ಕರ್ನಾಟಕ

ಅಭಿವೃದ್ದಿ ಕಾರ್ಯಗಳಿಗೆ ಮರುಚಾಲನೆ: ಸಚಿವ ಎಚ್.ಡಿ.ರೇವಣ್ಣರಿಂದ ಸ್ಥಳಪರಿಶೀಲನೆ

ಹಾಸನ (ಜೂನ್ 13): ಲೋಕೋಪಯೋಗಿ ಇಲಾಖೆ ಸಚಿವರಾದ ಹೆಚ್.ಡಿ ರೇವಣ್ಣ ಅವರು ಜಿಲ್ಲೆಯ ಅಭಿವೃದ್ದಿ ಕಾಮಗಾರಿಗಳಿಗೆ ಚುರುಕು ನೀಡುವ ಸೂಚನೆ ನೀಡಿದ್ದಾರೆ. ದಶಕಗಳಿಂದ ನೆನೆಗುದಿಗೆ ಬಿದ್ದಿರುವ ಕಾಮಗಾರಿಗಳಿಗೆ ಚಾಲನೆ ನೀಡಲು ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.

ಮಂಗಳವಾರ ಬೆಳಿಗ್ಗೆಯಿಂದಲೇ ಜಿಲ್ಲೆಯ ಹೊಳೆನರಸೀಪುರ ಹಾಗೂ ಹಾಸನ ತಾಲೂಕುಗಳ ವಿವಿಧ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲಿಸಿದ ಸಚಿವರು ಹಲವು ಅಭಿವೃದ್ದಿ ಕಾರ್ಯಗಳನ್ನು ಕೂಡಲೆ ಪ್ರಾರಂಭಿಸಲು ಸೂಚಿಸಿದರು.

ಹಾಸನ ನಗರದ ಹೊಸ ಬಸ್ ನಿಲ್ದಾಣದ ಬಳಿ ಸ್ಥಗಿತಗೊಂಡಿರುವ ಪ್ರವಾಸಿ ಹೋಟೆಲ್ ಮತ್ತು ಮನರಂಜನ ಕೇಂದ್ರದ ಭೇಟಿ ನೀಡಿದ ಸಚಿವರು ಇನ್ನಷ್ಟು ವಿನೂತನತೆ ಸೇರ್ಪಡೆಗೊಳಿಸಿ ಕಾಮಗಾರಿ ಮುಕ್ತಾಯಗೊಳಿಸಲು ತಾವು ಚಿಂತಿಸಿದ್ದು ಇದಕ್ಕಾಗಿ ಲೋಕೋಪಯೋಗಿ, ಅರಣ್ಯ ಹಾಗೂ ತೋಟಗಾರಿಕೆ ಇಲಾಖೆ ಅಧಿಕಾರಿಗಳು ಜಂಟಿಯಾಗಿ ಕಾರ್ಯನಿರ್ವಹಿಸಬೇಕು ಎಂದು ಸೂಚನೆ ನೀಡಿದರು.

ಪ್ರವಾಸಿ ಹೋಟೆಲ್ ಕಾಮಗಾರಿ ಮುಕ್ತಾಯಗೊಳಿಸುವ ಜವಾಬ್ದಾರಿಯನ್ನು ಕರ್ನಾಟಕ ರಾಜ್ಯ ರಸ್ತೆ ಅಭಿವೃದ್ಧಿ ನಿಗಮಕ್ಕೆ ವಹಿಸಿದ್ದು ಅರಣ್ಯ ಇಲಾಖೆ ಹಾಗೂ ತೋಟಗಾರಿಕೆ ಇಲಾಖೆಯೊಂದಿಗೆ ಸಮನ್ವಯತೆಯಿಂದ ಕೆಲಸ ಮಾಡಲು ತಿಳಿಸಿದರು.

ಹಾಲಿ ನಿರ್ಮಾಣಗೊಂಡಿರುವ ಕಟ್ಟಡದ ಸುತ್ತ ಇರುವ ಸರೋವರವನ್ನು ಅಭಿವೃದ್ದಿಪಡಿಸಿ ಬೋಟಿಂಗ್ ಹಾಗೂ ಇತರ ಜಲಸಾಹಸ ಕ್ರೀಡೆ ಚಟುವಟಿಕೆಗಳ ಅಗತ್ಯ ವ್ಯವಸ್ಥೆ ಮಾಡಬೇಕು ಕಟ್ಟಡದ ಎರಡು ಬದಿಗಳಲ್ಲಿ ಅತ್ಯಾಧುನಿಕ ಸೇತುವೆ ನಿರ್ಮಾಣ, ವರ್ಷವಿಡಿ ಹೂ ಬಿಡುವ ಪುಷ್ಪೋಧ್ಯಾನ ಹಾಗೂ ಅರಣ್ಯೀಕರಣ ಮಾಡುವಂತೆ ಹಾಗೂ ಅದಕ್ಕೆ ಅಗತ್ಯವಿರುವ ಸಮಗ್ರ ಅಂದಾಜು ಪಟ್ಟಿಯನ್ನು ಒಂದೆರಡು ದಿನಗಳೊಳಗೆ ಸಿದ್ದಪಡಿಸಿ ಸಲ್ಲಿಸುವಂತೆ ಸಚಿವರು ಅಧಿಕಾರಿಗಳಿಗೆ ಸೂಚಿಸಿದರು.

ಪ್ರವಾಸಿ ಹೋಟೆಲ್ ಅಭಿವೃದ್ದಿಗೆ ಸಂಬಂದಿಸಿದಂತೆ ಬೆಂಗಳೂರಿನಲ್ಲಿ ಇನ್ನೊಂದು ಹಂತದ ಸಭೆ ನೆಡೆಸಲಾಗುವುದು. ಇದರ ಸುತ್ತ ಮನರಂಜನಾ ರೈಲು ಸಂಚಾರ ವ್ಯವಸ್ಥೆ ಜವಾಬ್ದಾರಿಯನ್ನು ಮೆಟ್ರೋ ಸಂಸ್ಥೆಗೆ ವಹಿಸಲು ಚಿಂತಿಸಲಾಗಿದೆ ಎಂದು ಸಚಿವರು ಹೇಳಿದರು.

ಇದೇವೇಳೆ ಸಚಿವ ರೇವಣ್ಣ ಅವರು ಬಸ್ ನಿಲ್ದಾಣದಿಂದ ಸರ್ಕಾರಿ ಆಸ್ಪತ್ರೆವರೆಗೆ ಸಾರ್ವಜನಿಕರಿಗೆ ಅನುಕೂಲವಾಗುವಂತೆ ರಸ್ತೆ ನಿರ್ಮಾಣ ಕುರಿತಂತೆ ಸ್ಥಳ ಪರಿಶೀಲಿಸಿ ಅಧಿಕಾರಿಗಳಿಗೆ ಅಗತ್ಯ ಕ್ರಮ ವಹಿಸಲು ನಿರ್ದೇಶನ ನೀಡಿದರು.

ನಂತರ ಸಚಿವರು ಜಿಲ್ಲಾ ಆಸ್ಪತ್ರೆ ಬಳಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಅವರ ವಸತಿ ನಿಲಯದ ಹಿಂಭಾಗ ಇರುವ ಖಾಲಿ ಜಾಗಕ್ಕೆ ಭೇಟಿ ನೀಡಿ ಪರಿಶೀಲಿಸಿ ಇಲ್ಲಿ ಬಹು ಅಂತಸ್ತಿನ ವಸತಿ ನಿಲಯ ಸ್ಥಾಪಿಸಿ ಸುಮಾರು 600 ಮಹಿಳಾ ವೈದ್ಯಕೀಯ ವಿದ್ಯಾರ್ಥಿನಿಯರಿಗೆ ಹಾಸ್ಟೇಲ್ ವ್ಯವಸ್ಥೆ ಕಲ್ಪಿಸುವ ಕುರಿತಂತೆ ಯೋಜನೆ ತಯಾರಿಸಿ ಸಲ್ಲಿಸುವಂತೆ ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.
ಇದೇ ವೇಳೆ ಸಚಿವರು ಜಿಲ್ಲಾಸ್ಪತ್ರೆ ಆವರಣದಲ್ಲಿರುವ ವಿಧ್ಯಾರ್ಥಿ ನಿಲಯಗಳ ಸ್ಥಳ ಪರೀಶೀಲನೆ ಕೂಡ ನೆಡೆಸಿದರು.

ಸರ್ಕಾರಿ ಇಂಜಿನಿಯರಿಂಗ್ ಕಾಲೇಜಿಗೆ ಭೇಟಿ ನೀಡಿ ಪ್ರಾಂಶುಪಾಲರು ಮತ್ತು ಉಪನ್ಯಾಸಕರೊಂದಿಗೆ ಮಾಹಿತಿ ಪಡೆದ ಸಚಿವರು ಕಾಲೇಜಿನ ನವೀಕರಣಕ್ಕೆ ಪ್ರಸ್ತಾವನೆ ಸಲ್ಲಿಸಲು ತಿಳಿಸಿದರು.

ಕಾಲೇಜು ಪ್ರಾರಂಭವಾಗಿ 10 ವರ್ಷ ಕಳೆದರು ಇನ್ನೂ ಸ್ವಂತ ಲ್ಯಾಬ್ ಇಲ್ಲದೆ ಎಂ.ಸಿ.ಇ ಕಾಲೇಜನ್ನು ಅವಲಂಭಿಸಿರುವ ಬಗ್ಗೆ ವಿವರ ಪಡೆದ ಸಚಿವರು ಶೀಘ್ರವೇ ಕಾಲೇಜಿನಲ್ಲಿ ಪ್ರಯೋಗಾಲಯ ಪ್ರಾರಂಭಿಸುವ ಭರವಸೆ ನೀಡಿದರು.

ಇದೇ ಸಂದರ್ಭದಲ್ಲಿ ನಗರದ ಗಂಧದಕೋಠಿ ಆವರಣದಲ್ಲಿ ಸ್ಥಳ ಪರಿಶೀಲಿಸಿದ ಸಚಿವ ರೇವಣ್ಣ ಅವರು ಈಗಾಗಲೇ ಮಂಜೂರಾಗಿರುವ ಸರ್ಕಾರಿ ಮಹಿಳಾ ಪದವಿ ಕಾಲೇಜು ಕಟ್ಟಡವನ್ನು ತಕ್ಷಣವೇ ಪ್ರಾರಂಭಿಸಿ 2 ತಿಂಗಳಲ್ಲಿ ಮೊದಲ ಹಂತದ ಕಟ್ಟಡ ಕಾಮಗಾರಿ ಪೂರ್ಣಗೊಳಿಸಲು ಸೂಚಿಸಿದರು. ಹಾಲಿ 5 ಕೋಟಿ ರೂಪಾಯಿ ಹಣ ಲಭ್ಯವಿದ್ದು ಹೆಚ್ಚವರಿಯಾಗಿ 3.5 ಕೋಟಿ ರೂಪಾಯಿಗಳನ್ನು ಕೆಲವೇ ದಿನಗಳಲ್ಲಿ ಒದಗಿಸುವುದಾಗಿ ಸಚಿವರು ಹೇಳಿದರು.

ಗಂಧದ ಕೋಠಿಯಲ್ಲಿ ಅರಣ್ಯ ಇಲಾಖೆಗೆ ಸಂಬಂಧಿಸಿದ ಮರಗಳನ್ನು ವಿಲೇವಾರಿ ಮಾಡಿ ಕಟ್ಟಡ ತೆರವುಗೊಳಿಸಿಕೊಡುವಂತೆ ಅವರು ತಿಳಿಸಿದರು.

ಲೋಕೋಪಯೋಗಿ ಇಲಾಖೆ ಮುಖ್ಯ ಕಾರ್ಯದರ್ಶಿ ಕೃಷ್ಣರೆಡ್ಡಿ, ಮುಖ್ಯ ಕಾರ್ಯನಿರ್ವಹಕ ಇಂಜಿನಿಯರ್ ಶ್ರೀನಿವಾಸ್, ಅಧೀಕ್ಷಕ ಇಂಜಿನಿಯರ್ ರಾಜ್‍ಕುಮಾರ್ ರೆಡ್ಡಿ,ಮುಖ್ಯ ವಾಸ್ತು ಶಿಲ್ಪಿ ಸಾವಿತ್ರಿ, ಕಾರ್ಯಪಾಲಕ ಇಂಜಿನಿಯರ್ ಗುರುಲಿಂಗಪ್ಪ, ನಗರಸಭೆ ಅಧ್ಯಕ್ಷರಾದ ಅನಿಲ್‍ಕುಮಾರ್, ನಗರಸಭೆ ಆಯುಕ್ತರಾದ ಪರಮೇಶ್, ಕೃಷಿ ಇಲಾಖೆ ಜಂಟಿ ನಿರ್ದೇಶಕರಾದ ಮಧುಸೂದನ್, ಉಪ ಅರಣ್ಯ ಸಂರಕ್ಷಣಾಧಿಕಾರಿ ಸಿವರಾಮ್‍ಬಾಬು, ತೋಟಗಾರಿಕೆ ಇಲಾಖೆ ಉಪನಿರ್ದೇಶಕರಾದ ಸಂಜಯ್ ವಿವಿಧ ಇಲಾಖಾ ಅಧಿಕಾರಿಗಳು ಈ ಸಂದರ್ಭದಲ್ಲಿ ಹಾಜರಿದ್ದರು. (ಎನ್.ಬಿ)

Leave a Reply

comments

Related Articles

error: