ಮೈಸೂರು

ಅಲ್ಜೈಮರ್ ಪೀಡಿತರ ಸಂಖ್ಯೆ 131 ಬಿಲಿಯನ್ ಗೆ ಏರಿಕೆಯಾಗುವ ಸಂಭವ: ಡಾ. ಮಾರ್ಟಿನ್ ಪ್ರಿನ್ಸ್ ಕಳವಳ

ಮೆದುಳಿನ ಕೋಶಗಳು ಮತ್ತು ನರ-ಸಂಬಂಧೀ ಆರೋಗ್ಯ ಸಮಸ್ಯೆಯಾದ ಅಲ್ಜೈಮರ್ ಪೀಡಿತರ ಸಂಖ್ಯೆ ಯುರೋಪ್ ಖಂಡದಲ್ಲಿ ಹೆಚ್ಚಾಗಿ ಕಂಡು ಬಂದಿದ್ದು, 2050ರ ವೇಳೆಗೆ ಇವರ ಸಂಖ್ಯೆ 131 ಬಿಲಿಯನ್ ಗಳಿಗೆ ಏರಿಕೆಯಾಗುವ ಸಂಭವವಿದೆ ಎಂದು ಲಂಡನ್ ನ ಕಿಂಗ್ಸ್ ಕಾಲೇಜಿನ ಪ್ರಾಧ್ಯಾಪಕ ಡಾ. ಮಾರ್ಟಿನ್ ಪ್ರಿನ್ಸ್ ಅವರು ಕಳವಳ ವ್ಯಕ್ತಪಡಿಸಿದರು.

ಮೈಸೂರಿನ ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆ ಆವರಣದಲ್ಲಿ ನಡೆದ “ಅಲ್ಜೈಮರ್ ಆ್ಯಂಡ್ ರಿಲೇಟೆಡ್ ಡಿಸಾರ್ಡರ್ ಸೊಸೈಟಿ ಆಫ್ ಇಂಡಿಯಾ” ವತಿಯಿಂದ ನಡೆದ 20ನೇ ವಾರ್ಷಿಕ ರಾಷ್ಟ್ರೀಯ ಸಮ್ಮೇಳನವನ್ನು ಡಾ. ಮಾರ್ಟಿನ್ ಪ್ರಿನ್ಸ್ ಅವರು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಈಗಾಗಲೇ ಶೇ.46.8ರಷ್ಟು ಮಂದಿ ಅಲ್ಜೈಮರ್ ಸಮಸ್ಯೆಯಿಂದ ಬಳಲುತ್ತಿದ್ದಾರೆ. ನಾವು ನಮ್ಮ ಆಹಾರ ಪದ್ಧತಿ, ಜೀವನಶೈಲಿಯನ್ನು ಬದಲಾಯಿಸಿಕೊಳ್ಳಬೇಕು. ಇಲ್ಲದಿದ್ದಲ್ಲಿ ಅಪಾಯ ಕಟ್ಟಿಟ್ಟ ಬುತ್ತಿ ಎಂದರು. ಆಹಾರ ಪದ್ಧತಿ, ವ್ಯಾಯಾಮಗಳನ್ನು ಸರಿಯಾದ ಪ್ರಮಾಣದಲ್ಲಿ ಅಳವಡಿಸಿಕೊಳ್ಳದಿದ್ದಲ್ಲಿ ಮುಂದೆ ಯುವಕರಲ್ಲಿಯೂ ಈ ಸಮಸ್ಯೆ ಹೆಚ್ಚಾಗಿ ಕಾಡಬಹುದು. ಈ ಕುರಿತು ಸಮಗ್ರ ಅಧ್ಯಯನ ನಡೆಸಿ ಹೆಚ್ಚು ತಿಳಿದುಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.

ನವದೆಹಲಿಯ ಅಲ್ಜೈಮರ್ಸ್ ಆ್ಯಂಡ್ ರಿಲೇಟೆಡ್ ಡಿಸಾರ್ಡರ್ ಸೊಸೈಟಿ ಆಫ್ ಇಂಡಿಯಾದ ಮುಖ್ಯಸ್ಥೆ ಮೀರಾ ಪಟ್ಟಾಭಿರಾಮನ್ ಮಾತನಾಡಿ, ಅಲ್ಜೈಮರ್ ಅಥವಾ ಮರೆಗುಳಿತನ ಸಮಸ್ಯೆ ಇತ್ತೀಚೆಗೆ ವಯಸ್ಸಾದವರಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕಂಡು ಬರುತ್ತಿದ್ದು, ಅದಕ್ಕೆ ಸರಿಯಾದ ಪರಿಹಾರೋಪಾಯಗಳನ್ನು ತಜ್ಞರಿಂದ ಪಡೆದು ಪರಿಹರಿಸಿಕೊಳ್ಳಬೇಕು ಎಂದು ತಿಳಿಸಿದರು.

ಮೈಸೂರಿನಲ್ಲಿ ಕಾರ್ಯಕ್ರಮ ಆಯೋಜಿಸಿರುವುದು ಸಂತಸ ತಂದಿದೆ. ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆ ಎಲ್ಲ ಸಂಸ್ಥೆಗಳಿಗೂ ವೇದಿಕೆ ಕಲ್ಪಿಸಿದೆ. ಭಾರತದಲ್ಲಿ ಶೇ.40ರಷ್ಟು ಜನ ಅಲ್ಜೈಮರ್ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಕೇರಳದಲ್ಲಿ ಈ ಸಮಸ್ಯೆಗೆ ಪರಿಹಾರ ಕಂಡುಕೊಂಡಿದ್ದಾರೆ. ಕೇರಳ ರಾಜ್ಯದವರು ಉತ್ತಮ ಸೌಲಭ್ಯವನ್ನು ಕಂಡುಕೊಂಡಿದ್ದು ಅದನ್ನು ಪ್ರತಿ ರಾಜ್ಯ, ಜಿಲ್ಲೆಗಳಲ್ಲಿಯೂ ಅಳವಡಿಸಿಕೊಳ್ಳಬೇಕು ಎಂದರು. ಈ ರಾಷ್ಟ್ರೀಯ ಸಮ್ಮೇಳನವು ಮುಂದಿನ ದಿನಗಳಿಗೆ ಪೂರಕವಾಗಲಿದೆ. ಇದರಲ್ಲಿ ಡಾ. ಜಾಕೋಬ್ ರಾಯ್ ಅವರಂತಹ ತಜ್ಞರು ಪಾಲ್ಗೊಂಡಿದ್ದಾರೆ. ಅವರಿಂದ ಸಲಹೆ ಪಡೆದು ಈ ಕಾರ್ಯಕ್ರಮದ ಸದುಪಯೋಗ ಮಾಡಿಕೊಳ್ಳಿ ಎಂದು ಕಿವಿಮಾತು ಹೇಳಿದರು.

ಆಯಿಷ್ ನಿರ್ದೇಶಕಿ ಡಾ. ಎಸ್.ಆರ್. ಸಾವಿತ್ರಿ ಅವರು ಮಾತನಾಡಿ, ನಮ್ಮ ಮನೆಯಲ್ಲಿಯೂ ನನ್ನ ತಾಯಿ ಅಲ್ಜೈಮರ್ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಪೋಷಕರ ತ್ಯಾಗದಿಂದ ನಾವಿಂದು ಈ ಮಟ್ಟಕ್ಕೆ ತಲುಪಿದ್ದೇವೆ. ಅವರಿಗಾಗಿ ನಾವು ತ್ಯಾಗ ಮನೋಭಾವವನ್ನು ಬೆಳೆಸಿಕೊಳ್ಳಬೇಕು ಎಂದರು. ಅಂತಹವರನ್ನು ಕಾಳಜಿಪೂರ್ವಕವಾಗಿ ನೋಡಿಕೊಳ್ಳುವವರ ಸಂಖ್ಯೆ ಹೆಚ್ಚಬೇಕು. ಕೂಡು ಕುಟುಂಬದಲ್ಲಿ ಇಂತಹ ಸಮಸ್ಯೆಗಳು ಉದ್ಭವಿಸುವುದಿಲ್ಲ. ಆದರೆ ವಿಭಕ್ತ ಕುಟುಂಬಗಳಲ್ಲಿ ಈ ಸಮಸ್ಯೆ ಹೆಚ್ಚು ಕಾಡಲಿದೆ. ಅಲ್ಲಿ ನೋಡಿಕೊಳ್ಳಲು ಕಷ್ಟವಾಗಲಿದೆ ಎಂದರು. ಇತ್ತೀಚೆಗೆ ಮೂಡಿಬಂದ ಗೋಧಿ ಬಣ್ಣ ಸಾಧಾರಣ ಮೈಕಟ್ಟು ಚಿತ್ರ ಸಂಪೂರ್ಣವಾಗಿ ಮರೆಗುಳಿತನದಿಂದ ಏನೆಲ್ಲಾ ಆಗಲಿದೆ ಎನ್ನುವುದನ್ನು ತೆರೆದಿಟ್ಟಿದೆ. ಅದರಿಂದಲೂ ನಾವು ಪಾಠ ಕಲಿಯಬಹುದು. ಮರೆಗುಳಿತನಕ್ಕೆ ಹೆಚ್ಚಿನ ಕಾಳಜಿ ಅಗತ್ಯವಾಗಿದ್ದು, ಮುಂದಿನ ಪೀಳಿಗೆಗೂ ಇದರಿಂದ ಸಹಾಯವಾಗಲಿದೆ ಎಂದು ತಿಳಿಸಿದರು.

ಡಾ. ಮಾರ್ಟಿನ್ ಪ್ರಿನ್ಸ್ ಅವರಿಗೆ ಮೈಸೂರು ಪೇಟ ತೊಡಿಸಿ, ಶಾಲು ಹೊದಿಸಿ ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಮೈಸೂರು ಮೆಡಿಕಲ್ ಕಾಲೇಜಿನ ನಿರ್ದೇಶಕ ಡಾ.ಬಿ.ಕೃಷ್ಣಮೂರ್ತಿ, ಅಲ್ಜೈಮರ್ ಡೀಸಿಸ್ ಇಂಟರ್ ನ್ಯಾಶನಲ್ ನ ಉಪಾಧ್ಯಕ್ಷ ಡಾ.ಜಾಕೋಬ್ ರಾಯ್ ಮತ್ತಿತರರು ಉಪಸ್ಥಿತರಿದ್ದರು.

Leave a Reply

comments

Related Articles

error: