ಮೈಸೂರು

ಮೈಸೂರು ಜನತೆಯನ್ನು ಬೆಚ್ಚಿ ಬೀಳಿಸುವ ಮಾಹಿತಿ : ಕೇರಳ ತ್ಯಾಜ್ಯ ಮೈಸೂರಿಗೆ ರವಾನೆ

ಮೈಸೂರು,ಜೂ.8:- ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿಯೇ ಕಸ ವಿಲೇವಾರಿ ಮಾಡಲು ಸೂಕ್ತ ಸ್ಥಳವಿಲ್ಲ. ಟನ್ ಗಟ್ಟಲೇ ಕಸವನ್ನು ಎಲ್ಲಿ ಸುರಿಯೋದು  ಸರಿಯಾದ ಸ್ಥಳಾವಕಾಶ ಬೇಕು ಎಂಬ ಬೇಡಿಕೆಯಿರುವಾಗಲೇ ಮೈಸೂರಿನ ಜನತೆಯನ್ನು ಬೆಚ್ಚಿ ಬೀಳಿಸುವ ಮಾಹಿತಿ ಲಭ್ಯವಾಗಿದೆ.

ತಮಿಳುನಾಡು ಕಾವೇರಿ ನೀರಿಗಾಗಿ ಕ್ಯಾತೆ ತೆಗೆದಿರುವಾವಲೇ ನೆರೆಯ ಕೇರಳ ರಾಜ್ಯ ತ್ಯಾಜ್ಯದ ಕ್ಯಾತೆ ತೆಗೆದಿದ್ದು, ಕೇರಳ ರಾಜ್ಯದ ಟನ್ ಗಟ್ಟಲೆ ತ್ಯಾಜ್ಯ‌ ವಸ್ತುಗಳು ಮೈಸೂರಿಗೆ ರವಾನೆಯಾಗುತ್ತಿವೆ. ಪ್ಲಾಸ್ಟಿಕ್, ಬಯೋ ವೇಸ್ಟ್, ಸಾಲಿಡ್‌ ವೇಸ್ಟ್, ಮೆಡಿಕಲ್ ವೇಸ್ಟ್ ಎಲ್ಲದಕ್ಕೂ ಮೈಸೂರು ನಗರವನ್ನು ಕೇರಳ ರಾಜ್ಯ ಕಸದ ತೊಟ್ಟಿಯನ್ನಾಗಿ ಮಾಡಿಕೊಂಡಿದೆ. ಪ್ರತಿನಿತ್ಯ 10-15 ಲಾರಿಗಳಲ್ಲಿ ತ್ಯಾಜ್ಯದ ವಸ್ತುಗಳು ಬರುತ್ತಿದ್ದು, ಸ್ಥಳೀಯರ ಮಾಹಿತಿ ಆಧರಿಸಿ ನಗರಪಾಲಿಕೆ ಅಧಿಕಾರಿ, ಪಾಲಿಕೆ ಸದಸ್ಯರು ಕಾರ್ಯಾಚರಣೆ ನಡೆಸಿದ್ದಾರೆ. ತ್ಯಾಜ್ಯ ಹೊತ್ತು‌ ತಂದಿದ್ದ ಲಾರಿಯನ್ನು ಮೈಸೂರು-ನಂಜನಗೂಡು ರಸ್ತೆಯಲ್ಲಿ ಜಪ್ತಿ ಮಾಡಲಾಗಿದೆ. ಮೈಸೂರಿನ ರಾಜೀವ್ ನಗರ, ಭಾರತ್ ನಗರ ಮತ್ತು ಬನ್ನೂರು ರಸ್ತೆಯ ರಂಗಾಚಾರಿ ಹುಂಡಿಯ ಖಾಸಗಿ ಡಂಪಿಂಗ್ ಯಾರ್ಡ್ ಗಳಿಗೆ ಕಸ ರವಾನೆಯಾಗುತ್ತಿತ್ತು ಎನ್ನಲಾಗಿದ್ದು, ಒಂದು‌ ಲೋಡ್ ಗೆ 25 ಸಾವಿರ ರೂಪಾಯಿ ಪಡೆದು ಭಾರೀ ವಂಚನೆ ನಡೆಸಲಾಗುತ್ತಿದೆ. ನಿಫಾ ವೈರಸ್ ಆತಂಕ‌ ಜೀವಂತವಿರುವಾಗಲೇ ಕೇರಳದಿಂದ ಕರ್ನಾಟಕಕ್ಕೆ ಭಾರೀ ಆತಂಕ ಎದುರಾಗಿದೆ. ಸ್ವಚ್ಛ ನಗರಿಯ ಪಟ್ಟಕ್ಕೂ ಇದರಿಂದ ಸಂಚಕಾರ ಬಂದಿದೆ. ಸ್ಥಳಕ್ಕೆ ನಗರಪಾಲಿಕೆ ಆರೋಗ್ಯಾಧಿಕಾರಿ ಡಾ. ರಾಮಚಂದ್ರ, ನಗರಪಾಲಿಕೆ ಸದಸ್ಯ ಪ್ರಶಾಂತ ಗೌಡ, ಪರಿಸರ ಮಾಲಿನ್ಯ ನಿಯಂತ್ರಣಾಧಿಕಾರಿ ಮಂಜುನಾಥ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಆರೋಗ್ಯಾಧಿಕಾರಿ ದಕ್ಷಿಣ ಗ್ರಾಮಾಂತರ ಪೊಲೀಸರಿಗೆ ದೂರು ನೀಡಿದ್ದಾರೆ ಎನ್ನಲಾಗುತ್ತಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: