ಪ್ರಮುಖ ಸುದ್ದಿಮೈಸೂರು

ಹನುಮ ಜಯಂತಿ, ಈದ್ ಮಿಲಾದ್ ಆಚರಣೆಗೆ ಷರತ್ತುಬದ್ಧ ಅನುಮತಿ: ಚನ್ನಣ್ಣನವರ್

ಹುಣಸೂರಿನಲ್ಲಿ ಡಿಸೆಂಬರ್ 12 ರಂದು ಹನುಮ ಜಯಂತಿ ಹಾಗೂ 13 ರಂದು ಈದ್ ಮಿಲಾದ್ ಆಚರಣೆಗೆ ಷರತ್ತು ಬದ್ಧ ಅನುಮತಿ ನೀಡಲಾಗಿದೆ ಎಂದು ಮೈಸೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರವಿ ಡಿ. ಚನ್ನಣ್ಣನವರ್ ತಿಳಿಸಿದರು.

ಹುಣಸೂರಿನ ಡಿವೈಎಸ್‍ಪಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರವಿ ಡಿ. ಚನ್ನಣ್ಣನವರ್ ಅವರು, ಹನುಮಂತ ಜಯಂತಿ ಹಾಗೂ ಈದ್ ಮಿಲಾದ್ ಅಂಗವಾಗಿ ಹುಣಸೂರು ತಾಲೂಕಿನಲ್ಲಿ ನಾಲ್ವರನ್ನು ಗಡಿಪಾರು ಮಾಡಿ ಆದೇಶ ಹೊರಡಿಸಲಾಗಿದೆ ಎಂದು ತಿಳಿಸಿದರು. ಡಿ. 12 ರಂದು ಹನುಮ ಜಯಂತೋತ್ಸವ ಆಚರಿಸಲು ಅನುವು ಮಾಡಿ ಕೊಡಲಾಗುವುದು. ಜೊತೆಗೆ, ಡಿ. 13 ರಂದು ಮುಸ್ಲಿಂ ಬಾಂಧವರು ಸೌಹಾರ್ದತೆಯಿಂದ ಮಸೀದಿಗಳಲ್ಲಿ ಪ್ರಾರ್ಥನೆ ಸಲ್ಲಿಸಬೇಕು ಎಂದರು.

ಇನ್ನು ಈ ಹಿಂದಿನ ಅಧಿಕಾರಿಗಳು ಕೈಗೊಂಡ ತೀರ್ಮಾನಕ್ಕೆ ಅನುಸಾರವಾಗಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು. ಎರಡು ಧರ್ಮಗಳ ಪ್ರಮುಖ ‌ಮುಂಡರನ್ನು ಕರೆದು ಮೆರವಣಿಗೆ ಸೇರಿದಂತೆ ಪ್ರಮುಖ ಕಾರ್ಯಕ್ರಮದ ಬಗ್ಗೆ ಚರ್ಚೆ ಮಾಡುವುದಾಗಿಯೂ ತಿಳಿಸಿದರು.

ಅಲ್ಲದೆ, ಶಾಂತಿ ಸೌಹಾರ್ದತೆ ಕಾಪಾಡುವ ನಿಟ್ಟಿನಲ್ಲಿ ತಾಲೂಕಿನಾದ್ಯಂತ ಇಬ್ಬರು ಎ.ಎಸ್.ಪಿ, 8 ಮಂದಿ ಡಿವೈಎಸ್ಪಿ, 15 ಮಂದಿ ಇನ್ಸಪೆಕ್ಟರ್, 50 ಮಂದಿ ಸಬ್ ಇನ್ಸಪೆಕ್ಟರ್, 100 ಮಂದಿ ಸಹಾಯಕ ಸಬ್ ಇನ್ಸ್`ಪೆಕ್ಟರ್ ಗಳು, 1500 ಪೊಲೀಸ್ ಸಿಬ್ಬಂದಿ, 8 ತುಕಡಿಯ 200 ಮಂದಿ ಪೊಲೀಸ್ ಸಿಬ್ಬಂದಿ, 300 ಮಂದಿ ಡಿ.ಆರ್. ಪೊಲೀಸ್, ಗೃಹ ರಕ್ಷಕ ಪಡೆ, 150 ಮಂದಿ ಮಫ್ತಿ ಪೊಲೀಸರು ಸೇರಿದಂತೆ ಆರ್.ಪಿ.ಎಫ್. ಪಡೆಯೊಟ್ಟಿಗೆ 500 ಸಿಸಿಟಿವಿ ಕ್ಯಾಮೆರಾದ ಜೊತೆಯಲ್ಲಿ ಪೊಲೀಸರ ವಿಡಿಯೊ ಕ್ಯಾಮರಾಗಳು ಕಣ್ಗಾವಲಿರಲಿದೆ ಎಂದು ಮಾಹಿತಿ ನೀಡಿದರು.

ಜನತೆ ಯಾವುದೇ ರೀತಿ ಶಾಂತಿ ಕದಡುವಂತ ಮಾತುಗಳಿಗೆ ಕಿವಿ ಕೊಡಬಾರದು. ಸಮಾಜದಲ್ಲಿ ಶಾಂತಿ ಭಂಗ ಮಾಡಲು ಯತ್ನಿಸಿದರೆ ಅಂತವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಚ್ಚರಿಕೆ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಎಸ್.ಎಸ್.ಪಿ. ಕಲಾಕೃಷ್ಣಸ್ವಾಮಿ, ಡಿವೈಎಸ್ಪಿ ಸವಿತಾ ಹೂಗಾರ್, ಇನ್ಸಪೆಕ್ಟರ್ ಧರ್ಮೇಂದ್ರ, ಸಬ್ ಇನ್ಸಪೆಕ್ಟರ್ ಷಣ್ಮುಗ ಉಪಸ್ಥಿತರಿದ್ದರು.

Leave a Reply

comments

Related Articles

error: