
ದೇಶ
ಡಿಜಿಟಲ್ ವ್ಯವಹಾರಕ್ಕೆ ಒತ್ತು ನೀಡುವ ಅವಶ್ಯಕತೆಯಿದೆ: ಅರುಣ್ ಜೇಟ್ಲಿ
ನವದೆಹಲಿ: ನೋಟು ನಿಷೇಧದ ನಂತರ ಕಾರ್ಡ್ ಬಳಸಿ ಶೇ.40ರಷ್ಟು ಪೆಟ್ರೋಲ್ ಮತ್ತು ಡೀಸೆಲ್ ಖರೀದಿಸಲಾಗಿದೆ. ಇದಕ್ಕೆ ಮತ್ತಷ್ಟು ಪ್ರೋತ್ಸಾಹ ನೀಡುವ ಹಿನ್ನೆಲೆಯಲ್ಲಿ ಕಾರ್ಡ್ ಬಳಸಿ ಪೆಟ್ರೋಲ್ ಮತ್ತು ಡೀಸೆಲ್ ಖರೀದಿಸಿದರೆ ಶೇ.0.75ರಷ್ಟು ರಿಯಾಯಿತಿ ನೀಡಲಾಗುವುದು ಇ-ಪೇಮೆಂಟ್ ಮೂಲಕ ರೈಲ್ವೆ ಟಿಕೆಟ್ ಖರೀದಿಸಿದರೆ .05ರಷ್ಟು ರಿಯಾಯಿತಿ ಮತ್ತು 10 ಲಕ್ಷ ರೂ. ಮೌಲ್ಯದ ವಿಮೆ ನೀಡಲು ನಿರ್ಧರಿಸಲಾಗಿದ್ದು, ಮುಂದಿನ ಜ.1ರಿಂದ ಜಾರಿಗೆ ಬರಲಿದೆ ಎಂದು ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ತಿಳಿಸಿದರು.
ಗುರುವಾರದಂದು ದೆಹಲಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ನೋಟು ನಿಷೇಧ ಮಾಡಿ ಒಂದು ತಿಂಗಳಾಗಿದ್ದು, ನಗದು ರಹಿತ ಡಿಜಿಟಲ್ ವ್ಯವಹಾರಕ್ಕೆ ಒತ್ತು ನೀಡುವ ಅವಶ್ಯಕತೆಯಿದೆ ಎಂದರು.
ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸ್ಮಾರ್ಟ್ ಕಾರ್ಡ್ ಮೂಲಕ ಪಾವತಿ ಮಾಡಿದರೆ ಶೇ.10ರಷ್ಟು ರಿಯಾಯಿತಿ ನೀಡುವುದಾಗಿ ಹಾಗೂ 2000 ರೂ.ವರೆಗಿನ ನಗದು ರಹಿತ ವ್ಯವಹಾರಕ್ಕೆ ಯಾವುದೇ ತೆರಿಗೆ ವಿಧಿಸುವುದಿಲ್ಲ. ಡಿಜಿಟಲ್ ಮೂಲಕ ಪಾವತಿಸಲಾಗುವ ಸಾಮಾನ್ಯ ವಿಮೆಗೆ ಶೇ.10ರಷ್ಟು ಹಾಗೂ ಜೀವ ವಿಮೆಗೆ ಶೇ.8ರಷ್ಟು ರಿಯಾಯಿತಿ ನೀಡಲಾಗುವುದು ಎಂದು ಹೇಳಿದರು.