ಮೈಸೂರು

ರಂಗಭೂಮಿ ಪಠ್ಯದ ಒಂದು ಭಾಗವಾಗಬೇಕು: ರಾಮೇಶ್ವರಿ ವರ್ಮಾ ಅಭಿಮತ

ರಂಗಭೂಮಿ ಪಠ್ಯದ ಒಂದು ಭಾಗವಾಗಬೇಕು ಹಿರಿಯ ರಂಗಕರ್ಮಿ ರಾಮೇಶ್ವರಿ ವರ್ಮಾ ಅಭಿಪ್ರಾಯಪಟ್ಟರು.

ಬೆಂಗಳೂರಿನ ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ, ರಂಗಾಯಣ, ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ಜಾನಪದ ವಿಭಾಗದ ಸಂಯುಕ್ತಾಶ್ರಯದಲ್ಲಿ ಮೈಸೂರಿನ ಮಾನಸ ಗಂಗೋತ್ರಿಯ ಬಿಎಂಶ್ರೀ ಸಭಾಂಗಣದಲ್ಲಿ ಜಿಲ್ಲಾ ಮಟ್ಟದ ಕಾಲೇಜು ನಾಟಕ ಮತ್ತು ಜನಪದ ನೃತ್ಯ ಸ್ಪರ್ಧೆ-2016 ಕಾರ್ಯಕ್ರಮವನ್ನು ರಾಮೇಶ್ವರಿ ವರ್ಮಾ ಉದ್ಘಾಟಿಸಿದರು.

ಬಳಿಕ ಮಾತನಾಡಿದ ಅವರು ರಂಗಭೂಮಿಯು ಪಠ್ಯೇತರ ಚಟುವಟಿಕೆಯಾಗುವ ಬದಲು ಪ್ರಾಥಮಿಕ ಹಂತದಿಂದಲೇ ಪಠ್ಯದ ಒಂದು ಭಾಗವಾಗಬೇಕು ಎಂದು ಹೇಳಿದರು. ರಂಗಭೂಮಿಯನ್ನು ಬೆಳೆಸಬೇಕಾದರೆ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳ ಪಠ್ಯಗಳಲ್ಲಿ ನಾಟಕಗಳನ್ನು ಸೇರಿಸಬೇಕು. ಇದರಿಂದ ಮಕ್ಕಳು ಭವಿಷ್ಯದಲ್ಲಿ ಉತ್ತಮ ಕಲಾವಿದರಾಗಲು ಸಾಧ್ಯ. ಸಾಮಾನ್ಯ ವಿದ್ಯಾರ್ಥಿಗಳಿಗೆ ಹೋಲಿಸಿದರೆ ರಂಗಭೂಮಿ ಕ್ಷೇತ್ರದಲ್ಲಿ ತೊಡಗಿಸಿಕೊಂಡ ವಿದ್ಯಾರ್ಥಿಗಳು ಸಾಹಿತ್ಯಿಕ, ಪಠ್ಯ, ಸಾಮಾಜಿಕ, ಸಂಸ್ಕೃತಿ ಕ್ಷೇತ್ರದಲ್ಲಿ ಉತ್ತಮವಾದ ಜ್ಞಾನವನ್ನು ಹೊಂದಿರುತ್ತಾರೆ. ಅಲ್ಲದೇ ಆ ವಿದ್ಯಾರ್ಥಿಗಳಲ್ಲಿ ಲಿಂಗ ಸಂವೇದನೆ ಬೆಳೆಯುತ್ತದೆ. ಗಂಡು-ಹೆಣ್ಣು ಎಂಬ ಭೇದವಿಲ್ಲದೇ ಒಂದು ಕ್ಷೇತ್ರದಲ್ಲಿ ಕಲಾವಿದರಾಗಿ ಕಾಣಿಸಿಕೊಳ್ಳುವುದರಿಂದ ಉತ್ತಮ ಸ್ನೇಹ ಸಂಬಂಧ ಬೆಳೆಯುತ್ತದೆ ಎಂದು ತಿಳಿಸಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಉಪನಿರ್ದೇಶಕಿ ನಿರ್ಮಲ ಮಠಪತಿ ಮಾತನಾಡಿ,  ವಿದ್ಯಾರ್ಥಿಗಳಲ್ಲಿ ಜಾನಪದ, ರಂಗಭೂಮಿಯ ಬಗ್ಗೆ ಒಲವು ಮೂಡಿಸಲು ವಿವಿಧ ಕಾಲೇಜುಗಳಿಗೆ ಜಿಲ್ಲಾ ಮಟ್ಟದಲ್ಲಿ ನಾಟಕ ಸ್ಪರ್ಧೆ ಏರ್ಪಡಿಸಲಾಗಿದೆ. ಮುಂದಿನ ದಿನಗಳಲ್ಲಿ ಉತ್ಸವದ ರೀತಿಯಲ್ಲೇ ನಡೆಸುವ ಚಿಂತನೆ ಇದೆ ಎಂದರು.

ಕಾರ್ಯಕ್ರಮದಲ್ಲಿ  ಹಿರಿಯ ರಂಗಕರ್ಮಿ ರಾಮೇಶ‍್ವರಿ ವರ್ಮಾ ಅವರನ್ನು ರಂಗಾಯಣ ಮತ್ತು ಜಾನಪದ ವಿಭಾಗ ವತಿಯಿಂದ ಸನ್ಮಾನಿಸಲಾಯಿತು. ವೇದಿಕೆಯಲ್ಲಿ ಕುವೆಂಪು ಕನ್ನಡ ಅಧ‍್ಯಯನ ಸಂಸ್ಥೆಯ ನಿರ್ದೇಶಕಿ ಪ್ರೀತಿ ಶ್ರೀಮಂಧರಕುಮಾರ್, ಸ್ಪರ್ಧೆಯ ಸಂಯೋಜಕ ಡಾ. ಎಂ. ನಂಜಯ್ಯ ಹೊಂಗನೂರು, ನಾಟಕ ನಿರ್ದೇಶಕ ಗುರುರಾಜ ತಲಕಾಡು, ಅರಸೀಕೆರೆ ಯೋಗಾನಂದ ಮತ್ತಿತರರು ಉಪಸ್ಥಿತರಿದ್ದರು.

Leave a Reply

comments

Related Articles

error: