
ಮೈಸೂರು
ಬೌದ್ಧಗುರು ದಲೈಲಾಮಾ ಡಾಕ್ಟರೇಟ್ ತಿರಸ್ಕರಿಸಲಿ: ಸಿ.ಟಿ. ಆಚಾರ್ಯ ಒತ್ತಾಯ
ಮೈಸೂರು ವಿಶ್ವವಿದ್ಯಾನಿಲಯದ ಘಟಿಕೋತ್ಸವ ಡಿಸೆಂಬರ್ 13ರಂದು ನಡೆಯಲಿದ್ದು, ಘಟಿಕೋತ್ಸವದಲ್ಲಿ ನೀಡಲಾಗುವ ಗೌರವ ಡಾಕ್ಟರೇಟ್ ನ್ನು ಬೌದ್ಧ ಗುರು ದಲೈಲಾಮಾ ಮತ್ತು ಪ್ರಮೋದಾದೇವಿ ಒಡೆಯರ್ ತಿರಸ್ಕರಿಸಬೇಕು ಮತ್ತು ಮೈಸೂರು ವಿವಿಯ ಸಿಂಡಿಕೇಟ್ ಸದಸ್ಯರ ಸದಸ್ಯತ್ವವನ್ನು ಕರ್ನಾಟಕ ರಾಜ್ಯ ವಿವಿ ಕಾಯ್ದೆ 2000, ಸೆಕ್ಷನ್ -39 ಪ್ರಕಾರ ರದ್ದುಗೊಳಿಸಲು ರಾಜ್ಯಪಾಲರಿಗೆ ಒತ್ತಾಯಿಸಲಾಗುವುದು ಎಂದು ಸಮಾಜವಾದಿ ಪಾರ್ಟಿಯ ಜಿಲ್ಲಾಧ್ಯಕ್ಷ ಸಿ.ಟಿ.ಆಚಾರ್ಯ ತಿಳಿಸಿದರು.
ಮೈಸೂರಿನ ಪತ್ರಕರ್ತರ ಭವನದಲ್ಲಿ ಶನಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇದೇ ಮೊದಲ ಬಾರಿಗೆ ಒಂದು ವರ್ಷದಲ್ಲಿ 2ನೇ ಬಾರಿ ಘಟಿಕೋತ್ಸವ ನಡೆಯುತ್ತಿರುವುದು ನ್ಯಾಯ ಸಮ್ಮತವಲ್ಲ. ಭ್ರಷ್ಟಾಚಾರದ ಆರೋಪ ಹೊತ್ತಿರುವ ಮೈಸೂರು ವಿವಿ ಕುಲಪತಿ ಪ್ರೊ. ಕೆ.ಎಸ್. ರಂಗಪ್ಪ ಅವರೊಂದಿಗೆ ದಲೈಲಾಮ ಮತ್ತು ಪ್ರಮೋದಾದೇವಿ ಒಡೆಯರ್ ಅವರು ವೇದಿಕೆ ಹಂಚಿಕೊಳ್ಳಬಾರದು. ಆದಾಗ್ಯೂ ಈ ಘಟಿಕೋತ್ಸವ ನಡೆದರೆ ಎಲ್ಲ ಸಂಘಟನೆಗಳು ಮತ್ತು ವಿದ್ಯಾರ್ಥಿಗಳು ಸೇರಿ ಕಪ್ಪುಬಟ್ಟೆ ಧರಿಸಿ ಪ್ರತಿಭಟನೆ ನಡೆಸಲಾಗುವುದು ಎಂದು ತಿಳಿಸಿದರು.
ಸಿಂಡಿಕೇಟ್ ಸದಸ್ಯರಾದ ಲಯನ್ ಹೆಚ್. ರಮೇಶ್, ನಾರಾಯಣ ಪ್ರಸಾದ್, ಪ್ರೊ. ನಂಜುಂಡಯ್ಯ, ಪ್ರೊ. ಕುಮಾರ್, ಅಬ್ದುಲ್ ಸಲೀಂ – ಇವರು ರಂಗಪ್ಪನವರ ನೇತೃತ್ವದ ಭ್ರಷ್ಟಾಚಾರ ಮಂಡಳಿಗೆ ಬೆಂಬಲಿಸಿದ್ದಾರೆ. ಎಂ.ಎಸ್.ಎಸ್. ಕುಮಾರ್ ವಿರುದ್ಧ ದೂರು ಸಲ್ಲಿಸಿರುವ ಈ ಸಿಂಡಿಕೇಟ್ ಸದಸ್ಯರ ಸದಸ್ಯತ್ವವನ್ನು ಮತ್ತು ಸಾಮಾಜಿಕ ನ್ಯಾಯದಡಿಯಲ್ಲಿ ನಾಮಕರಣಗೊಂಡಿರುವ ಸಿಂಡಿಕೇಟ್ ಸದಸ್ಯತ್ವವನ್ನು ಅನರ್ಹಗೊಳಿಸಲು ಅರ್ಹರಾಗಿರುತ್ತಾರೆ ಎಂದು ಹೇಳಿದರು.
ಈ ಹಿನ್ನೆಲೆಯಲ್ಲಿ ಉನ್ನತ ಮಟ್ಟದ ತನಿಖೆಗೆ ಒಳಪಡಿಸಿ ಈ ಸಿಂಡಿಕೇಟ್ ಸದಸ್ಯರ ಸದಸ್ಯತ್ವವನ್ನು ರದ್ದುಗೊಳಿಸಬೇಕು ಮತ್ತು ಇವರ ವಿರುದ್ದ ಕಾನೂನು ಕ್ರಮ ಜರುಗಿಸಬೇಕೆಂದು ಆಗ್ರಹಿಸಿದರು.
ಪತ್ರಿಕಾಗೋಷ್ಠಿಯಲ್ಲಿ ದಲಿತ ವಿದ್ಯಾರ್ಥಿ ಒಕ್ಕೂಟದ ಅಧ್ಯಕ್ಷ ಮಹೇಶ್ ಸೋಸಲೆ, ಕರ್ನಾಟಕ ರಾಜ್ಯ ನಾಯಕ ರಾಜ್ಯಾಧ್ಯಕ್ಷ ದ್ಯಾವಪ್ಪ ನಾಯಕ, ಪ್ರಗತಿಪರ ಚಿಂತಕ ಜಾಕೀರ್ ಹುಸೇನ್, ಚಂದ್ರಮೌಳಿ ಹಾಜರಿದ್ದರು.