ಮೈಸೂರು

ಮಾನವ ಹಕ್ಕುಗಳು ಉಲ್ಲಂಘನೆಯಾಗದಂತೆ ಸಂರಕ್ಷಿಸಬೇಕು: ಪಿ.ಜಿ.ಎಂ. ಪಾಟೀಲ್ ಅಭಿಮತ

ಮಾನವ ಹಕ್ಕುಗಳು ಜನ್ಮತಃ ದೈವದತ್ತವಾಗಿ ಬಂದಿದ್ದು ಅವುಗಳ ಉಲ್ಲಂಘನೆಯಾಗದಂತೆ ಸಂರಕ್ಷಿಸುವ ಜಬಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಮತ್ತು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ಪಿ.ಜಿ.ಎಂ. ಪಾಟೀಲ್ ಅಭಿಪ್ರಾಯಪಟ್ಟರು.

ಮೈಸೂರು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ವಕೀಲರ ಸಂಘ ಮತ್ತು ಮಾನವ ಹಕ್ಕುಗಳ ಹೋರಾಟಗಾರರ ಸಂಘದ ಸಂಯುಕ್ತಾಶ್ರಯದಲ್ಲಿ ಶನಿವಾರ ಮೈಸೂರು ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಆಯೋಜಿಸಿದ್ದ ಮಾನವ ಹಕ್ಕುಗಳ ದಿನಾಚರಣೆಯನ್ನು ಪಿ.ಜಿ.ಎಂ. ಪಾಟೀಲ್ ಉದ್ಘಾಟಿಸಿದರು.

ಬಳಿಕ ಮಾತನಾಡಿದ ಅವರು, 2ನೇ ಮಹಾಯುದ್ಧದ ಸಂದರ್ಭದಲ್ಲಿ ಮಾನವರನ್ನು ಅಮಾನುಷವಾಗಿ ಕೊಲೆಗೈಯಲಾಗುತ್ತಿತ್ತು. ಇಂತಹ ಭೀಕರ ದೃಶ್ಯಗಳನ್ನು ಕಂಡ ವಿಶ್ವಸಂಸ್ಥೆ ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತಿದೆ ಎಂಬುದನ್ನು ಮನಗಂಡು 1948ರ ಡಿ.10ರಂದು ಭಾರತವೂ ಸೇರಿದಂತೆ ತನ್ನ ಎಲ್ಲ ಸದಸ್ಯ ರಾಷ್ಟ್ರಗಳೊಂದಿಗೆ ಮಾನವ ಹಕ್ಕುಗಳ ಒಡಂಬಡಿಕೆ ಮಾಡಿಕೊಂಡು ಅವುಗಳ ರಕ್ಷಣೆ ಮಾಡುತ್ತಿದೆ ಎಂದು ಹೇಳಿದರು.

ಮಾನವ ಹಕ್ಕುಗಳಲ್ಲಿ ಪ್ರಮುಖವಾದುದು ಸಮಾಜದಲ್ಲಿ ಗೌರವಯುತವಾಗಿ ಬಾಳುವ ಹಕ್ಕು. ಪ್ರತಿಯೊಬ್ಬರಿಗೂ ಜೀವಿಸುವ ಹಕ್ಕಿರುವಂತೆ ಗೌರವಯುತವಾಗಿ ಬಾಳುವ ಹಕ್ಕೂ ಸಹ ಇದೆ. ಶುದ್ಧವಾದ ಗಾಳಿ, ನೀರು, ಆಹಾರ, ಪರಿಸರ, ಇರಲು ಮನೆ, ದುಡಿಯಲು ಉದ್ಯೋಗ ಎಲ್ಲವೂ ಇದ್ದರೆ ಮಾತ್ರ ಗೌರವಯುತವಾಗಿ ಬಾಳಲು ಸಾಧ್ಯ. ಆದರೆ, ಇತ್ತೀಚೆಗೆ ಮಾನವ ತನ್ನ ಮೂಲಭೂತ ಹಕ್ಕುಗಳಿಂದಲೇ ವಂಚಿತನಾಗುತ್ತಿದ್ದಾನೆ. ಹಕ್ಕುಗಳ ಉಲ್ಲಂಘನೆ ಎಲ್ಲೆ ಮೀರಿ ನಡೆಯುತ್ತಿದೆ. ಸರ್ಕಾರ ಹಕ್ಕುಗಳ ಸಂರಕ್ಷಣೆಗೆ ಸಾಕಷ್ಟು ಕ್ರಮಗಳನ್ನು ಕೈಗೊಂಡ್ಡಿದ್ದರೂ ಉಲ್ಲಂಘನೆ ಪ್ರಕರಣಗಳು ಜರುಗುತ್ತಲಿವೆ. ಇವೆಲ್ಲವನ್ನೂ ನಿವಾರಿಸುವ ಸಲುವಾಗಿ 1993ರಲ್ಲಿ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗವನ್ನು ರಚಿಸಿದ್ದು, ಉಲ್ಲಂಘನೆಯಾಗಿರುವುದು ಕಂಡುಬಂದಲ್ಲಿ ಸ್ವಯಂಪ್ರೇರಿತವಾಗಿ ದೂರು ದಾಖಲಿಸಿಕೊಂಡು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಹೇಳಿದರು.

ಹಕ್ಕುಗಳ ಅರಿವೇ ಇರುವುದಿಲ್ಲ: ಶೋಷಿತರಿಗೆ, ಅಶಿಕ್ಷಿತರಿಗೆ, ದುರ್ಬಲರಿಗೆ, ಹಿಂದುಳಿದವರಿಗೆ ತಮ್ಮ ಹಕ್ಕುಗಳಿರಲಿ ಇಂತಹ ಮಾನವ ಸಂಬಂಧಿತ ಹಕ್ಕುಗಳಿವೆ ಎಂಬ ಬಗ್ಗೆಯೇ ಅರಿವಿರುವುದಿಲ್ಲ. ಅವರ ಮುಗ್ಧತೆಯನ್ನು ಬಳಸಿಕೊಳ್ಳುವ ಕೆಲವರು ಮಾನವನ ಮೂಲಭೂತ ಹಕ್ಕುಗಳನ್ನು ಉಲ್ಲಂಘಿಸಿ ಶೋಷಿಸುತ್ತಾರೆ. ಸರ್ಕಾರ, ಜಿಲ್ಲಾಡಳಿತ, ಸಂಘ ಸಂಸ್ಥೆಗಳು ಆಗಿಂದ್ದಾಗೆ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಹಕ್ಕುಗಳ ಬಗೆಗೆ ಅರಿವು ಮೂಡಿಸುತ್ತಿದ್ದು ಇಂತಹ ಕಾರ್ಯಕ್ರಮಗಳು ಹೆಚ್ಚೆಚ್ಚು ನಡೆಯಬೇಕು. ಜೀತಪದ್ಧತಿ, ಮಹಿಳಾ ದೌರ್ಜನ್ಯ, ಮಕ್ಕಳ ಸಾಗಾಣಿಕೆಯೂ ಸಹ ಮಾನವ ಹಕ್ಕುಗಳ ಉಲ್ಲಂಘನೆಯಾಗಿದ್ದು, ಸರ್ಕಾರ ಇಂತಹ ಅನಿಷ್ಟ ಪದ್ಧತಿಗಳನ್ನು ನಿರ್ಮೂಲನೆ ಮಾಡಲು ಶ್ರಮವಹಿಸಬೇಕು ಎಂದು ಹೇಳಿದರು.

ಕಾರ್ಯಕ್ರಮವನ್ನು “ಬೇರೆಯವರ ಹಕ್ಕುಗಳ ರಕ್ಷಣೆಗೆ ಎದ್ದು ನಿಲ್ಲಬೇಕಾಗಿದೆ” ಎಂಬ ಘೋಷಣೆಯೊಂದಿಗೆ ಆಚರಿಸಲಾಯಿತು. ಈ ಸಂದರ್ಭ ಮಾನವ ಹಕ್ಕುಗಳ ಸಂಕ್ಷರಣೆ ಪ್ರತಿಜ್ಞಾವಿಧಿ ಸ್ವೀಕರಿಸಲಾಯಿತು.

ಕಾರ್ಯಕ್ರಮದಲ್ಲಿ ಉಪವಿಭಾಗಾಧಿಕಾರಿ ಸಿ.ಆನಂದ್, ವಕೀಲರ ಸಂಘದ ಅಧ್ಯಕ್ಷ ಜಿ.ವಿ. ರಾಮಮೂರ್ತಿ, ಕಾರ್ಯದರ್ಶಿ, ಕೆ.ಬಿ. ಸುರೇಶ್, ಹಿರಿಯ ವಕೀಲ ಎನ್. ಸುಂದರ್‍ರಾಜ್, ಅಪರಾಧ ವಿಭಾಗದ ಡಿ.ಸಿ.ಪಿ. ರುದ್ರಮುನಿ, ಮಹಮ್ಮದ್ ಮದರಿಲ್ಲಾ ಮತ್ತಿತರರು ಉಪಸ್ಥಿತರಿದ್ದರು.

Leave a Reply

comments

Related Articles

error: