
ಮೈಸೂರು
ಕನ್ನಡ ಭಾಷೆ ಬೆಳೆದರೆ ಸಾಹಿತ್ಯ ಬೆಳೆಯಲಿದೆ : ಹೆಚ್.ವಿ.ವೆಂಕಟೇಶ್
ಕನ್ನಡ ಭಾಷೆ ಬೆಳೆದರೆ ಕನ್ನಡ ಸಾಹಿತ್ಯ, ಕನ್ನಡ ಸಂಸ್ಕೃತಿ ಬೆಳೆಯಲು ಸಾಧ್ಯ. ಯಾವುದೇ ಭಾಷೆ ಬೆಳೆಯದಿದ್ದರೆ ಅಲ್ಲಿನ ನಾಡು, ನುಡಿ, ಜನ, ಸಂಸ್ಕೃತಿ ಬೆಳೆಯಲು ಸಾಧ್ಯವಿಲ್ಲ ಎಂದು ಮೈಸೂರು ಪೇಂಟ್ಸ್ ಮತ್ತು ವಾರ್ನಿಷ್ ನ ಅಧ್ಯಕ್ಷ ಎಚ್.ವಿ.ವೆಂಕಟೇಶ್ ಹೇಳಿದರು.
ಮೈಸೂರು ಕನ್ನಡ ವೇದಿಕೆ ವತಿಯಿಂದ ಶುಕ್ರವಾರ ಮೈಸೂರಿನ ಅಗ್ರಹಾರದ ಅನಘ ಆಸ್ಪತ್ರೆಯ ಪಕ್ಕದಲ್ಲಿ 60 ನೇ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಸರ್ಕಾರಿ ಶಾಲಾ ಮಕ್ಕಳಿಗೆ ಕನ್ನಡ ಸಾಹಿತ್ಯ ಪುಸ್ತಕಗಳ ವಿತರಣೆ ಮತ್ತು ಸಾಧಕರಿಗೆ ಅಭಿನಂದನಾ ಕಾರ್ಯಕ್ರಮವನ್ನು ಹೆಚ್.ವಿ.ವೆಂಕಟೇಶ್ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಪ್ರಾಥಮಿಕ ಹಂತದಿಂದಲೇ ಕನ್ನಡ ಭಾಷೆಯನ್ನು ಕಲಿತರೆ ವ್ಯಕ್ತಿತ್ವವನ್ನು ವೃದ್ದಿಸುತ್ತದೆ. ನಮ್ಮ ಹಿರಿಯರು ನಾಡು ನುಡಿಯನ್ನು ಕಟ್ಟಿ ಬೆಳೆಸಿ ಹೋಗಿದ್ದಾರೆ. ಅದನ್ನು ಉಳಿಸಿ ಬೆಳೆಸಿಕೊಂಡು ಹೋಗುವುದು ಎಲ್ಲರ ಆದ್ಯ ಕರ್ತವ್ಯವಾಗಿದೆ ಎಂದರು.
ಇಂದು ಸರ್ಕಾರಿ ಶಾಲೆಗಳಲ್ಲಿ ಸೌಲಭ್ಯಗಳ ಕೊರತೆ ಇದೆ. ಖಾಸಗಿ ಶಾಲೆಗಳಲ್ಲಿ ಎಲ್ಲಾ ಸೌಲಭ್ಯಗಳು ಹೆಚ್ಚಾಗಿವೆ. ಈ ಕಾರಣಕ್ಕಾಗಿ ರಾಜ್ಯ ಸರ್ಕಾರ ಕನ್ನಡ ಭಾಷೆಯ ಶಾಲೆಗಳನ್ನು ಬೆಳೆಸಲು ಹತ್ತು – ಹಲವು ಯೋಜನೆಗಳನ್ನು ಜಾರಿ ಮಾಡಿದೆ. ಸರ್ಕಾರಿ ಶಾಲೆಗಳಲ್ಲಿ ಓದುವ ಮಕ್ಕಳು ತುಂಬಾ ಪ್ರತಿಭಾವಂತರು. ಇಲ್ಲಿ ಓದಿದರೆ ಅವರ ಅಭಿಮಾನ ಗೌರವ ಹೆಚ್ಚಾಗುತ್ತದೆ ಎಂದು ಹೇಳಿದರು.
ಸಾಹಿತಿ ಬನ್ನೂರು ಕೆ.ರಾಜು ಧ್ವಜಾರೋಹಣ ನೆರವೇರಿಸಿದರು.
ಮೈಸೂರು ಕನ್ನಡ ವೇದಿಕೆಯ ಅಧ್ಯಕ್ಷ ಎಸ್.ಬಾಲಕೃಷ್ಣ ಅಕ್ಕನಬಳಗ ಶಾಲಾ ಮಕ್ಕಳಿಗೆ ಸಾಹಿತ್ಯ ಪುಸ್ತಕ ವಿತರಣೆ ಮಾಡಿದರು. ಆಂದೋಲನ ದಿನಪತ್ರಿಕೆಯ ವರದಿಗಾರ ರಾಜೇಶ್ವರ, ಕಂಸಾಲೆ ಕುಮಾರಸ್ವಾಮಿ ಮತ್ತು ಛಾಯಾಗ್ರಾಹಕ ಆರ್. ಮಧುಸೂಧನ್ ಇವರನ್ನು ಸನ್ಮಾನಿಸಲಾಯಿತು. ಬಳಿಕ ಮಕ್ಕಳಿಗೆ ಸಿಹಿ ವಿತರಿಸಲಾಯಿತು.
ಈ ಸಂದರ್ಭ ವೇದಿಕೆಯ ಪದಾಧಿಕಾರಿಗಳಾದ ನಾಲಾಬೀದಿ ರವಿ, ಬೋಗಾದಿ ಸಿದ್ದೇಗೌಡ, ಗುರುಬಸಪ್ಪ, ಮನುರಾಜ್ ಮತ್ತಿತರರು ಉಪಸ್ಥಿತರಿದ್ದರು.