ಮೈಸೂರು

ಜೂ.17: ಪ್ರಖ್ಯಾತ ಹಿರಿಯ ಕಲಾವಿದರಿಂದ ಅಭಿನಯಪೂರಕ ನೃತ್ಯ ಪ್ರದರ್ಶನ

ಮೈಸೂರು, ಜೂ.12:-ಮೈಸೂರು ಬಿ.ನಾಗರಾಜ್‍ರವರಿಂದ ಸಂಯೋಜನೆಗೊಂಡಿರುವ ಆರ್ಟಿಕ್ಯುಲೇಟ್ ಫೆಸ್ಟಿವಲ್ (ನೃತ್ಯೋತ್ಸವ) ನಗರದ ಆದಿಚುಂಚನಗಿರಿ ರಸ್ತೆಯಲ್ಲಿರುವ ರಮಾಭಾಯಿ ಗೋವಿಂದರಾವ್ ಭವನ, ವೀಣೆ ಶೇಷಣ್ಣ ಭವನದ ಪಕ್ಕ, ಗಾನಭಾರತಿ ಆವರಣದಲ್ಲಿ ಆಯೋಜನೆಗೊಳ್ಳುತ್ತಿದೆ.

ಈ ಉತ್ಸವದಲ್ಲಿ ಮೂರು ಮಂದಿ ರಾಷ್ಟ್ರೀಯ ಹಾಗೂ ಅಂತರ ರಾಷ್ಟ್ರೀಯ ಮಟ್ಟದಲ್ಲಿ ಪ್ರಖ್ಯಾತರಾಗಿರುವ ಹಿರಿಯ ಶಾಸ್ತ್ರೀಯ ನೃತ್ಯ ಕಲಾಕಾರರು ಕಾರ್ಯಕ್ರಮದಲ್ಲಿ ಭಾಗವಹಿಸಿ ವಿಶೇಷ ಮೆರುಗನ್ನು ನೀಡಲಿದ್ದಾರೆ.ಈ ನೃತ್ಯ ಸರಣಿಯ 25ನೆಯ ನೃತ್ಯೋತ್ಸವವು ಜೂ.17( ಭಾನುವಾರದಂದು) ಸಂಜೆ 6 ಗಂಟೆಗೆ ಪ್ರಾರಂಭವಾಗಲಿದೆ.

ಆರ್ಟಿಕ್ಯುಲೇಟ್ ನೃತ್ಯೋತ್ಸವದಲ್ಲಿ ಕಳೆದೆರಡು ವರ್ಷಗಳಿಂದ ನಿರಂತರವಾಗಿ ಸುಮಾರು 350ಕ್ಕೂ ಅಧಿಕ ಪ್ರತಿಭಾವಂತ ಬಾಲ, ಯುವ, ಹಿರಿಯ ನೃತ್ಯಕಲಾವಿದರು ಬೃಹತ್ ವೇದಿಕೆಗಳಲ್ಲಿ ಭಾಗವಹಿಸಿ ಅತ್ಯಂತ ಯಶಸ್ವಿಗೊಳಿಸಿದ್ದಾರೆ. ಭರತನಾಟ್ಯ, ಕಥಕ್, ಒಡಿಸ್ಸಿ, ಕುಚುಪುಡಿ, ಮೋಹಿನಿಆಟ್ಟಂ, ಸತ್ತಾರಿಯಾ, ಮಣಿಪುರಿ ಹಾಗೂ ಜಾನಪದ ಸೊಗಡಿನ ನೃತ್ಯಗಳನ್ನು ಪ್ರದರ್ಶಿಸಿದ್ದಾರೆ. ಭಾರತೀಯ ಶಾಸ್ತ್ರೀಯ ನೃತ್ಯದ ಪದ್ಮಶ್ರೀ ಪುರಸ್ಕೃತ ದೆಹಲಿಯ ಪ್ರಖ್ಯಾತ ಗುರು ರಂಜನಗೌಹಾರ್ ಅವರು ಒಡಿಸ್ಸಿ ನೃತ್ಯವನ್ನು ಪ್ರದರ್ಶಿಸಲಿದ್ದಾರೆ. ಪುಣೆಯಪ್ರಖ್ಯಾತ ಗುರು ಶಮಾ ಭಾಟೆಕಥಕ್ ನೃತ್ಯವನ್ನು ಪ್ರಸ್ತುತಪಡಿಸಲಿದ್ದಾರೆ. ಮುಂಬೈನ ಪ್ರಖ್ಯಾತ ಗುರು ವಿದ್ವಾನ್‍ದೀಪಕ್‍ಮಜಂದಾರ್ (ಪ್ರಖ್ಯಾತಹಿಂದಿ ಚಲನಚಿತ್ರ ನಟಿ ಹಾಗೂ ಭರತನಾಟ್ಯಕಲಾವಿದೆಯಾದ ಹೇಮಮಾಲಿನಿಯವರ ನೃತ್ಯ ಸಂಯೋಜಕರು)ರವರು ಭರತನಾಟ್ಯವನ್ನು ಪ್ರಸ್ತುತ ಪಡಿಸಲಿದ್ದಾರೆ. ಈ ಮೂವರು ಕಲಾವಿದರು ಸಾತ್ವಿಕಾಭಿನಯದಿಂದ ಪ್ರೇಕ್ಷಕರ ಮನಸೂರೆಗೊಳ್ಳಲಿದ್ದಾರೆ. ಕಾರ್ಯಕ್ರಮಕ್ಕೆ ಉಚಿತ ಪ್ರವೇಶವಿರುತ್ತದೆ ಎಂದು ಮೈಸೂರು ಬಿ.ನಾಗರಾಜ್‍ ತಿಳಿಸಿದ್ದಾರೆ. (ಜಿ.ಕೆ,ಎಸ್.ಎಚ್)

Leave a Reply

comments

Related Articles

error: