ಮೈಸೂರು

ಪ್ರಾಣಿಗಳ ಸ್ಥಿತಿಗತಿ ಕುರಿತ ಹೆಲ್ತ್ ಕಾರ್ಡ್ ಸದ್ಯದಲ್ಲೇ ಬಿಡುಗಡೆ

ಮೃಗಾಲಯದಲ್ಲಿ ಕಳೆದ ಐದು ವರ್ಷಗಳ ಅವಧಿಯಲ್ಲಿ ಸಾವಿನ ಪ್ರಮಾಣ ಶೇ. 8ರಷ್ಟು ಮಾತ್ರ ಇದ್ದು, ಜನನ ಪ್ರಮಾಣ ಶೇ. 40ಕ್ಕೂ ಹೆಚ್ಚಿದೆ. ಹೀಗಿದ್ದರೂ ಯಾವುದೇ ಪ್ರಾಣಿಗಳು ಮೃತಪಟ್ಟರೆ ಮೃಗಾಲಯದ ಕಡೆ ಸಂಶಯದಿಂದ ನೋಡಲಾಗುತ್ತದೆ. ಹಾಗಾಗಿ ಮೃಗಾಲಯದ ಪ್ರಾಣಿಗಳ ಆರೋಗ್ಯ ಸ್ಥಿತಿಗತಿ ಕುರಿತ `ಹೆಲ್ತ್ ಕಾರ್ಡ್’ ಸದ್ಯದಲ್ಲೇ ಬಿಡುಗಡೆಯಾಗಲಿದೆ.

ಮೃಗಾಲಯದಲ್ಲಿ ಕೆಲವು ಪ್ರಾಣಿಗಳಿಗೆ ವಯಸ್ಸಾಗಿದ್ದು, ಕೆಲವು ಪ್ರಾಣಿಗಳಿಗೆ ಅನಾರೋಗ್ಯ ಕಾಣಿಸಿಕೊಂಡಿದೆ. ಈ ಎಲ್ಲ ಪ್ರಾಣಿಗಳ ಮಾಹಿತಿಯನ್ನು ಸದ್ಯದಲ್ಲಿಯೇ ವೆಬ್‍ಸೈಟ್‍ನಲ್ಲಿ ಪ್ರಕಟಿಸುವ ಜತೆಗೆ ಮಾಧ್ಯಮಗಳ ಮೂಲಕ ಸಾರ್ವಜನಿಕರಿಗೆ ಮಾಹಿತಿ ನೀಡಲಾಗುವುದು ಎಂದು ಕಮಲಾ ಕರಿಕಾಳನ್ ತಿಳಿಸಿದರು.

ಮೃಗಾಲಯದಲ್ಲಿ ಪ್ರಾಣಿಗಳ ಸರಣಿ ಸಾವಿನ ಕುರಿತು ಸಾಕಷ್ಟು ಟೀಕೆ ಟಿಪ್ಪಣಿಗಳು ಕೇಳಿ ಬರುತ್ತಿದೆ. ಪ್ರಾಣಿಗಳು ಅನಾರೋಗ್ಯದಿಂದ  ಮರಣವನ್ನಪ್ಪುತ್ತಿದೆ. ಮೃಗಾಲಯದಲ್ಲಿ ಸಹಾಯಕ ನಿರ್ದೇಶಕರು ಸೇರಿ ಇಬ್ಬರು ಪಶು ವೈದ್ಯಾಧಿಕಾರಿಗಳು ಇದ್ದಾರೆ. ಅವರು ನಿತ್ಯ ಪ್ರಾಣಿಗಳ ತಪಾಸಣೆ ಮಾಡಿ ಪ್ರಾಣಿಗಳ ಆರೋಗ್ಯದ ಕುರಿತು ಮಾಹಿತಿ ನೀಡುತ್ತಿದ್ದಾರೆ. ವೈದ್ಯರ ವರದಿಯ ಆಧಾರದ ಮೇರೆಗೆ ಪ್ರಾಣಿಗಳ ಆರೋಗ್ಯ ಸುಧಾರಣೆಗೆ ಎಲ್ಲ ರೀತಿಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದರು.

ಪ್ರಾಣಿಗಳಿಗೆ ಸಾಂಕ್ರಾಮಿಕ ರೋಗ ತಗುಲದಂತೆ ಔಷಧ ಹಾಗೂ ಇಂಜೆಕ್ಷನ್‍ಗಳನ್ನು ನಿಯಮಿತವಾಗಿ ನೀಡಲಾಗುತ್ತಿದೆ. ನಮಗೆ ಒಂದು ಸಣ್ಣ ಪಕ್ಷಿಯಿಂದ ಹಿಡಿದು ಆನೆಯವರೆಗೂ ಎಲ್ಲ ಪ್ರಾಣಿಗಳು ಮುಖ್ಯ. ಎಲ್ಲ ಪ್ರಾಣಿಗಳ ಆರೋಗ್ಯ ಕಾಪಾಡಲು ಮೃಗಾಲಯ ಹೆಚ್ಚಿನ ಕಾಳಜಿ ವಹಿಸುತ್ತಿದೆ ಎಂದು ತಿಳಿಸಿದರು.

ಪ್ರಾಣಿಗಳಲ್ಲೂ ಹುಟ್ಟು-ಸಾವು ಸಹಜ ಪ್ರಕ್ರಿಯೆಯಾದರೂ ಮೃಗಾಲಯದಲ್ಲಿ ಪ್ರಾಣಿಗಳ ಸಾವಿನ ಕುರಿತು ಟೀಕೆ ಟಿಪ್ಪಣಿ ಕೇಳಿ ಬರುತ್ತಿದೆ. ಈ ಹಿನ್ನೆಲೆಯಲ್ಲಿ ಮೃಗಾಲಯ ಆಡಳಿತವು ಎಲ್ಲ ಪ್ರಾಣಿಗಳ ವಯಸ್ಸು ಹಾಗೂ ಆರೋಗ್ಯ ಸ್ಥಿತಿ ಕುರಿತ ಮಾಹಿತಿ ಪ್ರಕಟಿಸಲು ಮುಂದಾಗಿದೆ.

Leave a Reply

comments

Related Articles

error: