ಮೈಸೂರು

ಸಮಾಜದಲ್ಲಿ ಮಾಹಿತಿಯಿಂದ ಪರಿವರ್ತನೆ : ಡಾ.ಡಿ.ವೀರೇಂದ್ರ ಹೆಗ್ಗಡೆ

samavesh-2ಆಧುನಿಕತೆ ಹೆಚ್ಚಿದಂತೆ ಅವಶ್ಯಕತೆಗಳು ಹೆಚ್ಚಾಗಿವೆ. ಅದರಂತೆ ಖರ್ಚುಗಳು ಹೆಚ್ಚಾಗುತ್ತಿವೆ. ಇದು ಮಾಹಿತಿ ಯುಗವಾಗಿದ್ದು, ಸಮಾಜದಲ್ಲಿ ಮಾಹಿತಿಯು ಬಹಳಷ್ಟು ಪರಿವರ್ತನೆ ತಂದಿದೆ ಎಂದು ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಹೇಳಿದರು.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ವತಿಯಿಂದ ಶುಕ್ರವಾರ ಮೈಸೂರಿನ ಜಗನ್ಮೋಹನ ಅರಮನೆಯಲ್ಲಿ ಜ್ಞಾನವಿಕಾಸ ಕಾರ್ಯಕ್ರಮ ಅಂಗವಾಗಿ ಮಹಿಳಾ ಸಮಾವೇಶವನ್ನು ಏರ್ಪಡಿಸಲಾಗಿತ್ತು. ಸಮಾವೇಶವನ್ನು ಡಾ.ಡಿ.ವೀರೇಂದ್ರ ಹೆಗ್ಗಡೆ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಈ ಹಿಂದೆ ಉದ್ಯೋಗಾವಕಾಶಗಳು ಹೆಚ್ಚಾಗಿರಲಿಲ್ಲ. ಆದರೆ ಇಂದು ಉತ್ತಮ ಗುಣಮಟ್ಟದ ಶಿಕ್ಷಣದಿಂದ ಎಲ್ಲರೂ ಶಿಕ್ಷಣ ಪಡೆದು ಸುಶಿಕ್ಷಿತರಾಗಿದ್ದಾರೆ. ಉದ್ಯೋಗಾವಕಾಶಗಳು  ಹೆಚ್ಚಾಗಿವೆ. ಸಾಮಾಜಿಕ ಬದಲಾವಣೆ ಸಾಧ್ಯವಾಗಿದೆ ಎಂದು ಹೇಳಿದರು.

ದಾಂಪತ್ಯದಲ್ಲಿ ಮುಖ್ಯವಾಗಿ ಸಾಮರಸ್ಯ ಇರಬೇಕು. ಆದರೆ ಇಂದಿನ ದಿನಗಳಲ್ಲಿ ಸಾಮರಸ್ಯ ಮಾಯವಾಗಿ ಒಡಕುಗಳು ಕಾಣಿಸುತ್ತಿವೆ. ಸಂಬಂಧಗಳಲ್ಲಿರಬೇಕಾದ ಸಾಮರಸ್ಯ ಗಡಿಪಾರಾಗಿ ಹೊರಗುಳಿದಿದೆ. ಇದಕ್ಕೆ ಕಾರಣ ಮಾನವನ ಮನಸ್ಥಿತಿ. ಮನುಷ್ಯ ನೆಮ್ಮದಿ ಜೀವನಕ್ಕಾಗಿ ಹುಡುಕಾಟ ನಡೆಸುತ್ತಿದ್ದಾನೆ ಎಂದರು.

ಉತ್ತಮ ಜೀವನ ನಿರ್ವಹಣೆಗಾಗಿ ಉಳಿತಾಯವು ಸಹ ಮುಖ್ಯವಾಗುತ್ತದೆ. ಸರ್ಕಾರ ಅನೇಕ ಯೋಜನೆಗಳನ್ನು ಅನುಷ್ಠಾನಗೊಳಿಸುತ್ತಿದೆ. ಉತ್ತಮ ರೀತಿಯಲ್ಲಿ ಯೋಜನೆಗಳ ಸದುಪಯೋಗ ಪಡೆದುಕೊಂಡಾಗ ಅಭಿವೃದ್ಧಿ ಸಾಧ್ಯವಾಗುತ್ತದೆ. ಅಂತೆಯೇ ಸಂಘ ಸಂಸ‍್ಥೆಗಳ ಮೂಲಕವೂ ಸಹ ನಿಮ್ಮ ಉಳಿತಾಯವನ್ನು ಹೆಚ್ಚಿಸಿಕೊಳ್ಳಬಹುದಾಗಿದೆ. ಮಹಿಳೆಯರಿಗಾಗಿಯೇ ಇರುವ ಸ್ವಸಹಾಯ ಸಂಘಗಳು ಅಭಿವೃದ್ಧಿಯ ದಾರಿದೀಪಗಳಾಗಿವೆ. ಇಂತಹ ಸಂಘಸಂಸ್ಥೆಗಳು ಧೈರ್ಯ ಮತ್ತು ಆತ್ಮವಿಶ್ವಾಸವನ್ನು ಹೆಚ್ಚಿಸುತ್ತವೆ ಎಂದು ತಿಳಿಸಿದರು.

ಪ್ರತಿಯೊಂದು ಕುಟುಂಬವೂ ಮದ್ಯಪಾನ ಮುಕ್ತ ಕುಟುಂಬವಾಗಬೇಕು. ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ಕೃಷಿ ಉತ್ಪನ್ನಗಳನ್ನು ಬೆಳೆಯಬೇಕು. 10 ರೂ. ನಿಂದ ಕೋಟಿ ರೂ.ಗಳವರೆಗೆ ಉಳಿತಾಯ ಮಾಡಬೇಕು ಎಂದರು.

ಕಾರ್ಯಕ್ರಮಕ್ಕೂ ಮುನ್ನ ವಿಚಾರಗೋಷ್ಠಿಗಳನ್ನು ಏರ್ಪಡಿಸಲಾಗಿತ್ತು.

ವೇದಿಕೆಯಲ್ಲಿ  ಶಾಸಕ ವಾಸು, ಮಹಾನಗರ ಪಾಲಿಕೆ ಸದಸ್ಯ ಪ್ರಶಾಂತ್, ಜಿಲ್ಲಾ ಪಂಚಾಯತ್ ಅಧ‍್ಯಕ್ಷೆ ನಹೀಮಾ ಸುಲ್ತಾನ್ ಮತ್ತಿತರರು ಹಾಜರಿದ್ದರು.

Leave a Reply

comments

Related Articles

error: