ಮೈಸೂರು

ಸರ್ಕಾರ ಮರೆಯಲ್ಲಿರುವ ಕಲಾವಿದರತ್ತ ದೃಷ್ಟಿ ಹರಿಸಲಿ: ಡಾ. ಎಂ.ಜಿ.ಆರ್. ಅರಸ್ ಸಲಹೆ

ತೃಪ್ತಿ ಇಲ್ಲದೆ ಮಾಡುವ ಕೆಲಸಕ್ಕೆ ಯಾವ ಬೆಲೆಯೂ ಇಲ್ಲ. ಸರ್ಕಾರ ಮರೆಯಲ್ಲಿರುವ ಕಲಾವಿದರತ್ತ ದೃಷ್ಟಿ ಹರಿಸಬೇಕು ಎಂದು ಚುಟುಕು ಸಾಹಿತ್ಯ ಪರಿಷತ್ ಕೇಂದ್ರ ಸಮಿತಿಯ ಪ್ರಧಾನ ಸಂಚಾಲಕ ಡಾ. ಎಂ.ಜಿ.ಆರ್. ಅರಸ್ ಸಲಹೆ ನೀಡಿದರು.

ರಾಮಾನುಜ ರಸ್ತೆಯಲ್ಲಿರುವ ಮೈಸೂರು ಆರ್ಟ್ ಗ್ಯಾಲರಿಯಲ್ಲಿ ನಡೆದ ಸಾಧಕರೊಂದಿಗೆ ಸಂವಾದ ಕಾರ್ಯಕ್ರಮವನ್ನು ಡಾ. ಎಂ.ಜಿ.ಆರ್. ಅರಸ್ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಕಲಾವಿದರಿಗೆ ಸಿಗಬೇಕಾದ ಗೌರವಗಳು ಸಿಗುತ್ತಿಲ್ಲ. ಕಲಾವಿದರು ಕಲೆಗಾಗಿ ತಮ್ಮ ಜೀವನವನ್ನೇ ಮುಡಿಪಾಗಿಡುತ್ತಾರೆ. ಜೀವನದಲ್ಲಿ ತೃಪ್ತಿ ನೀಡುವಂತಹ ವೃತ್ತಿಯನ್ನು ಆಯ್ದುಕೊಳ್ಳಬೇಕು. ತೃಪ್ತಿಯಿಲ್ಲದ ವೃತ್ತಿಗೆ ಬೆಲೆಯಿಲ್ಲ. ಕಲಾವಿದರನ್ನು ಗುರುತಿಸಿ, ಗೌರವಿಸುವ ಕೆಲಸವಾಗಬೇಕು ಎಂದರು.

ಹಿರಿಯ ಕರಕುಶಲ ತಜ್ಞೆ ಬಿ.ಎಸ್. ಇಂದಿರಾ ಸಂವಾದದಲ್ಲಿ ಪಾಲ್ಗೊಂಡು ಮಾತನಾಡಿ, ಹೆಣ್ಣು ಮನಸು ಮಾಡಿದಲ್ಲಿ ಸಾಧನೆಯ ಮೆಟ್ಟಿಲನ್ನು ಏರಬಹುದು ಎಂದು ತಿಳಿಸಿದರು. ತನ್ನ ಸಾಧನೆಗೆ ಏನೆಲ್ಲಾ ಸ್ಫೂರ್ತಿಯಾಗಿತ್ತು ಎಂಬುದನ್ನು ಸ್ಮರಿಸಿಕೊಂಡರು.

ಮೈದಾಹಿಟ್ಟು, ಹುಣಸೆ ಬೀಜ, ಮೇಣದ ಬತ್ತಿ  ಬಳಸಿ ಮಾಡಿದ ಬೊಂಬೆಗಳು. ಶಿವ, ಲಕ್ಷ್ಮಿ ಗೊಂಬೆಗಳು ಮಹಾಭಾರತದ ಕೆಲ ಸನ್ನಿವೇಶಗಳನ್ನು ಹೇಳುವ ಬೊಂಬೆಗಳು ಪ್ರೇಕ್ಷಕರ ಮನಗೆದ್ದವು. ನೂರಕ್ಕೂ ಹೆಚ್ಚು ಬೊಂಬೆಗಳನ್ನು ಪ್ರದರ್ಶನಕ್ಕಿಡಲಾಗಿತ್ತು.

ಕಾರ್ಯಕ್ರಮದಲ್ಲಿ ಕರಕುಶಲ ಹಾಗೂ ರಂಗೋಲಿ ತಜ್ಞೆ ಕೆ.ಎಸ್. ಶ್ರೀಮತಿ ಅರುಣ್, ಹಿರಿಯ ರಂಗಕರ್ಮಿ ಐ.ಕೆ. ನರಸಿಂಹನ್, ಮೈಸೂರು ಆರ್ಟ್ ಗ್ಯಾಲರಿಯ ಕಾರ್ಯದರ್ಶಿ ಡಾ. ಜಮುನಾರಾಣಿ ಮಿರ್ಲೆ, ಖಜಾಂಚಿ ಪ್ರಭಾ ಶಿವಲಿಂಗಪ್ಪ ಮತ್ತಿತರರು ಉಪಸ್ಥಿತರಿದ್ದರು.

Leave a Reply

comments

Related Articles

error: