ಮೈಸೂರು

ಮೀಸಲಾತಿ ವರ್ಗೀಕರಣಕ್ಕೆ ಆಗ್ರಹ: ಪ್ರತಿಭಟನೆ

ನ್ಯಾ.ಎ.ಜೆ. ಸದಾಶಿವ ಆಯೋಗದ ವರದಿಯಂತೆ ಮೀಸಲಾತಿ ವರ್ಗೀಕರಣಕ್ಕೆ ಆಗ್ರಹಿಸಿ ಸಾಮಾಜಿಕ ನ್ಯಾಯಪರ ವೇದಿಕೆಯಿಂದ ಶುಕ್ರವಾರದಂದು ಟೌನ್‍ಹಾಲ್ ಆವರಣದಲ್ಲಿರುವ ಅಂಬೇಡ್ಕರ್ ಪ್ರತಿಮೆ ಬಳಿ ಒಂದು ದಿನದ ಉಪವಾಸ ಸತ್ಯಾಗ್ರಹ ನಡೆಯಿತು.

ಶಿಕ್ಷಣ, ಉದ್ಯೋಗ, ರಾಜಕೀಯ, ವಿವಿಧ ಸರ್ಕಾರಿ ಯೋಜನೆಗಳು ಅಸ್ಪೃಶ್ಯ ಹಾಗೂ ದಲಿತರಿಗೆ ಸಮಾನವಾಗಿ ಹಂಚಿಕೆಯಾಗಬೇಕು. ಪರಿಶಿಷ್ಟ ಜಾತಿಗಳಲ್ಲಿನ ಜನರ ನೋವಿಗೆ ಪ್ರಜ್ಞಾವಂತ ಸಮೂಹ ದನಿಯಾಗಬೇಕು. ಸಾಮಾಜಿಕ ನ್ಯಾಯಕ್ಕೆ, ಮೀಸಲಾತಿ ವರ್ಗೀಕರಣಕ್ಕೆ ಒತ್ತು ನೀಡಿರುವ ನಿವೃತ್ತ ನ್ಯಾಯಮೂರ್ತಿ ಎ.ಜೆ. ಸದಾಶಿವ ಆಯೋಗದ ವರದಿಯನ್ನು ಕೆಲವರು ತಮಗಿಷ್ಟವಾದಂತೆ ಅರ್ಥೈಸುವ ಕೆಲಸ ನಿಲ್ಲಬೇಕು.

2005ರಲ್ಲಿ ನೇಮಕಗೊಂಡ ನ್ಯಾ.ಸದಾಶಿವ ಆಯೋಗವು 2012 ಜೂ.14ರಲ್ಲಿ ಸರ್ಕಾರಕ್ಕೆ ವರದಿಯನ್ನು ಸಲ್ಲಿಸಿ 4 ವರ್ಷಗಳು ಕಳೆದಿದ್ದರೂ ಕೂಡ ಸದರಿ ಆಯೋಗದ ವರದಿಯನ್ನು ಆಡಳಿತದಲ್ಲಿರುವ ಸರ್ಕಾರಗಳು ಜಾರಿಗೊಳಿಸದಿರುವುದು ಬೇಸರದ ಸಂಗತಿ. ಶೀಘ್ರವೇ ಈ ವರದಿಯನ್ನು ಕೇಂದ್ರಕ್ಕೆ ಶಿಫಾರಸು ಮಾಡಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಹಂತಹಂತವಾಗಿ ಉಗ್ರ ಹೋರಾಟ ಮತ್ತು ಜೈಲ್‍ಭರೋ ಚಳವಳಿಯನ್ನು ಹಮ್ಮಿಕೊಳ್ಳಲಾಗುವುದೆಂದು ಪ್ರತಿಭಟನಾಕಾರರು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಹಿರಿಯ ಸಮಾಜವಾದಿ ಹೋರಾಟಗಾರರಾದ ಪ.ಮಲ್ಲೇಶ್, ಸಾಹಿತಿ ಪ್ರೊ.ಕೆ.ಎಸ್.ಭಗವಾನ್, ಖ್ಯಾತ ವಿಮರ್ಶಕರು, ಚಿಂತಕರು ಪ್ರೊ. ಜಿ.ಎಚ್. ನಾಯಕ್, ಸಮತಾ ವೇದಿಕೆಯ ಮೀರಾ ನಾಯಕ್, ಸಾಹಿತಿಗಳಾದ ಪ್ರೊ. ಕಾಳೇಗೌಡ ನಾಗವಾರ, ಪ್ರೊ.ಅರವಿಂದ ಮಾಲಗತ್ತಿ ಮೊದಲಾದವರು ಉಪಸ್ಥಿತರಿದ್ದರು.

Leave a Reply

comments

Related Articles

error: