ಮೈಸೂರು

ಸಾಹಿತ್ಯವನ್ನು ಉಳಿಸುವ ಜವಾಬ್ದಾರಿ ಯುವ ಪೀಳಿಗೆಯ ಮೇಲಿದೆ: ಡಾ. ಮಳಲಿ ವಸಂತಕುಮಾರ್

ಇಂದಿನ ದಿನಗಳಲ್ಲಿ ಮಹಾನ್ ಸಾಹಿತಿಗಳ ಕೊರತೆ ಕಾಣುತ್ತಿದ್ದು, ಸಾಹಿತ್ಯವನ್ನು ಉಳಿಸುವ ಜವಾಬ್ದಾರಿ ಯುವ ಪೀಳಿಗೆಯ ಮೇಲಿದೆ ಎಂದು ಹಿರಿಯ ವಿದ್ವಾಂಸ ಡಾ. ಮಳಲಿ ವಸಂತಕುಮಾರ್ ಹೇಳಿದರು.

ಮೈಸೂರಿನ ಕರ್ನಾಟಕ ಕಲಾಮಂದಿರದ ಮನೆಯಂಗಳದ ಸಭಾಂಗಣದಲ್ಲಿ ಕರ್ನಾಟಕ ವಿಚಾರ ವೇದಿಕೆ ವತಿಯಿಂದ ಶುಕ್ರವಾರ ಏರ್ಪಡಿಸಿದ್ದ ಹಿರಿಯ ಸಾಹಿತಿ ಡಾ. ಸಿ.ಪಿ. ಕೃಷ್ಣಕುಮಾರ್ ರಚಿಸಿರುವ ‘ನೋವಿನ ದೇವತೆಗೆ’ ಹಾಗೂ ‘ಪರಿಚಯನ’ ಕೃತಿಗಳನ್ನು ಡಾ. ಮಳಲಿ ವಸಂತಕುಮಾರ್ ಲೋಕಾರ್ಪಣೆಗೊಳಿಸಿದರು. ಬಳಿಕ ಮಾತನಾಡಿದ ಅವರು ಇಂದಿನ ದಿನಗಳಲ್ಲಿ ಪ್ರತಿಭಾನ್ವಿತ ಸಾಹಿತಿಗಳಿಲ್ಲದೆ ಸಾಹಿತ್ಯ ಸೊರಗುತ್ತಿದೆ. ಡಾ. ಸಿ.ಪಿ.ಕೆ. ಅಪಾರ ಜ್ಞಾನವನ್ನು ಹೊಂದಿದವರಾಗಿದ್ದಾರೆ. ಅಂತಹ ವಿದ್ವಾಂಸರನ್ನು ಕನ್ನಡಿಗರು ಕಾಪಾಡುವ ಅಗತ್ಯವಿದೆ ಎಂದು ಹೇಳಿದರು.

ಅವರು ತಮ್ಮ ಕೃತಿಯಲ್ಲಿ, ಬದಲಾದ ಶಿಕ್ಷಣ ವ್ಯವಸ್ಥೆ ಹಾಗೂ ಮೌಢ್ಯತೆಗಳ ಕುರಿತು ತಿಳಿಸಿದ್ದಾರೆ. ಅವರ ಭಾಷಾ ಬಳಕೆ ಅದ್ಭುತವಾಗಿದೆ. ಇಂದಿನ ಓದುಗರು ಒಬ್ಬ ಸಾಹಿತಿಯನ್ನು ಬೇರೊಬ್ಬ ಸಾಹಿತಿಗೆ ಹೋಲಿಸುತ್ತಾರೆ. ಅಂತಹ  ಮನಸ್ಥಿತಿ ಬದಲಾಗಬೇಕು. ಪ್ರತಿಯೊಬ್ಬ ಲೇಖಕನಿಗೂ ತನ್ನದೆ ಆದ ವೈಶಿಷ್ಟ್ಯತೆಗಳಿದ್ದು, ಅದನ್ನು ಎಲ್ಲರು ಗೌರವಿಸುವಂತಾಗಬೇಕು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಮೈಸೂರು ವಿಶ್ವವಿದ್ಯಾನಿಲಯದ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ಮಾಜಿ ನಿರ್ದೇಶಕ ಡಾ. ನೀಲಗಿರಿ ತಳವಾರ್, ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಕನ್ನಡ ಪ್ರಾಧ್ಯಾಪಕಿ ಡಾ. ಕವಿತಾ ರೈ, ಹಾಡ್ರ್ವಿಕ್ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಹಿರಿ ಮುರಳಿ ಧರ್ಮರಾಜು ಮತ್ತಿತರರು ಉಪಸ್ಥಿತರಿದ್ದರು.

Leave a Reply

comments

Related Articles

error: