
ಮೈಸೂರು
ಬೇರೆ ರಾಜ್ಯಗಳ ಪಾಲ್ಗೊಳ್ಳುವಿಕೆ ಸಂಸ್ಕೃತಿ ವಿನಿಮಯಕ್ಕೆ ಸಹಾಯಕ: ಪ್ರೊ. ಹೃಷಿಕೇಶ್ ಸೇನಾಪತಿ
ಕ್ರೀಡಾಕೂಟದಲ್ಲಿ ಬೇರೆ, ಬೇರೆ ರಾಜ್ಯಗಳು ಪಾಲ್ಗೊಳ್ಳುವುದರಿಂದ ಸಂಸ್ಕೃತಿ ವಿನಿಮಯಕ್ಕೆ ಸಹಾಯಕವಾಗಲಿದೆ ಎಂದು ಹೊಸದಿಲ್ಲಿಯ ನ್ಯಾಷನಲ್ ಕೌನ್ಸಿಲ್ ಆಫ್ ಎಜುಕೇಷನಲ್ ರಿಸರ್ಚ್ & ಟ್ರೈನಿಂಗ್ನ ನಿರ್ದೇಶಕ ಪ್ರೊ.ಹೃಷಿಕೇಶ್ ಸೇನಾಪತಿ ಹೇಳಿದರು.
ಮೈಸೂರಿನಲ್ಲಿ ಇಂಟರ್ ಡೆಮಾನ್ಸ್ಟ್ರೇಷನ್ ಸ್ಕೂಲ್ ನ ಆರ್.ಐ.ಇ ಕ್ರೀಡಾಂಗಣದಲ್ಲಿ 21ನೇ ಕ್ರೀಡಾಕೂಟಕ್ಕೆ ಪ್ರೊ.ಹೃಷಿಕೇಶ್ ಸೇನಾಪತಿ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು ಕ್ರೀಡೆಯಲ್ಲಿ ಬೇರೆ, ಬೇರೆ ರಾಜ್ಯಗಳು ಪಾಲ್ಗೊಳ್ಳುವ ಮೂಲಕ ಸಂಸ್ಕೃತಿಯ ಜೊತೆಗೆ ಕಲಿಕೆಗೂ ಸಹಾಯವಾಗಲಿದೆ. ಆಟದಲ್ಲಿ ಸೋಲು-ಗೆಲುವು ಇದ್ದಿದ್ದೇ. ಅದನ್ನು ಸವಾಲಾಗಿ ಸ್ವೀಕರಿಸಿ ಎಂದರು.
ಪ್ರಾದೇಶಿಕ ಶಿಕ್ಷಣ ಸಂಸ್ಥೆಯ ಪ್ರಾಂಶುಪಾಲ ಪ್ರೊ.ಡಿ.ಜಿ.ರಾವ್ ,ಭುವನೇಶ್ವರದ ಅಖಿಲೇಶ್ವರ್ ಮಿಶ್ರ, ಅಜ್ಮೀರ್ದ ದಿಗ್ವಿಜಯ್ ಪಾಂಡೆ, ಭೂಪಾಲ್ ಹರೀಶ್ ಪ್ರಸಾದ್, ಮೈಸೂರು ಡೆಮಾನ್ಸ್ಟ್ರೇಷನ್ ಸ್ಕೂಲ್ನ ಮುಖ್ಯೋಪಾಧ್ಯಾಯರಾದ ಡಾ.ಕಲ್ಪನ ವೇಣುಗೋಪಾಲ್, ಕ್ರೀಡಾಕೂಟದ ಸಂಯೋಜಕ ಡಾ.ಸೋಮಶೇಖರ್ ಮತ್ತಿತರರು ಉಪಸ್ಥಿತರಿದ್ದರು.
ಭೂಪಾಲ್, ಭುವನೇಶ್ವರ್, ಅಜ್ಮೀರ್ ಮತ್ತು ಮೈಸೂರು ಸ್ಕೂಲ್ಗಳ ವಿದ್ಯಾರ್ಥಿಗಳು ವಿವಿಧ ಕ್ರೀಡೆಗಳಲ್ಲಿ ಸ್ಪರ್ಧಿಸಿದ್ದರು. ಕಲಾವಿದರು ಪ್ರಸ್ತುತಪಡಿಸಿದ ಜನಪದ ನೃತ್ಯಗಳಾದ ಕಂಸಾಳೆ, ಭರತನಾಟ್ಯ, ಪೂಜಾ ಕುಣಿತ, ಕೋಲಾಟದ ಸೊಬಗು ಕಾರ್ಯಕ್ರಮದಲ್ಲಿ ಪಾಲ್ಗೊಂಡವರನ್ನು ಮಂತ್ರಮುಗ್ಧರನ್ನಾಗಿಸಿತು.