ಮೈಸೂರು

ಮಹಿಳೆಯರು ಅಬಲೆಯರಲ್ಲ ಸಬಲೆಯರು : ಡಾ.ಡಿ.ವೀರೇಂದ್ರ ಹೆಗ್ಗಡೆ ಅಭಿಮತ

ಪುರುಷರಂತೆ ಮಹಿಳೆಯರಿಗೂ ಎಲ್ಲಾ ಕ್ಷೇತ್ರದಲ್ಲೂ ಸಮಾನ ಅವಕಾಶವಿದ್ದು, ಅವರಿಗೆ ಉನ್ನತ ಶಿಕ್ಷಣ ನೀಡುವುದು ನಮ್ಮ ಕರ್ತವ್ಯ. ಅವರು ಅಬಲೆಯರಲ್ಲ. ಸಬಲೆಯರು  ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಅಭಿಪ್ರಾಯಪಟ್ಟಿದ್ದಾರೆ.

ಮೈಸೂರಿನ ಕೃಷ್ಣಮೂರ್ತಿಪುರಂನಲ್ಲಿರುವ  ಮೈಸೂರು ಮಕ್ಕಳ ಕೂಟ ಮತ್ತು ಶ್ರೀಧರ್ಮಸ್ಥಳ ಮಂಜುನಾಥೇಶ್ವರ ಬಾಲಕಿಯರ ಪದವಿಪೂರ್ವ ಮಹಾವಿದ್ಯಾಲಯದ ನೂತನ ಕಟ್ಟಡ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮಾತನಾಡಿದರು. ಮಹಿಳೆಯರು ಯಾವುದರಲ್ಲೂ ಪುರುಷರಿಗಿಂತ ಹಿಂದಿಲ್ಲ. ಇಂದಿನ ಕಾಲದಲ್ಲಿ ಮಹಿಳೆಯರು ಎಲ್ಲಾ ಕ್ಷೇತ್ರದಲ್ಲೂ ಮುಂದಿದ್ದಾರೆ. ನಮ್ಮ ಸಂಸ್ಥೆ ಕೂಡ ಎಂದೆಂದೂ ಶಿಕ್ಷಣ ಒದಗಿಸಲು ನಿರತವಾಗಿದೆ ಎಂದರು. ಮಹಿಳೆಯರನ್ನು ಸಬಲೀಕರಣಗೊಳಿಸಲು ಕೋರ್ಸ್ ಫಾರ್ ಹ್ಯಾಪಿ ಲೀವಿಂಗ್ ನ್ನು ಜಾರಿಗೆ ತರಲಿದ್ದು, ಕೋರ್ಸ್ ಕಾನೂನಿನ ಅರಿವು, ಗೃಹಿಣಿಯ ಲಕ್ಷಣಗಳು, ಮುಂತಾದವುಗಳನ್ನು ಒಳಗೊಂಡಿದೆ. ಮಹಿಳೆ ಅಬಲೆಯಲ್ಲ. ಸಬಲೆ ಎನ್ನುವುದನ್ನು ತಿಳಿಸಲಿದೆ. ಇದಕ್ಕಾಗಿ ಪ್ರತ್ಯೇಕ ವಿಂಗ್ ಕಾರ್ಯನಿರ್ವಹಿಸಲಿದ್ದು, ಮುಂದಿನ ವರ್ಷದ ಒಳಗಾಗಿ ನಮ್ಮ ಎಲ್ಲ ಸಂಸ್ಥೆಗಳಲ್ಲೂ ಜಾರಿಗೆ ತರಲಿದ್ದೇವೆ ಎಂದರಲ್ಲದೇ, ಮೈಸೂರಿನ ರಾಜಮನೆತನಕ್ಕೂ ಧರ್ಮಸ್ಥಳಕ್ಕೂ ಅವಿನಾಭಾವ ಸಂಬಂಧವಿದ್ದು, ನಮ್ಮ ಸಂಸ್ಥೆಗೆ ರಾಜಮನೆತನದ ಕೊಡುಗೆ ಅಪಾರ ಎಂದು ತಿಳಿಸಿದರು.

ಕಾರ್ಯಕ್ರಮವನ್ನು ರಾಜಮಾತೆ ಪ್ರಮೋದಾದೇವಿ ಒಡೆಯರ್ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಹೆಣ್ಣುಮಕ್ಕಳು ವಿದ್ಯಾಭ್ಯಾಸದಲ್ಲಿ ಯಾವತ್ತೂ ಮುಂದಿರುತ್ತಾರೆ. ಅವರಿಗೆ ವಿದ್ಯಾಭ್ಯಾಸ ಒದಗಿಸುವ ಶಿಕ್ಷಣ ಸಂಸ್ಥೆಗಳ ಪಾತ್ರವೂ ಮಹತ್ತರವಾದದ್ದಾಗಿದೆ.  ವೀರೇಂದ್ರ ಹೆಗ್ಗಡೆಯವರ ಕಾರ್ಯ ನಿಜಕ್ಕೂ ಶ್ಲಾಘನೀಯ. 2015ರವೇಳೆಗೆ ಈ ದೇಶವನ್ನು ಯುವ ಪೀಳಿಗೆ ಆಳ್ವಿಕೆ ನಡೆಸಲಿದೆ ಎಂದು ಹೇಳಿದರು.

ನಮ್ಮ ದೇಶದ ಸಂಸ್ಕೃತಿ ಹಾಗೂ ಆಧ್ಯಾತ್ಮಿಕತೆ ಉಳಿಸಬೇಸಬೇಕಿದ್ದು ಯುವಕ-ಯುವತಿಯರು ಪ್ರಮುಖ ಪಾತ್ರ ವಹಿಸಬೇಕು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಶಾಸಕ ಎಂ.ಕೆ.ಸೋಮಶೇಖರ್, ಪದವಿಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಜಯಪ್ರಕಾಶ್, ಮಾಜಿ ಮೇಯರ್ ಎಂ.ಪುರುಷೋತ್ತಮ್, ಮತ್ತಿತರರು ಉಪಸ್ಥಿತರಿದ್ದರು.

Leave a Reply

comments

Related Articles

error: