಗೆ ಸರಿಸುಮಾರು ಎಲ್ಲಾ ದೇವಸ್ಥಾನಗಳಲ್ಲೂ ಡ್ರೆಸ್ ಕೋಡ್ ಜಾರಿಯಾಗುತ್ತಿದೆ. ಕೆಲವು ದೇವಸ್ಥಾನಗಳಿಗೆ ಹೋಗುವಾಗ ತುಂಡುಡುಗೆ ಧರಿಸಿ ಹೋಗಬಾರದೆನ್ನುವ ದೃಷ್ಟಿಯಲ್ಲಿ ಡ್ರೆಸ್ ಕೋಡ್ ಜಾರಿಗೆ ತರಲಾಗುತ್ತಿದೆ.
ಇದೀಗ ಮಂಜಿನ ನಗರಿ ಕೊಡಗಿನ ಪವಿತ್ರ ಕ್ಷೇತ್ರವಾದ ತಲಕಾವೇರಿ-ಭಾಗಮಂಡಲದಲ್ಲಿ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಡ್ರೆಸ್ ಕೋಡ್ ಜಾರಿಗೆ ತಂದಿದೆ. ಯುವಕ ಯುವತಿಯರು ಇಲ್ಲಿ ತುಂಡುಡುಗೆ ಧರಿಸಿ ಬರುವಂತಿಲ್ಲ. ಸಂಪೂರ್ಣವಾಗಿ ಮೈಮುಚ್ಚುವ ಬಟ್ಟೆಯನ್ನು ಧರಿಸಿ ಬರಬೇಕು ಎನ್ನಲಾಗಿದೆ. ಮಡಿಕೇರಿಯ ಪ್ರಸಿದ್ಧ ದೇವಾಲಯವಾದ ಓಂಕಾರೇಶ್ವರ ದೇವಾಲಯದಲ್ಲಿಯೂ ಕೂಡ ವಸ್ತ್ರ ಸಂಹಿತೆಯನ್ನು ಜಾರಿಗೆ ತರಲು ನಿರ್ಧರಿಸಲಾಗುತ್ತಿದ್ದು, ಮುಂದಿನ ತಿಂಗಳೊಳಗೆ ಜಾರಿಗೆ ಬರಲಿದೆ ಎನ್ನಲಾಗಿದೆ. ತುಂಡುಡುಗೆ ತೊಟ್ಟು ಬಂದ ಯುವಕ-ಯುವತಿಯರಿಗಿಲ್ಲಿ ಪಂಚೆಯನ್ನುಕೊಡುತ್ತಿದ್ದು, ಓಂಕಾರೇಶ್ವರ ದೇವಸ್ಥಾನಕ್ಕೆ ತುಂಡುಡುಗೆಯಲ್ಲಿ ಬಂದವರನ್ನು ವಾಪಸ್ ಕಳುಹಿಸಲು ಚಿಂತನೆ ನಡೆಸಲಾಗುತ್ತಿದೆ. ಇದು ಉತ್ತಮ ಬೆಳವಣಿಗೆ ಎಂಬ ಅಭಿಪ್ರಾಯ ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ. (ಕೆ.ಎಸ್,ಎಸ್.ಎಚ್)