ಮೈಸೂರು

ಭ್ರಷ್ಟಾಚಾರದ ವಿರುದ್ಧ ಸಮರ ಸಾರಿದ ಚಿಣ್ಣರು

ಅದಾಗ ತಾನೇ ಅರಳಿ ನಳನಳಿಸುತ್ತಿರುವ ಮುಗ್ಧ ಕಂದಮ್ಮಗಳು. ಅವುಗಳಿಗೆ ಭ್ರಷ್ಟಾಚಾರವೆಂದರೇನು ಎಂಬುದರ ಕಿಂಚಿತ್ತೂ ಮಾಹಿತಿಯಿಲ್ಲ. ಇಂತಹ ಸನ್ನಿವೇಶದಲ್ಲಿ ಅವರು ದೇಶವನ್ನು ಪಾರದರ್ಶಕವಾಗಿ ಕಟ್ಟಲು ಹೊರಟರೆ ಹೇಗಿರಬಹುದು? ಅಂತಹ ಸನ್ನಿವೇಶವನ್ನು ಸೃಷ್ಟಿಸಿದ್ದಾರೆ. ಮೈಸೂರಿನ ರೋಟರಿ ಜಯನಗರ ಶಿಶುವಿಹಾರದ ಚಿಣ್ಣರು. ದೇಶದಲ್ಲಿ ನಡೆಯುತ್ತಿರುವ ಭ್ರಷ್ಟಾಚಾರದ ವಿರುದ್ಧ ಸಮರ ಸಾರಿದ್ದಾರೆ.

ದೇಶಾದ್ಯಂತ 500 ಹಾಗೂ 2000ರೂ ಮುಖಬೆಲೆಯ ನೋಟು ರದ್ದಾಗಿ ಸುದ್ದಿಯಾಗಿತ್ತು. ಸರತಿ ಸಾಲಿನಲ್ಲಿ ನಿಂತು ಎಲ್ಲರೂ ಹೊಸ ಹಣವನ್ನು ಕೊಂಡುಕೊಂಡಿದ್ದು ಹಳೆಯ ಕತೆ.  ಭ್ರಷ್ಟಾಚಾರ ತೊಲಗಿಸಿ ದೇಶದಲ್ಲಿ ಪಾರದರ್ಶಕತೆ ಎತ್ತಿ ಹಿಡಿಯಬೇಕೆಂದು ಪಣ ತೊಟ್ಟಿರುವ ಪ್ರಧಾನಿಯವರ ಈ ಕಾರ್ಯವನ್ನು ಅನೇಕರು ಶ್ಲಾಘಿಸಿದರೆ, ಇನ್ಕೆಲವರು ಭ್ರಷ್ಟಾಚಾರದಿಂದ ಕೂಡಿಟ್ಟ ಹಣದಿಂದ ತೆರಿಗೆ ಅಧಿಕಾರಿಗಳ ಕೈಗೆ ಸಿಕ್ಕಿ ಹಾಕಿಕೊಳ್ಳುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ನಾಳಿನ ಪ್ರಜೆಗಳಾಗಬೇಕಾದ ಮಕ್ಕಳು ಭ್ರಷ್ಟಾಚಾರದ ವಿರುದ್ಧ ತಿರುಗಿ ನಿಂತರೆ ಖಂಡಿತ ದೇಶದಲ್ಲಿ ಪಾರದರ್ಶಕತೆ ತರಲು ಸಾಧ್ಯ ಎಂಬ ಆಲೋಚನೆಯನ್ನು ಹೊತ್ತ ರೋಟರಿ ಶಿಶುವಿಹಾರದ ಶಿಕ್ಷಕಿಯರು ಮಗುವೊಂದಕ್ಕೆ ಹೊಸ ಹಣದಿಂದಲೇ ಸಿಂಗರಿಸಿದ್ದು, ಕಪ್ಪುಹಣ ಅಳಿಸೋಣ, ಹೊಸ ನೋಟನ್ನು ಸ್ವಾಗತಿಸೋಣ, ಭ್ರಷ್ಟಾಚಾರ, ಅಕ್ರಮ, ಮೋಸ ಎಲ್ಲವನ್ನೂ ತೊಲಗಿಸಿ ಸ್ವಚ್ಛ ಭಾರತವನ್ನು ನಿರ್ಮಿಸೋಣ ಎಂಬ ಫಲಕವನ್ನು ಕೈಯ್ಯಲ್ಲಿ ಹಿಡಿಸಿ ಪ್ರೇಕ್ಷಕರ ಗಮನ ಸೆಳೆಯುವಲ್ಲಿ ಯಶಸ್ವಿಯಾದರು.

ಇವೆಲ್ಲ ನಡೆದಿದ್ದು ಮೈಸೂರಿನ ಕುವೆಂಪು ನಗರದ ಗಾನಭಾರತಿಯಲ್ಲಿ.  ರೋಟರಿ ಶಿಶುವಿಹಾರದ ಮಕ್ಕಳು ಛದ್ಮವೇಷದಲ್ಲಿ ಪಾಲ್ಗೊಂಡು ಪ್ರೇಕ್ಷಕರನ್ನು ದಂಗಾಗಿಸಿದರು. ಗಾಂಧಿ ತಾತನ ವೇಷ ಧರಿಸಿದ ಅಭಿರಾಮ ಎಂಬ ಮಗು ಬ್ರಿಟಿಷರೇ ಭಾರತ ಬಿಟ್ಟು ತೊಲಗಿ ಎನ್ನುವ ಮೂಲಕ  ಪ್ರೇಕ್ಷಕರಿಂದ ಚಪ್ಪಾಳೆ ಗಿಟ್ಟಿಸಿತು. ಬಸವಣ್ಣ, ಆಂಜನೇಯ, ಪೊಲೀಸ್ ಸೇರಿದಂತೆ ವಿವಿಧ ವೇಷ ಧರಿಸಿದ ಚಿಣ್ಣರು ಅದ್ಭುತವಾಗಿ ತಮ್ಮ ಕಲಾ ಪ್ರೌಢಿಮೆಯನ್ನು ಮೆರೆದು ಪ್ರೇಕ್ಷಕರನ್ನು ರಂಜಿಸಿದರು.

ಈ ಸಂದರ್ಭ ಶಿಕ್ಷಕರು ಸೇರಿದಂತೆ ಮಕ್ಕಳ ಪೋಷಕರು ಉಪಸ್ಥಿತರಿದ್ದರು.

Leave a Reply

comments

Related Articles

error: