ಮೈಸೂರು

ಸಾರ್ವಜನಿಕರಲ್ಲಿ ಹೆಚ್ಚುತ್ತಿರುವ ವನ್ಯಜೀವಿಗಳ ಪರ ಕಾಳಜಿ : ಮೃಗಾಲಯದಲ್ಲಿ ದತ್ತು ಪಡೆಯಲು ಹೆಚ್ಚುತ್ತಿದೆ ಬೇಡಿಕೆ

ಮೈಸೂರು,ಜೂ.8:-  ಇತ್ತೀಚೆಗೆ ಸಾರ್ವಜನಿಕರಲ್ಲಿ ವನ್ಯಜೀವಿಗಳ ಕುರಿತು ಕಾಳಜಿ ಮೂಡುತ್ತಿದ್ದು, ಮೈಸೂರು ಮೃಗಾಲಯದಲ್ಲಿ ಪ್ರಾಣಿ–ಪಕ್ಷಿಗಳನ್ನು ದತ್ತು ಪಡೆಯಲು ಸಾರ್ವಜನಿಕರಿಂದ ಹೆಚ್ಚಿನ ಬೇಡಿಕೆ ಬರುತ್ತಿದೆ.

ಸಾರ್ವಜನಿಕರು, ಪ್ರಾಣಿ-ಪಕ್ಷಿ ಪ್ರಿಯರು ಹಣ ನೀಡಿ ದತ್ತು ಪಡೆದು ವರ್ಷದ ಮಟ್ಟಿಗೆ ಪ್ರಾಣಿಗಳ ನಿರ್ವಹಣೆ ವೆಚ್ಚ ಭರಿಸಲು ಮುಂದಾಗುತ್ತಿದ್ದು, ಕೆಲವರು ಪ್ರತಿ ವರ್ಷ ದತ್ತು ನವೀಕರಿಸುತ್ತಿದ್ದಾರೆ. ಇದರಿಂದ ಮೃಗಾಲಯದ ಆದಾಯವೂ ಹೆಚ್ಚುತ್ತಿದೆ. ಹುಲಿ, ಚಿರತೆ, ಆನೆ, ಜಿರಾಫೆ, ನವಿಲು ದತ್ತು ಪಡೆಯುವವರ ಸಂಖ್ಯೆಯೇ ಅಧಿಕವಾಗಿದ್ದು, ಈ ಯೋಜನೆಯಿಂದ ಕಳೆದ 17 ವರ್ಷಗಳಲ್ಲಿ ಸುಮಾರು  3.53 ಕೋಟಿ ರೂ. ಆದಾಯ ಮೃಗಾಲಯದ ಖಜಾನೆ ಸೇರಿದೆ ಎನ್ನಲಾಗಿದೆ. 2017–18ನೇ ಆರ್ಥಿಕ ವರ್ಷದಲ್ಲಿ  36 ಲಕ್ಷ ರೂ.ಆದಾಯ ಲಭಿಸಿದೆಯಂತೆ.  374 ಪ್ರಾಣಿಗಳನ್ನು ದತ್ತು ಪಡೆಯಲಾಗಿದ್ದು,‘ಮೃಗಾಲಯಕ್ಕೆ ಸರ್ಕಾರದಿಂದ ಯಾವುದೇ ಅನುದಾನ ಬರಲ್ಲ. ಆದರೆ, ಪ್ರವೇಶ ಶುಲ್ಕ ಹಾಗೂ ದತ್ತು ಯೋಜನೆಯ ಹಣದಿಂದಲೇ ನಿರ್ವಹಣೆ ಸಾಧ್ಯ. ಒಂದು ಹುಲಿ ನಿರ್ವಹಣೆಗೆ ವರ್ಷಕ್ಕೆ ಕನಿಷ್ಠ ವೆಂದರೂ 4 ಲಕ್ಷ ರೂ.ಬೇಕು’ ಎನ್ನುತ್ತಾರೆ ಮೃಗಾಲಯದ ನಿರ್ದೇಶಕರು. ಕ್ರೀಡಾಪಟುಗಳು, ಚಿತ್ರನಟರು ಮಾತ್ರವಲ್ಲದೆ ಕಂಪನಿಗಳು, ಶಿಕ್ಷಣ ಸಂಸ್ಥೆಗಳು, ಸಂಘ ಸಂಸ್ಥೆಗಳು ಪ್ರಾಣಿ-ಪಕ್ಷಿಗಳನ್ನು ದತ್ತು ಪಡೆಯುತ್ತಿವೆ. ಹೊರರಾಜ್ಯದ ಪ್ರವಾಸಿಗರೂ ದತ್ತು ಸ್ವೀಕರಿಸುತ್ತಿದ್ದಾರೆ. ದತ್ತು ಸ್ವೀಕರಿಸಿದವರಿಗೆ ಪ್ರಮಾಣಪತ್ರವನ್ನು ನೀಡಲಾಗುತ್ತಿದ್ದು, 5ಮಂದಿಗೆ ವರ್ಷದಲ್ಲಿ ಮೃಗಾಲಯ ಪ್ರವೇಶಕ್ಕೆ ಅವಕಾಶವಿದೆ.

ಒಟ್ಟಿನಲ್ಲಿ ಪ್ರಾಣಿ-ಪಕ್ಷಿ ಪ್ರಿಯರು ಎಚ್ಚೆತ್ತಿದ್ದು, ಪ್ರಾಣಿ-ಪಕ್ಷಿಗಳ ಉಳಿವಿಗೆ ದತ್ತು ಯೋಜನೆಯ ಮೂಲಕ ಸಹಕರಿಸುತ್ತಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: